|
Akkai Biography |
" Everyone is handicapped in some way "
ತನ್ನ ಎಂಟನೇ ವಯಸ್ಸಿನಲ್ಲಿ ಬಹಳ ಇಷ್ಟಪಟ್ಟು ಹುಡುಗಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದ ಜಗದೀಶ (ಅಕ್ಕಯ್) ಎಂಬ ಹುಡುಗನನ್ನು ಅವರ ಅಪ್ಪ ಕೋಪದಿಂದ ಧರಧರನೆ ಮನೆಗೆ ಎಳೆದೊಯ್ದು ದಂಡಿಸಿ, ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ನೀರನ್ನು ಸುರಿದು ಇನ್ನುಮೇಲೆ ಆ ಆಟವನ್ನು ಆ ಹುಡುಗಿಯರೊಂದಿಗೆ ಆಡಲೇಬಾರದು ಎಂಬ ಕ್ರೌರ್ಯ ಮೆರೆದರು. ಆದರೆ ಆತ ತಾನು ಹುಡುಗಿಯಾಗಬೇಕೆಂದೇ ಬಯಸಿದ್ದ.ಗೆಜ್ಜೆ ತೊಟ್ಟು, ಅಮ್ಮನ ಸೀರೆ ಉಟ್ಟು ಸಿಂಗಾರ ಮಾಡಿಕೊಳ್ಳುತ್ತಿದ್ದ. ಟವಲ್ ತೊಟ್ಟು ಉದ್ದ ಕೂದಲಿನವಳೆಂದು ನಟಿಸುತ್ತಿದ್ದ.
ಇದನ್ನು ನೆನಪಿಟ್ಟುಕೊಳ್ಳಿ ...
ಹಾಗೆಯೇ ತನ್ನ ಎಂಟನೇ ವಯಸ್ಸಿಗೆ ಕಣ್ಣುಗಳನ್ನು ಕಳೆದುಕೊಂಡ ಡೇವಿಡ್ ಹಾರ್ಟ್ ಮನ್ ಎಂಬ ಹುಡುಗ ಡೈನಿಂಗ್ ಟೇಬಲ್ ಮುಂದೆ ಕೂತು 'ಅಪ್ಪ ನಾನು ಡಾಕ್ಟರ್ ಆಗಬೇಕು' ಎಂದ. ಅದಕ್ಕೆ ಅವರಪ್ಪ ಫ್ರೆಡ್ ಹಾರ್ಟ್ ಮನ್ ' ನೀನು ಡಾಕ್ಟರ್ ಆಗಬಹುದು ಎಂದು ಯೋಚಿಸುತ್ತೀಯಾದರೆ ಖಂಡಿತಾ ಆಗುತ್ತೀಯ' ಎಂದು ಹೇಳಿದ. ಇಡೀ ಕುಟುಂಬವೇ ಅವನ ಬೆಂಬಲಕ್ಕೆ ನಿಂತಿತು. ಶಾಲೆಗಳಲ್ಲಿ ಅಡ್ಮಿಶನ್ ಕೊಡಲು ಹಿಂಜರಿದಿದ್ದ , ಮೆಡಿಕಲ್ ಸೀಟ್ ಕೊಡಲು ನಿರಾಕರಿಸಿದ್ದ ದಿನಗಳನ್ನೆಲ್ಲ ಮೆಟ್ಟಿನಿಂತ ಡೇವಿಡ್ ಹಾರ್ಟ್‌ಮನ್ ಎಂಬ 26 ವರ್ಷದ ಫಿಲೆಡೆಲ್ಫಿಯನ್ ಯುವಕನೊಬ್ಬನಿಗೆ 1975 ರ ಮೇ ತಿಂಗಳ ಒಂದು ದಿನ ಅಮೇರಿಕದ ಟೆಂಪಲ್ ಯೂನಿವರ್ಸಿಟಿಯು ಮೆಡಿಕಲ್ ಡಿಗ್ರಿಯನ್ನು ಪ್ರದಾನ ಮಾಡಿತು. ಆ ಮೂಲಕ ಆತ ಅಮೇರಿಕದ ಮೊದಲ Blind Doctor ಎನಿಸಿಕೊಂಡ. ಹತ್ತು ಸಾವಿರ ಜನ ನೆರೆದಿದ್ದ ಸಭಾಂಗಣದಲ್ಲಿ ಗೆಳೆಯರು , ಕುಟುಂಬಸ್ಥರು, ಪ್ರೊಫೆಸರ್ ಗಳು, ವಿವಿಯ ಸಿಬ್ಬಂದಿ ಎಲ್ಲರ ಕೈಗಳು ಚಪ್ಪಾಳೆ ತಟ್ಟುತ್ತಿದ್ದರೆ ಕಣ್ಣುಗಳಲ್ಲಿ ನೀರಾಡುತ್ತಿದ್ದವು.
