22 Aug 2018

ಅನಂತ ಯಾನ

GET U R ANANTHAMURTHY BOOK PDF : HERE

 ನಿಚ್ಚಳವಾದ ದೃಷ್ಟಿಕೋನ, ಸಣ್ಣದೊಂದು ಹಠ, ಅನ್ನಿಸಿದ್ದನ್ನು ಹೇಳಿಯೇ ತೀರುತ್ತೇನೆ ಎಂಬ ಛಲ, ಧ್ಯಾನಿಸದೇ ಏನನ್ನೂ ಬರೆಯಲಾರೆ ಎಂಬ ವ್ರತ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ ಎಂಬ ವಿನಯ, ಹೊಸ ವಿಚಾರಗಳ ಕಡೆಗೆ ತೆರೆದ ಬಾಗಿಲು, ಕೊಳೆನಿಂತ ನೀರು ಕೂಡ ಯಾವುದೋ ಕಾಲದಲ್ಲಿ ಪವಿತ್ರ ಕಲ್ಯಾಣಿ ಆಗಿತ್ತೇನೋ ಎಂಬ ಗುಮಾನಿ, ಸೂರ್ಯನ ಕುದುರೆಯ ತನ್ಮಯತೆಯಲ್ಲಿ ಎಲ್ಲವನ್ನೂ ನೋಡಬಲ್ಲ ಏಕಾಗ್ರತೆ, ವಾದಕ್ಕೆ ನಿಂತರೆ ಮಾತಲ್ಲೇ ಎದುರಿಗಿದ್ದವರನ್ನು ಕಟ್ಟಿಹಾಕುವ ಚಾಣಾಕ್ಷತನ, ಅದರ ಬೆಂಬಲಕ್ಕೆ ನಿಂತ ಅಪಾರ ಓದು, ಎಲ್ಲವನ್ನೂ ಹೊಸದಾಗಿ ನೋಡಬಲ್ಲ ಒಳನೋಟ, ನೋವಲ್ಲೂ ಕ್ರಿಯಾಶೀಲವಾಗಿದ್ದ ಮನಸ್ಸು.


 ಅವರು ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. ಕನ್ನಡ ಸಾಹಿತ್ಯಲೋಕವನ್ನಷ್ಟೇ ಅಲ್ಲ, ಅವರು ಕನ್ನಡದ ಮನಸ್ಸನ್ನು ಮೀಟಿದವರು. ನೋಡುವ ಕ್ರಮವನ್ನು ಬದಲಾಯಿಸಿದವರು. ಕನ್ನಡಕ್ಕೆ ಹೊಸ ಚಿಂತನೆಯನ್ನು ಕೊಟ್ಟವರು. ವಾಗ್ವಾದಗಳಿಗೆ ಮುಖಾಮುಖೀಯಾದವರು. ಎಲ್ಲವನ್ನೂ ಎದುರಿಸಿ ಏಕಾಂಗಿಯಾಗಿ ನಿಂತವರು. ಅವರಷ್ಟು ವಿವಾದಗಳಿಗೆ ತುತ್ತಾದವರು ಮತ್ತೂಬ್ಬರಿಲ್ಲ. ಅವರನ್ನು ಇಬ್ಬಂದಿತನದ ಮೂರ್ತಿ, ದ್ವಂದ್ವಗಳ ಮೊತ್ತ, ಪದೇ ಪದೇ ನಿಲುವುಗಳನ್ನು
ಬದಲಾಯಿಸುವ ಮಾತುಗಾರ, ಪ್ರಚಾರ ಪ್ರಿಯ ಎಂದು ಕರೆದವರಿದ್ದಾರೆ. ಅವರನ್ನು ವಿರೋಧಿಸಿ ಮಾತಾಡಿದವರಿದ್ದಾರೆ. ಅವರ ಮೇಲೆ ದ್ವೇಷ ಕಾರಿದವರಿದ್ದಾರೆ. ಆದರೆ ಅವರೆಲ್ಲರನ್ನೂ ಅನಂತಮೂರ್ತಿ ಪ್ರಭಾವಿಸಿದ್ದರು.


ನವ್ಯ ಸಾಹಿತ್ಯ ಉದಯವಾಗುತ್ತಿದ್ದ ಕಾಲದಲ್ಲಿ ಅಡಿಗರ ಜೊತೆಗಾರನಾಗಿ ಸಾಹಿತ್ಯ ಜಗತ್ತಿಗೆ ಕಾಲಿಟ್ಟವರು ಅನಂತಮೂರ್ತಿ. ತಮ್ಮ ಉಜ್ವಲವಾದ ಅಧ್ಯಾಪನ ಪ್ರತಿಭೆಯಿಂದ ವಿದ್ಯಾರ್ಥಿಗಳನ್ನು ಸೆಳೆದ ಅನಂತಮೂರ್ತಿ, ನವ್ಯ ಸಾಹಿತ್ಯದ ಹರಿಕಾರರೂ ಹೌದು. ಬರ್ಮಿಂಗ್‌ಹಮ್‌ನಲ್ಲಿ ಕೂತು ಅವರು ಬರೆದ ಮೊದಲ ಕಾದಂಬರಿ ಸಂಸ್ಕಾರ, ಭಾರತೀಯ ಪರಂಪರೆ, ಗೊಡ್ಡುನಂಬಿಕೆ ಮತ್ತು ಆಚರಣೆಗಳನ್ನು ಪ್ರಶ್ನಿಸುತ್ತಲೇ ಅದಮ್ಯ ಸೃಜನಶೀಲತೆಯ ಸೆಲೆಗಳನ್ನು ಹುಡುಕಾಡಿದ ಕೃತಿ. ಅದು ಚಲನಚಿತ್ರವಾಗಿಯೂ ಹೆಸರು ಮಾಡಿತು. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ್ದು ಕೂಡ ಸಂಸ್ಕಾರವೇ. ತಮ್ಮ ಬರಹದ ಮೂಲಕ ನಮ್ಮ ನಂಬಿಕೆ, ಆಚರಣೆ ಮತ್ತು ವ್ಯವಸ್ಥೆಗಳ ಬೇರುಗಳನ್ನು ಕೆದಕುತ್ತಾ, ಚಿಂತನೆಯ ಹೊಸಗಾಳಿಯನ್ನು ಪಸರಿಸುತ್ತಾ ಬಂದ ಅನಂತಮೂರ್ತಿ, 'ಪ್ರಜ್ಞೆ ಮತ್ತು ಪರಿಸರ'ದಂಥ ಪ್ರಬಂಧಗಳ ಮೂಲಕ ಕನ್ನಡ ಸಾರಸ್ವತ ಲೋಕದ ಅಂತಃಸ್ಸತ್ವವನ್ನು ಬಗೆದಿಟ್ಟರು. ಗೋಪಾಲಕೃಷ್ಣ ಅಡಿಗರ ಶ್ರೀರಾಮನವಮಿಯ ದಿವಸ ಕವಿತೆಗೆ ಅವರು ಬರೆದ ವಿಮರ್ಶೆ, ಅಡಿಗರ ಕಾವ್ಯ ಜಗತ್ತನ್ನು ವಿಸ್ತಾರಗೊಳಿಸಿದ್ದೂ ನಿಜವೇ.