ಡೇವಿಡ್ ತನ್ನ ಆಸೆಯನ್ನು ಹೇಳಿದಾಗ ಸಿಕ್ಕ ಪ್ರೋತ್ಸಾಹಕ್ಕೂ ಜಗದೀಶ ಎಂಬ ಹುಡುಗ ತಾನು ಹುಡುಗಿಯಾಗಬೇಕೆಂಬ ಆಸೆಯನ್ನು ಪರೋಕ್ಷವಾಗಿ ಹೊರಹಾಕಿದಾಗ ಸಿಕ್ಕ ಪ್ರತಿಕ್ರಿಯೆಗೂ ಎಷ್ಟು ವ್ಯತ್ಯಾಸವಿದೆ ಅಲ್ಲವೆ ? ಡೇವಿಡ್ ನ ಮಾತುಗಳಲ್ಲೇ ಹೇಳುವುದಾದರೆ ' Everyone is handicapped in some way ' ಆದರೂ ಹೆತ್ತವರಿಂದ ಅವನಿಗೆ ಸಿಕ್ಕ ಪ್ರೋತ್ಸಾಹಕ್ಕೂ ಜಗದೀಶ ಎಂಬ ಹುಡುಗ ನಾನು ನಿಜವಾಗಿಯೂ ಅಕ್ಕಯ್ ಆಗಲು ಹವಣಿಸುವದಕ್ಕೆ ಸಿಕ್ಕ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸದ ಅಂತರ ಬಹು ದೂರದ್ದು. ವಿಶೇಷ ಎಂದರೆ ಈ ಅಕ್ಕಯ್ ಕೂಡ ಶ್ವೇತ ಭವನದ ಅತಿಥಿಯಾಗಿ ಹೋಗಿ ಬಂದ ಸಾಧನೆ ಮಾಡಿದ್ದಾರೆ. ಅವರ ಸಾಧನೆ ನನಗೆ ಹಾರ್ಟ್ ಮನ್ ಗಿಂತ ಎತ್ತರದ್ದು ಎಂದೆನ್ನಿಸುತ್ತದೆ. ಆತ ಮೀರಬೇಕಾದದ್ದು ಕೇವಲ ಧೈಹಿಕ ಕೊರತೆಯೊಂದನ್ನು. ಆದರೆ ಅಕ್ಕಯ್ ಧೈಹಿಕ ಮತ್ತು ಸಾಮಜಿಕ ಸ್ವೀಕೃತಿ ( Social Sanction) ಎರಡನ್ನೂ ಜಯಿಸಬೇಕಿತ್ತು. She has been a bravo. ಅವರ ಜೀವನ ಕಥನ ಓದುವಾಗ ಇಡೀ ಪುಸ್ತಕದಲ್ಲಿ ಎಲ್ಲಾದರೂ ಒಂದು 'Stationary Space' ಸಿಗುತ್ತದಾ ಎಂದು ಬಹಳ ಕಾಯುತ್ತಿದ್ದೆ. ಆದರೆ ನಿರಂತರವಾಗಿ ಚಲಿಸುತ್ತಲೇ ಇದ್ದಾರೆ ಆಕೆ.
ಈ ಪುಸ್ತಕದಲ್ಲಿ ಇಡೀ LGBTQ ಸಮುದಾಯವೇ ನಮ್ಮ ಕಣ್ಮುಂದೆ ಬರುತ್ತದೆ. ಇದು ಅಕ್ಕಯ್ ನ ಕಥೆ ಮಾತ್ರವಲ್ಲ. ಹಾಗೆ ನೋಡಿದರೆ ಇದು ಇಡೀ ಸಮಾಜದ ಕಥೆ. ಏಕೆಂದರೆ ಇದು ಶೋಷಣೆ , ಅಸಮಾನತೆ , ಕಿರುಕುಳ ಮತ್ತು ಪುರುಷಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಲು ನಿಸರ್ಗ ಸಹಜ ಕಾರಣಗಳನ್ನು ನಮ್ಮ ಮುಂದಿಡುವ ಕಥೆ. ತಮ್ಮದಲ್ಲದ ತಪ್ಪಿಗೆ , ದೇಹದ ವಿಶಿಷ್ಟ ( ಅದೊಂದು ನ್ಯೂನ್ಯತೆ ಆಗಲಾರದು) ಸಂರಚನೆ ಮತ್ತು ಮಾನಸಿಕ ಸ್ಥಿತಿಯಿಂದಾಗಿ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವ ಒಂದು ಸಮುದಾಯದ ಕಥೆ. ಅಕ್ಕಯ್ ನಲ್ಲಿರುವ ವೈಚಾರಿಕತೆ ಎಷ್ಟು ಪ್ರಖರವಾದದ್ದು ಎಂದರೆ ' ತೃತೀಯ ಲಿಂಗಿಗಳು' ಎಂಬ ಪದ ಬಳಕೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಾ ಮೊದಲ ಹಾಗೂ ದ್ವಿತೀಯ ಲಿಂಗಗಳು ಯಾವುವು ಮತ್ತು ಯಾವ ಆಧಾರದಲ್ಲಿ ಅವು ಆ ಸ್ಥಾನವನ್ನು ಪಡೆಯುತ್ತವೆ ? ಎಂದು ಪ್ರಶ್ನಿಸುತ್ತಾರೆ. ಹೌದಲ್ಲವೆ ?
ಇನ್ನು ಗಂಡೂ ಅಲ್ಲದ , ಹೆಣ್ಣೂ ಅಲ್ಲದ ಅಥವಾ ಗಂಡಾಗಿ ಹೆಣ್ಣಾಗ ಬಯಸುವ , ಹೆಣ್ಣಾಗಿಯೂ ಗಂಡಾಗ ಬಯಸುವ ಒಂದು ವರ್ಗ ಇಂದು ನಿನ್ನೆಯದೇನಲ್ಲ ಎಂಬುದನ್ನು ರಾಮಾಯಣ ,ಮಹಾಭಾರತ ಮತ್ತು ಇತಿಹಾಸಗಳಿಂದ ಉದಾಹರಿಸುವುದನ್ನು ನೋಡಿದರೆ ನನಗೆ ನಮ್ಮ ಭಾಷಾ ಲಿಂಗತ್ವದ ಬಗ್ಗೆ ಅನುಮಾನ ಮೂಡುತ್ತದೆ. ಹಿಂದಿಯನ್ನೂ ಒಳಗೊಂಡಂತೆ ಕೆಲ ಭಾಷೆಗಳಲ್ಲಿ ಕೇವಲ ಎರಡೇ ಲಿಂಗಗಳಿವೆ. ವಸ್ತುಗಳನ್ನೂ ಸ್ತ್ರೀಲಿಂಗ ,ಪುಲ್ಲಿಂಗಗಳಾಗಿ ವಿಭಾಗಿಸಲಾಗುತ್ತದೆ. ಇಂಗ್ಲಿಷ್ ಭಾಷೆಗೂ ಇಂಥ ಗ್ರಾಮ್ಯಾಟಿಕಲ್ ಜೆಂಡರ್ ಒಂದು ಕಾಲದಲ್ಲಿ ಇತ್ತು. ಆಮೇಲೆ ಅದನ್ನು ಕೈ ಬಿಡಲಾಯಿತು. Feminine ಮತ್ತು Masculine ಅಲ್ಲದ್ದನ್ನು ಗುರುತಿಸುವ ಅವಕಾಶವನ್ನು ಭಾಷೆಯೇ ಮೊದಲು ಕಳೆದು ಬಿಡುತ್ತದೆ. ವೈವಿಧ್ಯತೆಯನ್ನು ಗೌರವಿಸುವುದನ್ನು ಒಂದು ಸಮಾಜವಾಗಿ ನಾವು ಕಲಿಯದೇ ಇರುವುದು ನೋವಿನ ಸಂಗತಿ.