ಕನ್ನಡದ ಹಿತ್ತಿಲು ಮತ್ತು ಜಗಲಿ ಎಂಬ ಪರಿಕಲ್ಪನೆ, ಕನ್ನಡದ ಮೂರು ಹಸಿವುಗ ಳಾದ ಅಕ್ಷರದ ಹಸಿವು, ಆಧ್ಯಾತ್ಮಿಕತೆಯ ಹಸಿವು ಮತ್ತು ಸಮಾನತೆಯ ಹಸಿವಿನ ಬಗ್ಗೆ ಅವರು ಪ್ರಸ್ತಾಪಿಸಿದ್ದು, ತಮ್ಮ ಕತೆಗಳ ಮೂಲಕ ಕನ್ನಡ ಕಥಾ ಜಗತ್ತನ್ನು ಶ್ರೀಮಂತಗೊಳಿಸಿದ್ದು, ಕನ್ನಡ ಸಾಹಿತ್ಯಕ್ಕೆ ಹೊಸ ಚಲನೆ ದೊರಕುವಂತೆ ಮಾಡಿದ್ದು, ರುಜುವಾತು ಪತ್ರಿಕೆಯ ಮೂಲಕ ಕನ್ನಡ ಮನಸ್ಸನ್ನು ಜಾಗೃತಗೊಳಿಸಿದ್ದು- ಹೀಗೆ ಅವರ ಸಾಧನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 
ಸಂಪ್ರದಾಯಬದ್ಧ ಪರಿಸರದಲ್ಲಿ ಹುಟ್ಟಿ ಬೆಳೆದ ಅನಂತಮೂರ್ತಿ ಅವರ ಬಹುತೇಕ ಕತೆ, ಕಾದಂಬರಿಗಳ ಭೂಮಿಕೆ ತೀರ್ಥಹಳ್ಳಿ ಮತ್ತು ಆಸುಪಾಸಿನ ಪರಿಸರ. ಅವರ ಇತ್ತೀಚಿನ ಕತೆ ಪಚ್ಚೆ ರೆಸಾರ್ಟು ಹೊಸಗಾಲದ ಅಭಿವೃದ್ಧಿಯ ಅಣಕವನ್ನು ಎತ್ತಿ ತೋರಿಸಿತ್ತು. ಅನೇಕ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದ ಅನಂತಮೂರ್ತಿ ಅವರು, ಗಣಿಗಾರಿಕೆಯ ವಿರುದ್ಧ ಹೋರಾಡಿದರು, ತುಂಗಾಮೂಲವನ್ನು ರಕ್ಷಿಸುವುದಕ್ಕೆ ಚಳವಳಿ ಮಾಡಿದರು, ಅಭಿವೃದ್ಧಿ ನಮಗೆ ಹೇಗೆ ಮಾರಕ ಮತ್ತು ಸರ್ವೋದಯವೇ ಹೇಗೆ ನಮಗೆ ಪೂರಕ ಅನ್ನುವುದನ್ನು ಮತ್ತೆ ಮತ್ತೆ ಪ್ರತಿಪಾದಿಸಿದರು. ಮಹಾತ್ಮಗಾಂಧೀಜಿಯೇ ನಮಗೆ ಆದರ್ಶ ಎಂದು ವಾದಿಸಿದರು. ಗಾಂಧೀವಾದ ಅವರ ಎಲ್ಲಾ ಬರಹಗಳನ್ನೂ ಆವರಿಸಿದ್ದನ್ನು ಕಾಣಬಹುದು.


ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಅನಂತಮೂರ್ತಿ ಅವರು ಕನ್ನಡದ ಮೊದಲ ರಾಜಕೀಯ ಕಾದಂಬರಿ ಬರೆದವರು. ಗೋಪಾಲಗೌಡರ ಬದುಕನ್ನಿಟ್ಟುಕೊಂಡು ಅವರು ಬರೆದ 'ಅವಸ್ಥೆ' ರಾಜಕಾರಣಿಯೊಬ್ಬನ ತವಕ ತಲ್ಲಣಗಳ ದಾಖಲೆಯಂತಿತ್ತು. ಭಾರತೀಪುರ ಕಾದಂಬರಿಯಲ್ಲಿ ಅವರು ಅಸ್ಪೃಶ್ಯತೆಯ ವಿರುದ್ಧ, ಧರ್ಮದ ಸಂಕೇತಗಳ ವಿರುದ್ಧ ವಿಚಾರವಾದಿಯೊಬ್ಬನ ಹೋರಾಟವನ್ನು ದಾಖಲಿಸಿದರು. ಮೊನ್ನೆ ಮೊನ್ನೆ ಚಿಕ್ಕ ಹುಡುಗನ ಹಾಗೆ ಬ್ರೆಕ್ಟ್ ಕವಿತೆಗಳನ್ನು ಅನುವಾದಿಸುತ್ತಾ ಕೂತಿದ್ದರು.


ಎಲ್ಲಾ ಬರಹಗಳಾಚೆಗೂ ಅನಂತಮೂರ್ತಿ ಅವರೊಳಗೊಬ್ಬ ಮುಗ್ಧನಿದ್ದ. ಯಾವತ್ತೂ ಅವರು ಲೆಕ್ಕಾಚಾರ ಹಾಕಿ ಮಾತಾಡಿದವರಲ್ಲ. ಆ ಕ್ಷಣದ ಸತ್ಯ ಅವರನ್ನು ಮಾತಾಡಿಸುತ್ತಿತ್ತು. ಆಗೊಂದು ಈಗೊಂದು ಮಾತಾಡುತ್ತೀರಿ ಅನ್ನುವವರಿಗೆ ಅನಂತಮೂರ್ತಿ ಹೇಳುತ್ತಿದ್ದದ್ದು ಇಷ್ಟೇ: ನಾನು ಮನುಷ್ಯ. ಬೆಳೆಯುತ್ತಾ ಹೋಗುತ್ತೇನೆ, ಬದಲಾಗುತ್ತಾ ಹೋಗುತ್ತೇನೆ, ತಿಳಿಯುತ್ತಾ ಹೋಗುತ್ತೇನೆ. ನನ್ನ ವಿಚಾರಗಳು ಬದಲಾಗುತ್ತಾ ಹೋಗುತ್ತವೆ. ಆದರೆ ನಾನೆಂದೂ ಜೀವವಿರೋಧಿಯಾಗಿರಲಾರೆ. ಸಣ್ಣತನ ತೋರಲಾರೆ.


ಅವರು ಯಾವತ್ತೂ ತಮ್ಮ ಭಾಷಣವನ್ನು ಬರೆದುಕೊಂಡು ಬಂದವರಲ್ಲ. ವೇದಿಕೆ ಏರಿದಾಗ ಮನಸ್ಸಿಗೆ ಏನು ತೋಚುತ್ತದೋ ಅದನ್ನು ಹೇಳುತ್ತಿದ್ದರು. ಮಾತು ತಾನಾಗಿಯೇ ಬರಬೇಕು, ನೆಲದಿಂದ ನೀರು ಉಕ್ಕಿದಂತೆ ಅನ್ನುವುದು ಅವರ ನಂಬಿಕೆಯಾಗಿತ್ತು. ಎಂದೋ ಅನುಭವಿಸಿದ್ದು, ಎಲ್ಲೋ ನೋಡಿದ್ದು, ಯಾವತ್ತೋ ಆಡಿದ್ದು, ಎಂದೋ ಕೇಳಿದ್ದು ಅವರೊಳಗೆ ಕತೆಯಾಗಿ, ಕವಿತೆಯಾಗಿ ರೂಪುಗೊಳ್ಳುತ್ತಿತ್ತು.


ಒಬ್ಬ ಲೇಖಕನ ಸಾವು ಅವನ ನಿಷ್ಕ್ರಿಯತೆಯಲ್ಲಿದೆ. ನಾನು ಹೊಸದಾಗಿ ಏನನ್ನಾದರೂ ಹೇಳಲಿಕ್ಕೆ ಸಾಧ್ಯವಾಗದೇ ಹೋದರೆ ಅದೇ ನನ್ನ ಸಾವು. ಹೀಗೆ ಡಯಾಲಿಸಿಸ್‌ ಮಾಡಿಸ್ಕೋತಾ ಇದ್ದೀನಿ. ಹೊಸ ರಕ್ತ ನನ್ನೊಳಗೆ ಹರಿಯೋದು ನಂಗೆ ಗೊತ್ತಾಗ್ತಾ ಇದೆ. ಅದಕ್ಕಿಂತ ಮುಖ್ಯವಾಗಿ ಹೊಸ ವಿಚಾರಗಳು ನನ್ನೊಳಗೆ ಹರಿಯೋದು ಗೊತ್ತಾಗ್ತಿದೆ. ನನಗೆ ಹೇಳ್ಳೋದಕ್ಕೆ ಬೇಕಾದಷ್ಟಿದೆ. ನಾನು ಆತ್ಮಚರಿತ್ರೆ ಇನ್ನೂ ಬರೆದು ಮುಗಿಸಿಲ್ಲ. ಹೀಗೇ ಯಾರಾದರೂ ದಿನವೂ ಬಂದು ಮಾತಾಡಿಸುತ್ತಾ ಇದ್ದರೆ ನೆಮ್ಮದಿಯಾಗಿರುತ್ತೇನೆ ಅಂದಿದ್ದರು ಅನಂತಮೂರ್ತಿ.