' ಅವನು ಹೆಣ್ಣಿಗ ' ಎಂದಾಗ ಮತ್ತು ' ಅವಳು ಗಂಡು ಬೀರಿ' ಎಂದಾಗ ಎರಡೂ ಸಂದರ್ಭದಲ್ಲಿ 'ಹೆಣ್ಣ' ನ್ನೇ ದೂಷಿಸುತ್ತಿರುವುದು ಸ್ಪಷ್ಟ ಎಂಬುದನ್ನು ಸೂಕ್ಷ್ಮವಾಗಿ ನಾವು ಅರಿಯಬೇಕು. ಹಾಗೂ ಅದು ಅನೇಕ ಸಮಯದಲ್ಲಿ ' ಅಮ್ಮ, ಅಕ್ಕ, ಅತ್ತೆ, ತಂಗಿ , ಅಜ್ಜಿ' ಇವರುಗಳಿಂದಲೇ ಆಗುತ್ತದೆಂಬುದೂ ಅಷ್ಟೆ ಸತ್ಯ.
' Sex worker ' ಎಂಬ ಪದ ನಮ್ಮ ಕಿವಿಗೆ ಅಶ್ಲೀಲವಾಗಿ ಕೇಳುತ್ತದೆ ಎಂದಾದರೆ ಅವರಿಗೆ ನಾವು ಬೇರ್ಯಾವ ಕೆಲಸಗಳನ್ನು ನೀಡಲು ತಯಾರಿದ್ದೇವೆ ಎಂಬ ಆತ್ಮವಿಮರ್ಶೆ ಅತ್ಯಗತ್ಯ. ವೇಶ್ಯಾವಾಟಿಕೆ ಎಂಬ ಪದಕ್ಕೂ ಲೈಂಗಿಕ ಕಾರ್ಯಕರ್ತೆ(ರ್ತ) ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ನಾವು ಗಮನಿಸಬೇಕು. ಬೇರೆಲ್ಲಾ ವಿಷಯಗಳಿಗೆ ಈ ಸಮುದಾಯವನ್ನು ತಿರಸ್ಕಾರ ಮತ್ತು ಬಹಿಷ್ಕಾರದಂತೆ ನೋಡುವ ಅದೇ ಸಮಾಜದ ಜನ ಲೈಂಗಿಕ ತೃಷೆಗಾಗಿ ಅವರ ಬಳಿ ಹೋಗುವುದು ಎಂಥ ವೈರುಧ್ಯ ಅಲ್ಲವೆ ? ಹಾಗಾಗಿಯೇ ನನಗನ್ನಿಸುತ್ತದೆ ಮನುಷ್ಯ ವಿಕಾಸವನ್ನು ನಾವು ಸಂಪೂರ್ಣವಾಗಿ ಇನ್ನೂ ಅರಿತಿಲ್ಲವೇನೋ ಎಂದು. ಸೆಕ್ಸ್ ಎಂಬುದು ಮೂಲತಃ ಮನುಷ್ಯನನ್ನು ಇತರೆಲ್ಲ ಜೀವಿಗಳಂತೆಯೇ ಪರಿಗಣಿಸಬೇಕೆಂದು ಮನವರಿಕೆ ಮಾಡುತ್ತದೆ. ಆದರೆ ಅನೇಕ ಸಾಮಾಜಿಕ ಕಟ್ಟಳೆಗಳನ್ನು ವಿಧಿಸಿಕೊಂಡಿರುವ ಮನುಷ್ಯ ತನ್ನ ಮೇಲೆ ಮಡಿವಂತಿಕೆಯನ್ನು ಹೇರಿಕೊಂಡಿದ್ದಾನಷ್ಟೆ. ಲೈಂಗಿಕ ವೃತ್ತಿಯಲ್ಲಿರುವಾಗ ಬಹಳಷ್ಟು ಮಂದಿ ಒಳ್ಳೆಯವರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಕೆಲವರು ಈಗಲೂ ಒಳ್ಳೆಯ ಸ್ನೇಹಿತರಾಗಿದ್ದಾರೆ ಎನ್ನುತ್ತಾರೆ ಅಕ್ಕಯ್.