ನೋವನ್ನು ಮೀರಬಲ್ಲ ಸೃಜನಶೀಲತೆ, ಅಬೋಧ ಮುಗ್ಧತೆಯ ಹಡೆವೆಂಕಟನ ತನ್ಮಯತೆಯನ್ನು ಅರ್ಥಮಾಡಿಕೊಳ್ಳಬಲ್ಲ ಹೃದಯವಂತಿಕೆ, ಸೂರ್ಯನ ಕುದುರೆಯೆಂಬ ರೂಪಕವನ್ನು ಸೃಷ್ಟಿಸಬಲ್ಲ ಪ್ರತಿಭೆ, ಸಮಕಾಲೀನವಾಗಬಲ್ಲ ಉತ್ಸಾಹ, ಎಲ್ಲ ಸಣ್ಣತನಗಳನ್ನೂ ಬದುಕುವುದರ ಮೂಲಕವೇ ಮೀರಬಲ್ಲೆ ಎಂಬ ಛಾತಿ ಇಟ್ಟುಕೊಂಡಿದ್ದ ಅನಂತಮೂರ್ತಿ ಹೊರಟು ಹೋಗುವ ಹೊತ್ತಿಗೆ ಬೆಂಗಳೂರಿನಲ್ಲಿ ಭಯಂಕರ ಮಳೆ. ಅದರ ಜೊತೆಗೇ ಅವರದೇ ಸಾಲುಗಳ ಸ್ಮರಣೆ: ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ. ಸುಖ ದುಃಖ ಬಯಕೆ ಭಯ, ಒಂದೆ ಎರಡೆ?

GET U R ANANTHAMURTHY BOOK PDF : HERE

18 Aug 2018

ಮಾಧ್ಯಮ ಮತ್ತು ಪಶ್ಚಿಮ ಘಟ್ಟ: ಅವಧಿ ಆರ್ಕೈವ್

ಈ ಪತ್ರಿಕೆಗಳಿಗೆ ತಾವು ‘ಪಶ್ಚಿಮಘಟ್ಟಗಳ ಬಗ್ಗೆ’ ಏನು ಬರೆಯುತ್ತಿದ್ದೇವೆಂಬುದು ಗೊತ್ತಿಲ್ಲ. ಹಾಗಾಗಿ ಅವರನ್ನು ಕ್ಷಮಿಸಿ.


ಸರ್ಕಾರ ಪಶ್ಚಿಮಘಟ್ಟಗಳಲ್ಲಿ “ಸೂಕ್ಷ್ಮ ಪರಿಸರ ಇರುವ ತಾಣ”ಗಳನ್ನು ಗುರುತಿಸಿ ಕರಡು ಅಧಿಸೂಚನೆ ಸಿದ್ಧಪಡಿಸಿದೆ ಎಂಬ ಸುದ್ದಿ ಕರ್ನಾಟಕದ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಶೈಲಿ ನೋಡಿದಾಗ ಒಂದು ವಿಷಯ ಖಚಿತವಾಗಿದೆ. ಅದೇನೆಂದರೆ, ಒಂದೋ ಪತ್ರಿಕೆಗಳ ಸಂಪಾದಕೀಯ ಕೋಣೆಗಳಲ್ಲಿ ತಲೆ ಖಾಲಿ ಮಾಡಿಕೊಂಡವರು ತುಂಬಿದ್ದಾರೆ; ಇಲ್ಲವೇ ಅವರು ಉದ್ದೇಶಪೂರ್ವಕವಾಗಿ ಇನ್ಯಾರದ್ದೋ ಸ್ಟೆನೋಗ್ರಾಫರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ!


ಮಾತೆತ್ತಿದರೆ ಪರಿಸರ ಕಾಳಜಿ ಎನ್ನುವ ಮಾಧ್ಯಮಗಳ ಈ ಆಟ ನೋಡುವುದಕ್ಕೆ ಮಜವಾಗಿದೆಯಾದರೂ, ಇದರ ಅಂತಿಮ ಪರಿಣಾಮಗಳಿಗೆ ನಾನು-ನೀವು ಎಲ್ಲರೂ ಹೊಣೆಗಾರರು ಎಂಬುದನ್ನು ಮರೆಯುವಂತಿಲ್ಲ.


ಆಗಿರುವುದು ಇಷ್ಟು:


ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಹರಡಿರುವ ಪಶ್ಚಿಮಘಟ್ಟಗಳ ಒಟ್ಟು ವಿಸ್ತೀರ್ಣ 1,29,037 ಚದರ ಕಿಲೋಮೀಟರ್ ಗಳು. 1986ರಲ್ಲಿ ರಾಜೀವ್ ಗಾಂಧಿ ಸರ್ಕಾರ ದೇಶದ ಪರಿಸರ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತಂದಿತ್ತಾದರೂ ಅದು ತೀರಾ ಸ್ಥೂಲವಾಗಿದ್ದುದರಿಂದ, ಅದನ್ನು ನಿರ್ದಿಷ್ಟಗೊಳಿಸಲು ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ.


ಆ ಪ್ರಯತ್ನಗಳ ಭಾಗವಾಗಿ, ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲು ಹಲವು ಸಮಿತಿಗಳು ರಚನೆಗೊಂಡವು. ಈ ಪ್ರಕ್ರಿಯೆಯ ಭಾಗವಾಗಿ ಮಾಧವ ಗಾಡ್ಗೀಳ್ ಅವರು 2011ರಲ್ಲಿ ಪರಿಸರದ ಕುರಿತು ತಮಗಿರುವ ಆಸಕ್ತಿಯ ಕಾರಣದಿಂದಾಗಿ ಬಹಳ ಶ್ರಮವಹಿಸಿ ವರದಿಯೊಂದನ್ನು ಸಿದ್ಧಪಡಿಸಿ, ಇಡಿಯ ಪಶ್ಚಿಮ ಘಟ್ಟವನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ, ಯಾವ ಯಾವ ಭಾಗಗಳಲ್ಲಿ ಏನೇನು ಚಟುವಟಿಕೆಗಳನ್ನು ಮಾಡಬಹುದು ಮತ್ತು ಎಲ್ಲಿ ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು.


ಬಹಳ ಪ್ರಾಕ್ಟಿಕಲ್ ಆಗಿದ್ದ ಈ ವರದಿ ಬಂದದ್ದೇ ತಡ, ಕಾಡುಕಳ್ಳರು, ನೆಲಬಾಕರುಗಳಿಗೆ ಚಳಿ ಹತ್ತಿಕೊಂಡಿತು. ವಿಶೇಷವಾಗಿ ಪಶ್ಚಿಮ ಘಟ್ಟಗಳ ಒತ್ತಿಗೇ ಜನಜೀವನವೂ ಬೆರೆತಿರುವ ಕೇರಳ – ಕರ್ನಾಟಕ – ಗೋವಾ – ಮಹಾರಾಷ್ಟ್ರಗಳಲ್ಲಿರುವ ಗಣಿ ಉದ್ಯಮ, ಕಾಡು ಕಡಿದು ನಾಡು ಮಾಡುವ ಉದ್ಯಮ, ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಅಂಡಿಗೆ ಬೆಂಕಿ ಹೊತ್ತಿಕೊಂಡಿತು. ಅವರು ಈ ಪ್ರದೇಶಗಳ ಕೃಷಿಕರು, ಪುಟ್ಟ ವ್ಯವಹಾರಸ್ಥರಲ್ಲಿ ನಿಮ್ಮ ಕಥೆ ಮುಗಿಯಿತು ಎಂಬ ಭಯ ಹುಟ್ಟುಹಾಕತೊಡಗಿದರು. ರಾಜಕೀಯ, ಅಧಿಕಾರಶಾಹಿ, ಧರ್ಮ, ಜಾತಿ, ಕಾಸು ಇತ್ಯಾದಿ “ನವರಸಗಳೂ” ಇದರೊಂದಿಗೆ ಬೆರೆತು ಸಿದ್ಧವಾದ ಹೊಸಪಾಕವೇ “ಕಸ್ತೂರಿ ರಂಗನ್ ಸಮಿತಿ!”


ಗಾಡ್ಗೀಳರ ವರದಿ ವೈಜ್ಞಾನಿಕವಾಗಿಲ್ಲ ಎಂದ ಕಸ್ತೂರಿ ರಂಗನ್ ಸಮಿತಿ 2013ರಲ್ಲಿ “ಸ್ಯಾಟಲೈಟ್ ತಂತ್ರಜ್ಞಾನ” ಬಳಸಿ, ಅರ್ಧಕ್ಕರ್ಧ ಪಶ್ಚಿಮಘಟ್ಟಗಳನ್ನು ಹೊರಗಿಟ್ಟು, ಕೇವಲ 60,000 ಚದರ ಕಿಮೀ. ಭಾಗವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಿ ತನ್ನ ವರದಿ ಸಲ್ಲಿಸಿತು.


ಆದರೆ, ಇಷ್ಟರಲ್ಲಾಗಲೇ ಒತ್ತಡಗಳ ರುಚಿ ಸವಿದಿದ್ದ “ನವರಸ”ದ ರೂವಾರಿಗಳು ಕಸ್ತೂರಿ ರಂಗನ್ ವರದಿ ಬಂದಮೇಲಂತೂ ಇನ್ನಷ್ಟು ತೀವ್ರವಾಗಿ ಅದರ ವಿರುದ್ಧ ಸಂಘಟಿತ ದಾಳಿ ಆರಂಭಿಸಿದರು. ಹಾಗಾಗಿ ಈ ತನಕವೂ ಅದರ ಅನುಷ್ಠಾನ ಸಾಧ್ಯ ಆಗಿಲ್ಲ ಮತ್ತು ಕೇಂದ್ರ ಸರ್ಕಾರ ಈಗ ಈ ದಾಳಿಗೆ ಮಣಿದು, ಪಶ್ಚಿಮಘಟ್ಟಗಳ ಗಾತ್ರವನ್ನು 56,825 ಚದರ ಕಿಮೀಗಳಿಗೆ ಇಳಿಸಲು ಸಿದ್ಧವಾಗಿದೆ.


ಈ ಇಡಿಯ ವಿವಾದಕ್ಕೊಂದು ಅಂತಾರಾಷ್ಟ್ರೀಯ ಮಗ್ಗುಲೂ ಇದ್ದು, ಸರ್ಕಾರಕ್ಕೂ ಕೂಡ ತನ್ನ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಸಾಬೀತುಪಡಿಸಲು ಕೆಲವು ಡೆಡ್ ಲೈನುಗಳನ್ನು ಪಾಲಿಸಬೇಕಿದೆ. (ಅದು ಇನ್ನೊಂದೇ ಪುರಾಣ. ಆ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.) ಹಾಗಾಗಿ ಎಲ್ಲರೂ ಗಡಿಬಿಡಿಬಿದ್ದಿದ್ದಾರೆ.


ಮಾಧ್ಯಮಗಳ ಪಾತ್ರ:


ಈ ಇಡಿಯ ಪ್ರಕರಣದಲ್ಲಿ ಮಾಧ್ಯಮಗಳು ವಹಿಸಿರುವ ಪಾತ್ರ – ನಮ್ಮಲ್ಲಿ ಪತ್ರಿಕೋದ್ಯಮ ತಲುಪಿರುವ ದುರ್ಗತಿಗೆ ದ್ಯೋತಕ ಆಗಿಬಿಟ್ಟಿದೆ. “ಪರಿಸರ ಸೂಕ್ಷ್ಮ” ಪ್ರದೇಶಗಳ ಘೋಷಣೆಯಿಂದ ಆ ಪ್ರದೇಶದಲ್ಲಿ “ಅಭಿವೃದ್ಧಿ ಚಟುವಟಿಕೆಗಳು” ಸ್ಥಗಿತಗೊಳ್ಳಲಿವೆ, ಜನರ ಬದುಕು ಕಷ್ಟವಾಗಲಿದೆ ಎಂಬ ವಾದ ಮುಂದಿಟ್ಟುಕೊಂಡು, ಪಶ್ಚಿಮಘಟ್ಟಗಳನ್ನು ಪೂರ್ಣ ನಾಶಪಡಿಸುವ ಹುನ್ನಾರಗಳಿಗೆ ಮಾಧ್ಯಮಗಳು ಪೂರಕತಾಳ ತಟ್ಟಲಾರಂಭಿಸಿವೆ. ಬಹುತೇಕ ಎಲ್ಲ ಪತ್ರಿಕೆಗಳೂ “ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟದ ಜನತೆಗೆ ಮಾರಕವಾಗಲಿದೆ”ಎಂದೇ ವರದಿ ಮಾಡುತ್ತಿವೆ.


ಪತ್ರಿಕೆಗಳ ಮಾಲಕರ ಹೊಟ್ಟೆಪಾಡು, ಹಿತಾಸಕ್ತಿಗಳನ್ನು ಕಾಪಾಡುವ ಭರದಲ್ಲಿ ಗಾಡ್ಗೀಳ್ ವರದಿಯನ್ನಾಗಲೀ, ಕಸ್ತೂರಿ ರಂಗನ್ ವರದಿಯನ್ನಾಗಲೀ ಸಂಪೂರ್ಣ ಓದಲು ಮರೆತಿರುವ ಮಾಧ್ಯಮಗಳು, ವಾಸ್ತವಗಳನ್ನು ಕಣ್ತೆರೆದು ಕಾಣಲು ಸಿದ್ಧರಿಲ್ಲ. ಅವರಿಗೆ ನೆಲದ ವಾಸ್ತವಗಳಿಗಿಂತ ತಮ್ಮ ಕಿಸೆ ತುಂಬಿಸುವವರ, ಜಾಹೀರಾತುದಾರರ “ಹೊಟ್ಟೆಬಾಕತನ”ದ ತೂಕ ಹೆಚ್ಚಾಗಿದೆ. ಒಟ್ಟಿನಲ್ಲಿ “ಯಾವುದು ಸರಿ, ಯಾವುದು ತಪ್ಪು” ಎಂಬ ಮೂಲಭೂತ ನಿರ್ಧಾರಗಳಲ್ಲೇ ಗೊಂದಲ ಹುಟ್ಟುಹಾಕಿ, ಗೊಬೆಲ್ಸ್ ಹೇಳಿಕೊಟ್ಟದ್ದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಈವತ್ತು ರಾಜಕೀಯ ಪಕ್ಷಭೇದಗಳೂ ಇಲ್ಲ; ಧರ್ಮದ ಹಂಗೂ ಇಲ್ಲ. ಎಲ್ಲರೂ ಒಂದೇ.


ಪರಿಸರದ ಕುರಿತಾದ ಈ ರೀತಿಯ ತಪ್ಪು ನಿರ್ಧಾರಗಳ ಫಲವನ್ನೀಗಾಗಲೇ ದೇಶ ಉಣ್ಣಲಾರಂಭಿಸಿದೆ. ಈ ಸ್ಥಿತಿ ವಿಕೋಪಕ್ಕೆ ಹೋಗಿ, ಜನ ಇದಕ್ಕೆ ಕಾರಣರಾದವರು ಯಾರೆಂಬ ಖಾನೇಶುಮಾರಿ ತೆಗೆಯುವ ದಿನ ಬಂದಾಗ ಹೊತ್ತು ಮೀರಿರುತ್ತದೆ.


ಇಂತಹ ಜನಗಳು, ಮಾಧ್ಯಮಗಳು ನಮ್ಮೆದುರು ಬಂದು “ಪರಿಸರ ಸಂರಕ್ಷಣೆ, ಕಳಕಳಿ” ಎಂದು ಕಥೆ ತೆಗೆದರೆ, ಅವರ ‘ಹಗಲುಯಾಸಕ್ಕೆ (ಹಗಲುವೇಷ – ನಾಟಕ)’ ಹೇಗೆ ಪ್ರತಿಕ್ರಿಯಿಸಬೇಕೆಂಬುದಕ್ಕಾದರೂ  ಸಿದ್ಧರಾಗಿರೋಣ. ಈಗ ಮಾಡಬಹುದಾದದ್ದು ಅಷ್ಟೇ.