ಇಂದು ಅಕ್ಕಯ್ ಏನಾಗಿದ್ದಾರೋ ಅದಕ್ಕೆ ಅವರಲ್ಲಿರುವ 'ಹೋರಾಟಗಾರ್ತಿ'ಯೇ ಕಾರಣ. ಹಿಜ್ರಾ ಸಮುದಾಯದ ಒಳಗೇ ಅವರು ಅನೇಕ ಬಾರಿ ಪ್ರತಿಭಟಿಸಿದ್ದಾರೆ. ಯಾವುದು ಶೋಷಣೆಗೆ ಒಳಗಾದ ಸಮುದಾಯ ಎನ್ನುತ್ತೇವೋ ಅಲ್ಲಿಯೂ ಇರುವ ಸಂಪ್ರದಾಯದ ಯಜಮಾನಿಕೆಯನ್ನು ಅವರು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಶೋಷಣೆ ಮತ್ತು ಅಸಮಾಧಾನವನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ. ಹಾಗಾಗಿಯೇ ತಮ್ಮ ಗಂಡನ ಹಿಂಸೆ ,ಕಿರುಕುಳದಿಂದಲೂ ಮುಕ್ತರಾಗಲು ಬಯಸುತ್ತಾರೆ.
"ನಾವು ಚಪ್ಪಾಳೆ ತಟ್ಟಿ ಒಂದು ರೂಪಾಯಿ ಭಿಕ್ಷೆ ಬೇಡುವುದು ನಮ್ಮಲ್ಲಿ ಹಣವಿಲ್ಲದ ಏಕೈಕ ಕಾರಣಕ್ಕಾಗಿ. ಹಣವನ್ನು ಬೇಡಿ ಪಡೆಯುವುದು ನಮ್ಮ ಹಕ್ಕು. ಇದು ಸಮಾಜದ ಮುಂದೆ ಪ್ರತಿಭಟಿಸುವ ವಿಧಾನವೂ ಹೌದು" ಎನ್ನುವ ಅಕ್ಕಯ್, ಅವರ ಮೂಲಭೂತ ಹೋರಾಟ ಇರುವುದು ಮಾನವ ಹಕ್ಕುಗಳಿಗಾಗಿ. ನಿಜ , ಅವರು ತಟ್ಟುವ ಚಪ್ಪಾಳೆ ಸದ್ದು ಸಮಾಜದ ವಿರುದ್ಧ ಅವರ ಪ್ರತಿಭಟನೆಯೇ ಆಗಿದೆ. 2009 ರ ಜುಲೈ 2ರ ದೆಹಲಿ ಹೈಕೋರ್ಟಿನ ತೀರ್ಪು ಖಾಸಗಿಯಾಗಿ ವಯಸ್ಕರ ನಡುವೆ ಸಹಮತದ ಸೆಕ್ಸ್ ಶಿಕ್ಷಾರ್ಹವಲ್ಲ ಎಂದು ಹೇಳಿತು. ಅಂದು ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನ ಎಂದು ಹೇಳುವ ಅಕ್ಕಯ್ ಇಂಥ ಕ್ರಿಯೆಯನ್ನು