17 Aug 2018

ವಾಜಪೇಯಿ: ಶಂಕರ್ ಎನ್

ವಾಜಪೇಯಿ ತೀರಿಕೊಂಡ ಕೂಡಲೇ ಅವರ ಬಲಪಂಥೀಯ ಅನುಯಾಯಿಗಳು ಬಿಡಿ, ನಮ್ಮ ಪ್ರಗತಿಪರರೂ ಅವರ ವ್ಯಕ್ತಿತ್ವಕ್ಕೆ ‘ಅಜಾತಶತ್ರು, ಮುತ್ಸದ್ದಿ’ ಇತ್ಯಾದಿ ಬಿರುದುಗಳನ್ನು ತೊಡಿಸಿ ಮೈ ಮರೆಯುತ್ತಿದ್ದಾರೆ. ಬಹುಶಃ ಮೈತ್ರಿ ಸರ್ಕಾರವನ್ನು ವಾಜಪೇಯಿ ಸ್ನೇಹಮಯವಾಗಿ ನಿಭಾಯಿಸಿದ ರೀತಿ, ಅವರ ವಾಕ್ಪಟುತ್ವವೇ ಮುಂತಾದ ಪ್ರಸಿದ್ಧ ಗುಣಗಳು ಈ ಅಭಿಮಾನಿ ಗಣವನ್ನು ಗೊಂದಲದಲ್ಲಿ ಕೆಡವಿರಬಹುದು. ಅದಕ್ಕೇ ‘ತಪ್ಪು ಪಕ್ಷದಲ್ಲಿ ಸಿಲುಕಿಕೊಂಡಿರುವ ಧೀಮಂತ ನಾಯಕ’ ಎಂದು ಅವರನ್ನು ಅಳುಕಿಲ್ಲದೆ ಹೊಗಳಲು ಮುಂದಾಗುತ್ತಾರೆ. 2002ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಮೋದಿಯವರಿಗೆ ‘ರಾಜಧರ್ಮ ಪಾಲಿಸಿ’ ಎಂದು ಕಿವಿ ಹಿಂಡಿದ್ದು ಹಾಗೂ ಆಗಿಂದಾಗಲೇ ಮೋದಿಯವರ ರಾಜೀನಾಮೆ ಪಡೆಯಲು ಪಟ್ಟು ಹಿಡಿದಿದ್ದೂ ವಾಜಪೇಯಿಯವರಿಗೆ ‘ಉದಾರವಾದಿ ಜಾತ್ಯತೀತ’ ಹೊಳಪು ತಂದುಕೊಟ್ಟಿದ್ದರೆ ಆಶ್ಚರ್ಯವಿಲ್ಲ. ಆದರೆ ಅಡ್ವಾಣಿ ಮತ್ತು ಅರುಣ್ ಜೇಟ್ಲಿಯವರ ಹಟ ಹಾಗೂ ತಂತ್ರಗಳಿಂದಾಗಿ ಬಿಜೆಪಿ ಕಾರ್ಯಕಾರಣಿಯ ಗೋವಾ ಸಭೆಯ ಸಂದರ್ಭದಲ್ಲಿ ಮೋದಿ ಉಳಿದುಕೊಂಡಿದ್ದೇನೋ ಹೌದು. ಆದರೆ ಅದೇ ಪಣಜಿ ಸಭೆಯಲ್ಲಿ ಅಟಲ್ಜೀವ ಮಾಡಿದ ಭಾಷಣ ಅವರ ನಿಜ ಬೇರುಗಳನ್ನು ಬೆತ್ತಲು ಮಾಡಿತ್ತು. ಆ ಮಾತುಗಳು ‘ನಾನು ಪ್ರಧಾನಿಯಾಗಬಹುದು, ಮಾಜಿಯೂ ಆಗಬಹುದು, ಆದರೆ ನಾನು ಸದಾ ಸ್ವಯಂಸೇವಕನೇ’ ಎಂದು ಹಿಂದೊಮ್ಮೆ ಹೇಳಿಕೊಂಡಿದ್ದ ವಾಜಪೇಯಿಯವರ ಮೂಲ ಸಂಘ ಪರಿವಾರ ಮನಃಸ್ಥಿತಿಗೆ ಮತ್ತೊಮ್ಮೆ ಒದಗಿ ಬಂದ ಪುರಾವೆಯಾಗಿದ್ದವು. ಸಂಘ ಪರಿವಾರದ ಕೋಮುವಾದಿ ವಿಷವೇ ಈ ನಾಯಕನ ಧಮನಿಗಳಲ್ಲಿಯೂ ಹರಿಯುತ್ತಿದ್ದ ರಕ್ತ ಎಂಬುದಕ್ಕೆ ಆ ಭಾಷಣ ನಿಸ್ಸಂದಿಗ್ಧ ಸಾಕ್ಷಿಯಾಗಿತ್ತು:
‘ಜಗತ್ತಿನಲ್ಲಿ ಎಲ್ಲೆಲ್ಲಿ ಮುಸ್ಲಿಮರು ಬದುಕಿದ್ದಾರೋ, ಅಲ್ಲೆಲ್ಲೂ ಅವರು ಇತರರೊಂದಿಗೆ ಕೂಡಿ ಬಾಳಲು ತಯಾರಿಲ್ಲ. ಬೇರೆಯವರೊಂದಿಗೆ ಬೆರೆಯಲು ಅವರಿಗೆ ಮನಸ್ಸಿಲ್ಲ. ಶಾಂತಿ ಮಾರ್ಗದ ಬದಲು ಅವರು ಬೆದರಿಕೆ ಹಾಗೂ ಭಯೋತ್ಪಾದನೆ ಮೂಲಕವೇ ಮತಪ್ರಚಾರ ಮಾಡಬಯಸುತ್ತಾರೆ. ಇಡೀ ಜಗತ್ತು ಮುಸ್ಲಿಮರು ಒಡ್ಡಿರುವ ಅಪಾಯಕ್ಕೆ ಜಾಗೃತವಾಗಿದೆ....’ (12 ಏಪ್ರಿಲ್ 2002)- ಇದು “ಉನ್ನತ ನಾಯಕ, ಬಿಜೆಪಿಯ ಮಾನವೀಯ ಮುಖ” ಕವಿಪುಂಗವ ವಾಜಪೇಯಿಯವರ ಧಾಟಿ! ಆ ಕಾರಣಕ್ಕೇ ಮೊದಲಿಗೆ ಮೋದಿಯವರ ರಾಜೀನಾಮೆ ಬಯಸಿದ್ದ ವಾಜಪೇಯಿ, ಬರಬರುತ್ತ ಮೋದಿಯವರ ಸಮರ್ಥನೆಯಲ್ಲಿ ತೊಡಗಿದ್ದು ಅಚ್ಚರಿ ಹುಟ್ಟಿಸುವುದಿಲ್ಲ.
ಬಾಬ್ರಿ ಮಸೀದಿ ಧ್ವಂಸವಾದ ದಿನ ಅಟಲ್ಜೀ್ ಅಯೋಧ್ಯೆಯಲ್ಲಿ ಇರದಿದ್ದರೂ ಹಿಂದಿನ ದಿನ ಲಕ್ನೋದಲ್ಲಿ ‘ಅಯೋಧ್ಯೆಯ ಕೆಲ ಭಾಗಗಳ ನೆಲಸಮಕ್ಕೆ ಕೋರ್ಟ್ ಒಪ್ಪಿಗೆಯಿದೆ’ ಎಂಬ ಭಾಷಣ ಬಿಗಿದು ಧ್ವಂಸಕ್ಕೆ ಪ್ರೇರಣೆ ಕೊಟ್ಟಿದ್ದರು. ಕರಸೇವೆಯನ್ನು ಯಾವ ಕೋರ್ಟ್ ಆದೇಶವೂ ತಡೆಯಲಾರದು ಎಂದಿದ್ದ ಅವರ ವೀರಾವೇಶದ ಭಾಷಣ ಈಗಲೂ ಯೂಟ್ಯೂಬ್ನನಲ್ಲಿ ನೋಡಲು ಸಿಕ್ಕುತ್ತದೆ.
ಇನ್ನು ‘ನಾನು ಜಾತ್ಯತೀತ’ ಎಂದು ಹಿಂಜರಿಯದೆ ಘೋಷಿಸುತ್ತಿದ್ದ ವಾಜಪೇಯಿ ತೀರಿಕೊಂಡಾಗ ಅವರಿಗೆ 93 ವರ್ಷಗಳ ತುಂಬು ಪ್ರಾಯ. ಆದರೆ ಆ 93 ವರ್ಷಗಳಲ್ಲಿ ಒಮ್ಮೆಯೂ, 18 ಕೋಟಿಯಷ್ಟಿರುವ ದೇಶದ ಮುಸ್ಲಿಮರಾಗಲೀ, ಎಂಟೂವರೆ ಕೋಟಿಯಷ್ಟಿರುವ ಕ್ರೈಸ್ತರಾಗಲೀ ಈ ದೇಶದ ಸಹಜ ಪ್ರಜೆಗಳೆಂದು ಮನಸಾ ದೃಢಪಡಿಸುವ ಒಂದೇ ಒಂದು ಮಾತು ಅವರ ಬಾಯಿಂದ ಬರಲಿಲ್ಲ. ಇದು ಈ ಭಾರತರತ್ನ ಬಿರುದಾಂಕಿತ ಜೀವದ ತಿರುಳು.
ಸಂಘ ಪರಿವಾರದ ನಿಲುವುಗಳಿಗೆ ಅನುಗುಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿತಪ್ಪಿಯೂ ಪಾಲ್ಗೊಳ್ಳದ ವಾಜಪೇಯಿ, ಭಾರತದ ಸಾರ್ವಜನಿಕ ಜೀವನ ಕಂಡ ಅಗ್ರಗಣ್ಯ ಧುರೀಣರಲ್ಲೊಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವರೆಂದೂ ನನ್ನ ಪಾಲಿನ ರಾಷ್ಟ್ರನಾಯಕರಾಗಲಾರರು. ಬಹುಸಂಸ್ಕೃತಿಯ ಭಾರತದ ಜೀವಾಳವನ್ನು ಒಪ್ಪಿ ಗೌರವಿಸದವರನ್ನು ‘ರಾಷ್ಟ್ರನಾಯಕ’ ಎಂದು ಹೇಗೆ ತಾನೇ ಒಪ್ಪಲು ಸಾಧ್ಯ?