ಅಪರಾಧವೆಂದು ಪತಿಗಣಿಸುತ್ತಿದ್ದ ಸೆಕ್ಷನ್ 377 ನ್ನು ಮೆಕಾಲೆ ಜಾರಿಗೊಳಿಸಿದ ವಸಾಹತುಶಾಹಿ ನೆಲೆಯದ್ದು ಎನ್ನುತ್ತಾರೆ. ಸಂತಾನೋತ್ಪತ್ತಿಯನ್ನು ಹೊರತುಪಡಿಸಿಯೂ ಲೈಂಗಿಕತೆಯೆನ್ನುವುದು ಅನ್ಯೋನ್ಯತೆ , ಸಂಬಂಧಗಳು ,ಕೆಲಸ , ಅಧಿಕಾರ/ಶಕ್ತಿ ...ಹೀಗೇ ಬಹುರೂಪಿಯಾದದ್ದು ಎಂಬ ಅವರ ಮಾತು ಎಷ್ಟು ಸತ್ಯ ! ಎಷ್ಟೋ ಜನ ಕಾವಿ ತೊಟ್ಟು ಸಂಸಾರ ತ್ಯಜಿಸಿದ ಸನ್ಯಾಸಿಗಳು ಖಾಸಗಿಯಾಗಿ ಸೆಕ್ಸ್ ನಲ್ಲಿ ಭಾಗಿಯಾದ ಪ್ರಕರಣಗಳು ನಮ್ಮ ಮುಂದಿರುವಾಗ ಅದನ್ನು ಕೇವಲ ಸಂತಾನೋತ್ಪತ್ತಿಗೆ ಬಳಸಬೇಕು ಎನ್ನುವುದು ಎಷ್ಟು ಅತಾರ್ಕಿಕವಾದುದಲ್ಲವೆ ? ಈ ನಿಟ್ಟಿನಲ್ಲಿ ಅವರ ಹೋರಾಟದ ಹಾದಿ ಮೆಚ್ಚುವಂತದ್ದು.
ಅಮೇರಿಕಾದ ಪೊಲೀಸ್ ವ್ಯವಸ್ಥೆಗೆ ನೀಡಲಾಗಿರುವ ಅಪರಿಮಿತ ಅಧಿಕಾರವನ್ನು ಅಕ್ಕಯ್ ಆತಂಕದಿಂದ ನೋಡುತ್ತಾರೆ. ಸಾರ್ವಜನಿಕರ ಕೈಯಲ್ಲೂ ಬಂದೂಕು ಕೊಟ್ಟಿರುವ ಅಮೇರಿಕಾದಲ್ಲಿ LGBTQ ಸಮುದಾಯ ಭಯದಿಂದಲೇ ಇದೆ. ಇದು ಹೆಚ್ಚೆಚ್ಚು ಅಮೇರಿಕನ್ನರನ್ನು ನಾವು ಭೇಟಿ ಮಾಡಿದಾಗ ತಿಳಿಯುತ್ತದೆ ಎನ್ನುವ ಅವರು ಜಗತ್ತಿನ ಎಲ್ಲಾ ರಾಷ್ಟ್ರಗಳೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೇ. ಅಮೇರಿಕ , ಭಾರತ, ಜಪಾನ್ ಹೀಗೆ ಎಲ್ಲಾ ದೇಶಗಳಲ್ಲೂ ಸಮಸ್ಯೆಗಳಿವೆ ಎನ್ನುವ ಅವರ ನಿಲುವನ್ನು ಒಪ್ಪದೇ ಇರಲಾಗದು.