16 Aug 2018

ರಾಕ್ಷಸ-ತಂಗಡಿ: ಗಿರೀಶ್ ಕಾರ್ನಾಡ್

ಕರಣಂ ಪ್ರಸಾದ್
ನೆನ್ನೆ ಬಿಡುಗಡೆಯಾದ ಗಿರೀಶ್ ಕಾರ್ನಾಡರ ರಚನೆಯ ಹೊಸ ನಾಟಕ "ರಾಕ್ಷಸ-ತಂಗಡಿ"
---
ಇತಿಹಾಸದ ವಸ್ತುವಿಟ್ಟುಕೊಂಡು ಕೃತಿ ರಚಿಸುವುದೆಂದರೆ ಕಾಲಪ್ರವಾಹದಲ್ಲಿ ಕುರುಡನೊಬ್ಬ ಈಜಿದಂತೆ. ಪ್ರವಾಹದಲ್ಲಿ ಈಜುತ್ತಾ ತಮಗೆ ಹಿತವಾದ ಜೊಂಡು, ಜಾಡು, ಕಲ್ಲು, ಪೊಟರೆ ಹಿಡಿದು... ಅದರ ಸುತ್ತಲನ್ನೇ ತಡಕಿ ಪ್ರವಾಹದ ಲಕ್ಷಣದ ಬಗ್ಗೆ ನಮ್ಮ ನಿರ್ಣಯ ಹೇಳುವ ದಯನೀಯತೆಗೆ ನಾವು ಎದುರಾಗುತ್ತೇವೆ. ಏಕೆಂದರೆ ಅಲ್ಲಿ ದೃಷ್ಟಿಜ್ಞಾನ ವಿವೇಕವಿರುವುದಿಲ್ಲ, ಕೇವಲ ಸ್ಪರ್ಶ ಮತ್ತು ಭಾವವೇ ಪ್ರಧಾನವಾಗುತ್ತದೆ. ಈ ನಾಟಕದಲ್ಲಿ ಕಾರ್ನಾಡರು ಕೂಡ ಹಾಗೇ ಮಾಡಿದ್ದಾರೆ. ಇದು ಖಂಡಿತಾ ದೂಷಣೆಯಲ್ಲ... ಇತಿಹಾಸವನ್ನು ಕೊರೆದ ಪಂಡಿತರಲ್ಲೇ ಈ ಮಿತಿ ಇರುವಾಗ, ಅದನ್ನು ಬಳಸುವ ಸೃಷ್ಟಿಶೀಲನೂ ಆ ಮಿತಿಯಲ್ಲೇ ಇರುತ್ತಾನೆ. ಈ ನಾಟಕವು ರಿಚರ್ಡ್ ಎಂ ಈಟೆನ್ ಅವರ "ಎ ಸೊಷಿಯಲ್ ಹಿಸ್ಟರಿ ಆಫ್ ಡೆಕ್ಕನ್" ಮತ್ತು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಬರೆಹವನ್ನು ಋಣವಾಗಿಟ್ಟುಕೊಂಡಿದೆ. ಈ ನಾಟಕವನ್ನು ರೂಪಕ ಮತ್ತು ಧ್ವನಿ - ವಸ್ತುನಿಷ್ಠತೆ ಮತ್ತು ಇತಿಹಾಸ ಎಂದು ಎರಡು ಭಾಗದಲ್ಲಿ ವಿವೇಚಿಸುವುದು ಒಳಿತು.
---
ರೂಪಕ ಮತ್ತು ಧ್ವನಿ
---
ವಿಜಯನಗರ ಧ್ವಂಸವಾಗಿದೆ, ಜನ ಅಲ್ಲಿಂದ ಓಡಿದ್ದಾರೆ, ಸೈನಿಕರು ಅಟ್ಟಾಡಿಸಿ ಬಂಗಾರ-ಬೊಕ್ಕಸಕ್ಕಾಗಿ ಹುಡುಕುತ್ತಿದ್ದಾರೆ. ಈ ಸನ್ನಿವೇಶದ ಅಡಿಯಲ್ಲಿ ನಾಟಕ ಪ್ರಾರಂಭವಾಗುತ್ತದೆ. ನಾಟಕದ ಬಗ್ಗೆ ಕುತೂಹಲ ಕಾಯ್ದಿಟ್ಟುಕೊಳ್ಳಲು ಇದು ವ್ಯವಸ್ಥಿತವಾದ ಪ್ರಾರಂಭ. ರಚನಕಾರರು ಅಲ್ಲಿ ಯಶಸ್ವಿಯಾಗುತ್ತಾರೆ. ನಂತರದ ದೃಶ್ಯದಲ್ಲೇ ರಾಮರಾಯನ ತಮ್ಮ ತಿರುಮಲ ವಿಜಯನಗರ ಕೇಂದ್ರಕ್ಕೆ ಬಂದು ಎಲ್ಲವೂ ಆಗಿ ಹೋಯಿತು, ಶೀಘ್ರ ಇಲ್ಲಿಂದು ಹೊರಡೋಣ ಎಂದು ಸಿಂಹಾಸನದ ರಾಜ ಸದಾಶಿವರಾಯನನ್ನು ಎಬ್ಬಿಸುವ, ಮಾತೆ-ಅತ್ತಿಗೆ ಎಲ್ಲರಿಗೂ ಆದ ದುರಂತವನ್ನು ವಿವರಿಸುವ ದೃಶ್ಯ. ನಿಜದಲ್ಲಿ ಸದಾಶಿವರಾಯ ವಿಜಯನಗರದ ಅಧಿಪತಿ. ಅವನು ತುಳುವ ವಂಶದವ, ರಾಮರಾಯ; ಕೃಷ್ಣದೇವರಾಯನ ಆಳಿಯ, ನಿಜದಲ್ಲಿ ಸಿಂಹಾಸನಧೀಶ ಅಲ್ಲ! ಆದರೆ ಹಿಡಿತ ಇರುವುದು ಅವನ ಕೈಯಲ್ಲೇ. ಅವನು ಅರವೀಡು ವಂಶಕ್ಕೆ ಸೇರಿದವನು. ಈ ಸೂಕ್ಷ್ಮವು ಬಲವಾಗಿ ಬಿಂಬಿತವಾಗಿದೆ. ಈ ಧರ್ಮ ಸಂಕಟವು ರಾಮರಾಯನ ಕೊನೆಯನ್ನು ನಿರ್ಣಯಿಸಿತು ಎಂಬ ಧ್ವನಿ ನಾಟಕದಲ್ಲಿ ಹೊರಡುತ್ತದೆ. ತಾನೂ ರಾಜವಂಶದವ ಎಂದು ಹೇಳಿಕೊಳ್ಳುವ ಹಂಬಲ ಎದ್ದು ಕಲ್ಯಾಣದ ಚಾಲುಕ್ಯನ ವಂಶಜ ಎಂದು ತನ್ನನ್ನೇ ಸಂತೈಸಿಕೊಂಡು ಆ ಕಲ್ಯಾಣದ ಆಸೆಯಲ್ಲೇ ಅಹಮದ್ ನಗರದ ನಿಝಾಮ್’ಶಹನನ್ನು ಎದುರು ಹಾಕಿಕೊಂಡು ಅದನ್ನು ಬಿಜಾಪುರದ ಸುಲ್ತಾನ ಅಲಿ ಆದಿಲ್ ಶಾನಿಗೆ ಕೊಟ್ಟು, ಕೊನೆಗೆ ರಕ್ಕಸ-ತಂಗಡಿ ಯುದ್ಧದಲ್ಲಿ ನಿಝಾಮಶಹನ ಪಾದದಡಿಯೇ ತಲೆ ಉರುಳಿಸಿಕೊಳ್ಳುವ ರಾಮರಾಯನೇ ಕಥಾ ಎಳೆ. ಇಲ್ಲಿ ಕಾರ್ನಾಡರು