ಅಕ್ಕಯ್ ತುಂಬಾ ಚೆಂದ ಸೀರೆ ಉಡುತ್ತಾರೆ ಎಂಬ ಕಾರಣಕ್ಕೆ ಅವರು ಸೀರೆ ಬ್ರಾಂಡಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಇದೇ ಸೀರೆಯ ಕಾರಣಕ್ಕೆ ತಾನು ಅನುಭವಿಸಿದ ಯಾತನೆಯನ್ನೂ ನೆನಪಿಸಿಕೊಳ್ಳುತ್ತಾರೆ. ಸೀರೆ ಉಟ್ಟರೆ ಹೊಡೆಯಲು ಬರುತ್ತಿದ್ದ ಅಪ್ಪ ಅಮ್ಮ ನಂತರದಲ್ಲಿ ಜೊತೆಯಾಗಿ ನಿಲ್ಲುವಂತೆ ಮಾಡುತ್ತಾರೆ ಅವರು. ಹೆಣ್ಣಾಗಬೇಕೆಂಬ ತಹತಹ ಈಡೇರಿದ ಮೇಲೆ ಹೆಣ್ಣು ಎದುರಿಸುವ ಕೌಟುಂಬಿಕ ಕಟ್ಟಳೆಗಳನ್ನೂ ಆಕೆ ಎದುರಿಸುತ್ತಾರೆ. ಇಲ್ಲಿ ಸಂಚಾರಿ ವಿಜಯ್ ಅಭಿನಯದ ನಾನು ಅವನಲ್ಲ ಅವಳು ಚಿತ್ರದ ' ಹೆಣ್ಣಾಗಿ ಹುಟ್ಟೋದು ಸುಲಭ. ಆದ್ರೆ ಹುಟ್ಟಿದ ಮೇಲೆ ಹೆಣ್ಣಾಗೋದು ಬಹಳ ಕಷ್ಟ' ಎಂಬ ಮಾತನ್ನು ನೆನೆಯಬೇಕು. ಅಕ್ಕಯ್ ಜೀವನವಿಡೀ ಈ ಪುರುಷಪ್ರಧಾನ ಶೋಷಣೆಯನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಿದ್ದಾರೆ. ಅವರು History ಅಂದರೆ His- Story ( ಆತನ ಕಥೆ) ಯಾಗಿ ಮಾತ್ರ ಕಾಣಬೇಡಿ. ಅದನ್ನು Her- Story ಎಂದೂ ಕಾಣುವ ಅಗತ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ. ಅದನ್ನು ಆಗುಮಾಡಿದ ಬಹುರೂಪಿ ಪ್ರಕಾಶನವೂ ಅಭಿನಂದನಾರ್ಹ.
ಅಕ್ಕಯ್ ಜೀವನ ಕಥನ ನಮ್ಮಲ್ಲಿ ಒಂದು ತಲ್ಲಣ ತಂದೊಡ್ಡಿ ನಮ್ಮನ್ನು ಮತ್ತಷ್ಟು ವೈಚಾರಿಕವಾಗಿ ಆಲೋಚಿಸಲು ಹಚ್ಚುತ್ತದೆ. ಸಿದ್ಧ ಮಾದರಿಗಳ ಆಚೆ ನಿಂತು ನಮ್ಮ ಸುತ್ತ ನೋಡಲು ಪ್ರೇರೇಪಿಸುತ್ತದೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಗೌರವಿಸಲು ಹೇಳಿ ಕೊಡುತ್ತದೆ. ಪೊಲೀಸರಿಂದ ದೂಷಣೆ , ಕಿರುಕುಳ ಎದುರಿಸಿದ ಅವರು ಪೊಲೀಸ್ ಅಕಾಡೆಮಿಗೆ ತರಬೇತಿ ನೀಡಲು ಹೋಗುವ ದಿನಗಳನ್ನು ನಮ್ಮ ಮುಂದಿಡುತ್ತದೆ.
ಪುಸ್ತಕದ ಕೊನೆಯ ಪುಟದಲ್ಲಿ ಅಕ್ಕಯ್, ಶೋಷಿತರ ರಂಗಭೂಮಿ ( Theatre of the oppressed )ಯನ್ನು ವಿನ್ಯಾಸ ಗೊಳಿಸಿದ ಅಗಸ್ತೋ ಬೋಲ್ ನ ಮಾತೊಂದನ್ನು ಮುಂದಿಡುತ್ತಾರೆ.
" ನೀವು ಪ್ರೇಕ್ಷಕರಂತೆ ನಟಿಸುತ್ತೀರಿ. ನೀವೇ ನಟರಾದಾಗ ನೀವು ಕಥೆಯನ್ನು ಹೇಳಲು ಶುರು ಮಾಡುತ್ತೀರಿ "
ಪುಸ್ತಕ ಓದಿ ಮುಗಿಸುತ್ತಿದ್ದ ಹೊತ್ತಲ್ಲಿ ಮೂರುವರೆ ವರ್ಷದ ನನ್ನ ಮಗ ಬಂದು ಪುಸ್ತಕದ ಮುಖಪುಟವನ್ನು ಮತ್ತು ಒಳ ಪುಟವನ್ನು ಎರೆಡೆರಡು ಬಾರಿ ನೋಡಿದ. ಒಳ ಪುಟಗಳ ಹೆಡ್ಡರ್ ನಲ್ಲಿರುವ ಅಕ್ಕಯ್ ರನ್ನು ತೋರಿಸಿ, ಮುಖಪುಟದ ಅಕ್ಕಯ್ ರನ್ನೂ ತೋರಿಸಿ
' ಪಪ್ಪ, ಇವರು ಅವರೇನಾ ?' ಅಂದ. ' ಹೌದು,ಅವರೇ' ಅಂದೆ. ಹೆಡ್ಡರ್ ನ ಪೋಟೋ ತೋರಿಸುತ್ತ, ' ಅಲ್ಲ, ಇವ್ರು ಹುಡುಗ ಅಲ್ವಾ! ಹುಡುಗನ ಥರ ಕಟಿಂಗ್ ಇದೆ ' ಎಂದು ಮತ್ತೆ ಹೇಳಿದ. ಅದಕ್ಕೆ ನಾನು ' ಹಾಗೇನಿಲ್ಲಪ್ಪ, ಅವರು ಇದೇ ಆಂಟಿ. ಕಟಿಂಗ್ ಹಾಗೆ ಮಾಡಿಸಿದ್ದಾರೆ ಅಷ್ಟೆ. ಅವರೂ ಹಾಗೆ ಹೇರ್ ಕಟ್ ಮಾಡಿಸಿಕೊಳ್ಳಬೋದು ' ಅಂದೆ. ನನ್ನ ಮಾತನ್ನು ಅವನು ನಂಬಿದ ಹಾಗೆ ಕಂಡ. ಅಕ್ಕಯ್ ಪುಸ್ತಕ ನನ್ನಲ್ಲಿ ಮೂಡಿಸಿದ ಅರಿವು ಇಷ್ಟೆ. ಲಿಂಗಾಧಾರಿತವಾದ ತರತಮಗಳನ್ನು ಮೂಡಿಸುವಂಥ ಒಂದು ಮಾತನ್ನೂ ನಾವು ಮನೆಯಲ್ಲಿ ಆಡಬಾರದು. ನಮ್ಮ ನಮ್ಮ ಮನೆಗಳನ್ನು ನಾವು ಸಮಾಜಮುಖಿಯಾಗಿ ರೂಪಿಸುವುದೇ ದೊಡ್ಡ ದೇಶಪ್ರೇಮವಾಗುತ್ತದೆ. ಆಗ ಮಾತ್ರ ನಾವು ಅಕ್ಕಯ್ ಮುಖ ಮಾಡಿರುವ " ನಾಳೆಗಳ " ನ್ನು ಕಾಣಲು ಸಾಧ್ಯವಾಗಬಹುದೇನೊ... ಇಲ್ಲವಾದಲ್ಲಿ ನಾವು ಪ್ರೇಕ್ಷಕರಂತೆ ನಟಿಸುತ್ತಲೇ ಇರುತ್ತೇವಷ್ಟೆ...
ಅಷ್ಟಕ್ಕೂ ನಾವು ಮರೆಯಲೇಬಾರದು ;
" Everyone is handicapped in some way "
-ಶಿವಕುಮಾರ ಮಾವಲಿ