ಹೇಳಹೊರಟಿರುವುದು ವಿಜಯನಗರದ ಪತನವನ್ನಲ್ಲ, ರಾಮಾರಾಯನ ಪತನವನ್ನ. ಚಮತ್ಕಾರಿ ವಾಕ್ಯಗಳ ಮೂಲಕ ಪಾತ್ರವನ್ನು ಸಿಂಗರಿಸುವ ಕಾರ್ನಾಡರ ಪದ್ಧತಿ ಇಲ್ಲೂ ಮುಂದುವರಿದಿದೆ. "ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ, ಸುಲ್ತಾನರಿಗೂ ಇರತದೆ, ಪ್ರಜೆಗಳಿಗೂ ಇರತದೆ" ಎಂಬ ಬೇಗಮ್ ಪಾತ್ರದ ಮಾತು ಅದಕ್ಕೆ ಸಾಕ್ಷಿ. "ಕರಾರುಗಳನ್ನು ಓದಿ ತೋರಿಸು, ಎಲ್ಲರು ಕೇಳಲಿ, ಕೇಳಲಿಕ್ಕಷ್ಟೇ, ಚರ್ಚೆಗಾಗಿ ಅಲ್ಲ" ಎಂಬ ರಾಮರಾಯನ ಮಾತು ಇನ್ನೊಂದು ಉದಾಹರಣೆ. ನಾಟಕದ ನಿಜವಾದ ರಸಸ್ಥಾನ ಇರುವುದು ದೃಶ್ಯ-೬ ರಲ್ಲಿ, ರಾಮರಾಯ ನಿಝಾಮಶಹನನ್ನು ಮಾತಲ್ಲೇ ಮಂಡಿಯೂರಿಸಿ ಕಲ್ಯಾಣದ ಕೋಟೆಯ ಬೀಗವನ್ನು ಬಿಜಾಪುರಕ್ಕೆ ಹಸ್ತಾತಂತರಿಸುವ ಸನ್ನಿವೇಶ. ನಾಟಕಕಾರ ಕಾರ್ನಾಡ್ ಅಲ್ಲಿ ಗೆದ್ದುಬಿಡುತ್ತಾರೆ. ಕಾರ್ನಾಡರಿಗೆ ಸ್ಟೇಜ್ ಸೆನ್ಸ್ ಬಹಳವಾಗಿ ಇದೆ ಎಂಬುದು ಅವರು ದೃಶ್ಯ ಪೋಣಿಸುವುದರಲ್ಲೇ ಗೊತ್ತಾಗುತ್ತದೆ. ಇದೇ ಅವರನ್ನು ಇತರ ನಾಟಕಕಾರನಿಂದ ಭಿನ್ನ ಮಾಡುವುದು. ಈ ದೃಶ್ಯವೇಕೆ ಗಟ್ಟಿಯಾದ ರಸಸ್ಥಾನ ಎಂದರೆ - ಅದೇ ರಾಮರಾಯನ ಅಂತ್ಯಕ್ಕೆ ಮುನ್ನುಡಿ. ನಿಝಾಮಶಹ ಆ ದೃಶ್ಯದಲ್ಲಿ ರಾಮರಾಯ ಕೊಟ್ಟ ತಾಂಬೂಲವನ್ನು ನೆಲಕ್ಕೆ ಉಗಿಯುವುದೇ... ಇವನು ಕೊನೆಯಲ್ಲಿ ಅವನ ತಲೆ ಕತ್ತರಿಸುತ್ತಾನೆ ಎಂದು ತಿಳಿಸಿಬಿಡುತ್ತದೆ. ಇದು ಕಾರ್ನಾಡರ ಪ್ರತಿಭೆ, ಒಬ್ಬ ನಟರೂ ಆಗಿರುವುದರಿಂದ ಇದು ಅವರಿಗೆ ಸಿದ್ಧಿಸಿರಬಹುದು(!) ಶೇಕ್ಸಪಿಯರ್ ಉತ್ತಮ ನಾಟಕಕಾರ ಯಾಕೆ ಆದನೆಂದರೆ ಸ್ವತಃ ಆತನೂ ನಟನಾಗಿದ್ದ. ಭಾರತದ ಪ್ರಪ್ರಥಮ ನಾಟಕಕಾರ ಅಶ್ವಘೋಷನಿಗೆ ನಾಟಕ ರಚನೆಯ ಪ್ರತಿಭೆ ನಟನಾಗಿದ್ದರಿಂದಲೇ ಬಂದಿತೇನೋ. ಅಶ್ವಘೋಷ; ರಾಮಾಯಣ ಮತ್ತು ಮಹಾಭಾರತದ ನಂತರ ಬುದ್ಧಚರಿತದಂತ ಮಹಾಕಾವ್ಯ ರಚಿಸಿದ ಮಹಾಕವಿ (ಕಾಳಿದಾಸನಿಗೂ ಮುನ್ನ) ಎಷ್ಟು ಸಂಸ್ಕೃತಿ ರಕ್ಷಕರಿಗೆ ಕನಿಷ್ಠ ಆತನ ಹೆಸರು ತಿಳಿದಿದೆಯೋ ಗೊತ್ತಿಲ್ಲ. ಇರಲಿ... ರಾಕ್ಷಸ-ತಂಗಡಿಯತ್ತ ನೋಡೋಣ. ತಂಗಡಿ ಎಂಬ ದಖ್ಖನಿ ಭಾಷೆಯ ಪದ ಮತ್ತು ರಾಕ್ಷಸ ಎಂಬ ಸಂಸ್ಕೃತ ಶಬ್ಧದ ಸಮಾಗಮ ಇರುವುದರಿಂದ ನಾಟಕದ ಹೆಸರಾಗಿ ಬಳಸಿದೆ ಎಂದು ಕಾರ್ನಾಡರು ಹೇಳಿದ್ದಾರೆ... ಒಪ್ಪುವಂಥದ್ದೇ. ಒಮ್ಮೆ ಕಲೆ ಕರಗತವಾಗಿಬಿಟ್ಟರೆ, ಕಲಾವಿದನು ಪ್ರತಿಭೆಯ ಗಿಲೀಟಿನ ಕೆಳಗೆ ತನ್ನ ಹಿತೋದ್ದೇಶಗಳನ್ನು ಜೋಪಾನವಾಗಿ ದಾಟಿಸಿಬಿಡುತ್ತಾನೆ. ಕಾರ್ನಾಡರು ಅದನ್ನು ಹೆಮ್ಮೆಯಿಂದ ಮಾಡಿದ್ದಾರೆ! ಅಲಿ ಆದಿಲ್ ಶಹನ ಬಗ್ಗೆ ಬರೆಯುವಾಗ ಮಾತು ಮಾತಿಗೂ ಸೂಫಿ ಸಂತರ ಸಂಗೀತ-ದೈವತ್ವ ಲೀನದ ಮಾತುಗಳನ್ನು ಆಡಿಸಿ... ಅಲ್ಲೊಂದು ಸೌಮ್ಯ ಮುಖ ದಾಟಿಸಲು ಪ್ರಯತ್ನಿಸಿದ್ದಾರೆ. ಇದು ಹಿಟ್ಲರನು ಸಸ್ಯಹಾರಿ-ಪ್ರಾಣಿಪ್ರಿಯ ಎಂದು ತೋರಿಸುವಷ್ಟೇ ಹಾಸ್ಯಾಸ್ಪದ. ಪ್ರತಿ ದೃಶ್ಯದಲ್ಲೂ ಹಿಡಿತ ಬಿಟ್ಟುಕೊಡದೆ ನಿರೂಪಣೆ ಸಾಗಿದೆ, ತುಘಲಕ್ ಮತ್ತು ತಲೆದಂಡ ನಾಟಕದ ಜೊತೆಗೆ ತುಲನೆ ಮಾಡುವಷ್ಟು ನಾಟಕ ಪ್ರಬುದ್ಧವಾಗಿದೆ. ಟೀಪೂ ಸುಲ್ತಾನನ ಕನಸು ನಾಟಕದಲ್ಲಿ ಇದ್ದ "ದರ್ದು" ಇಲ್ಲಿ ಕಾಣುವುದಿಲ್ಲ. ರಾಮರಾಯನ ತಲೆಯನ್ನು ಭರ್ಜಿಗೆ ಸಿಕ್ಕಿಸಿ ವಿಜಯನಗರ ಸಾಮ್ರಾಜ್ಯದ ಪತನವನ್ನು ಸಾಂಕೇತಿಕವಾಗಿ ತೋರುವ ಅಂತ್ಯ ದೃಶ್ಯ ನಾಟಕದ ಹಿಡಿತವನ್ನು ತಪ್ಪಿಸಿದೆ... ಥಟಕ್ಕನೇ ಓದು ನಿಂತಂತೆ ಆಗುತ್ತದೆ. ರಂಗದ ಮೇಲೆ ಇದು ಬೇರೆ ರೀತಿ ಕಾಣಬಹುದೇನೋ, ಆದರೆ ಓದಿನಲ್ಲಿ ಅಂತ್ಯ ಕಥಾರಚನೆಗೆ ಪೂರಕವಾಗಿಲ್ಲ. ಅಡಿಪಾಯದ ದೃಶ್ಯಗಳು ಗಟ್ಟಿಯಾಗಿ ನಿಂತಿರುವುದರಿಂದ ಕಳಶ ಬಿದ್ದರೂ ಗೋಪುರಕ್ಕೆ ತೊಂದರೆ ಇಲ್ಲ ಎಂದು ಹೇಳಬಹುದು.
---
ವಸ್ತುನಿಷ್ಠತೆ - ಇತಿಹಾಸ
---
ರಾಮರಾಯ ರಾಜನಾಗಿರಲಿಲ್ಲ, ಯುದ್ಧರಂಗದಲ್ಲಿ ಆತ ಪಲ್ಲಕ್ಕಿಯ ಮೇಲೆ ಕೂತು ಸೈನಿಕರತ್ತ ಉಡುಗೊರೆ ಚೆಲ್ಲುತ್ತಾ "ತದಕಿರಿ, ತುರುಕರಿಗೆ, ತದಕಿರಿ..." ಎನ್ನುತ್ತಾ ತನ್ನ ಭಂಡಧೈರ್ಯದಿಂದ ತಲೆ ಕೊಟ್ಟದ್ದು ಎಲ್ಲವೂ ಇತಿಹಾಸ ಸಮ್ಮತವೇ. ಯುದ್ಧ ನಡೆದದ್ದು ಅಂದಾಜು ೧೫೦ ಕಿ.ಮೀ ದೂರದಲ್ಲಿ, ಹಂಪಿಗೆ ಬರಲು ಸೈನ್ಯಕ್ಕೆ ಮೂರು ದಿನ ಹಿಡಿಯಿತು ಅಷ್ಟರಲ್ಲಿ ತಿರುಮಲಾ, ಸಾವಿರಾರು ಆನೆಯ ಮೇಲೆ ಬೊಕ್ಕಸ ತುಂಬಿಕೊಂಡು ಪೆನಗೊಂಡಕ್ಕೆ ಹೋದ, ಅಲ್ಲಿನ ಸುತ್ತಮುತ್ತಲ ಜನರೇ  ಮೊದಲು ಸಿಕ್ಕ ಸಿಕ್ಕದ್ದು ಲೂಟಿ ಮಾಡಿದರು, ಆಮೇಲೆ ಮಹಮದೀಯ ಸೈನಿಕರು ಹಂಪಿಯ ಮೇಲೆ ದಾಳಿ ಇಟ್ಟದ್ದು ಎಂಬುದೂ ಇತಿಹಾಸಕ್ಕೆ ಬದ್ಧವಾಗಿದೆ. ಆದರೆ ಇವೆಲ್ಲವನ್ನೂ ನಾಟಕ ರಚನೆಯಲ್ಲಿ ತೊಡಗಿಸಿ... ಹಂಪಿಯ ದಾಳಿಯನ್ನು ಮಾತ್ರ ಮರೆಮಾಚಿದ್ದು ಜಾಣತನವೂ ಹೌದು, ಅಕ್ಷಮ್ಯವೂ ಹೌದು. ಯುದ್ಧಕ್ಕೆ ನಾಟಕ ಮುಗಿಯುತ್ತದೆ ಎಂಬ ಸಮಾಧಾನ ಒಪ್ಪಲಾಗದು ಏಕೆಂದರೆ ಮೊದಲ ದೃಶ್ಯದಲ್ಲಿ ಸೂಕ್ಷ್ಮವಾಗಿ ಕಾರ್ನಾಡರು ಗುಹಾವಾಸಿ ಮತ್ತು ಸೈನಿಕರ ನಡುವಿನ ಕಾಳಗವನ್ನು ತೋರಿಸಿದ್ದಾರೆ. ರಿಚರ್ಡ್ ಈಟನ್ ತಮ್ಮ ಪುಸ್ತಕದಲ್ಲಿ ರಾಬರ್ಟ್ ಸೀವೆಲ್ ಅವರನ್ನು ಖಂಡಿಸಿದ್ದಾನೆ ಸರಿ. ತೌಲನಿಕ ಅಭ್ಯಾಸ ಮಾಡುವವರಾದರೆ ರಾಬರ್ಟ್ ಅನ್ನು ಓದಿಕೊಳ್ಳಬೇಕಿತ್ತಲ್ಲವೇ. ಕೇವಲ ರಿಚರ್ಡ್ ಈಟನ್ ಬರೆದದ್ದನ್ನು ಮಾತ್ರ ಕಣ್ಮುಚ್ಚಿ ತೆಗೆದುಕೊಂಡಿರುವುದು ದೊಡ್ಡ ಮಿತಿ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ರಿಚರ್ಡ್ ಈಟನ್ ತನ್ನ ಪುಸ್ತಕದಲ್ಲಿ "Hapless Sadashiva..." (ಎ ಸೊಷಿಯಲ್ ಹಿಸ್ಟರಿ ಆಫ್ ಡೆಕ್ಕನ್ ಪೇಜ್ ನಂ.೧೯೬) ಎಂದು ಬರೆದಿರುವುದನ್ನು "ಹೇಪಲಾಯಿ ಸದಾಶಿವ" ಎಂದು ತದ್ವತ್ ಸಂಭಾಷಣೆಯಲ್ಲಿ ಬಳಸಿದ್ದಾರೆ. ಆಯಿತು ರಾಬರ್ಟ್ ಸೀವೆಲ್ ರಚನಕಾರರ ಹಿತೋದ್ದೇಶಕ್ಕೆ ವಿರುದ್ಧವಾಗಿದ್ದಾನೆ, ಆತನ ದೃಷ್ಟಿ ಖಂಡನೆ ಮಾಡಬಹುದು. ಆದರೆ ಅವನು ಕೊಟ್ಟಿರುವ ವಿವರಣೆಯನ್ನು ನೋಡಬೇಕಿತ್ತಲ್ಲವೇ... "ಹಂಪಿಯ ದಂಡು ಗೋಲಕೊಂಡಾದಲ್ಲಿ ಹಾಯ್ದು ಹೋಗುವಾಗ ಹಳ್ಳಿಗಳನ್ನು ಸುಟ್ಟಿದೆಯಂತೆ, ಮಸೀದಿಗಳನ್ನು ಉಧ್ವಸ್ತಗೊಳಿಸಿದೆಯಂತೆ" ಎಂದು ಪಾತ್ರದ ಕೈಯಲ್ಲಿ ಹೇಳಿಸುವಾಗ ಇರುವ ಸತ್ಯನಿಷ್ಠತೆ, ಹಂಪಿಯ ಬಗ್ಗೆಯೂ ಇರಬೇಕಿತ್ತಲ್ಲವೇ. ಅದನ್ನೂ ನೀಡುತ್ತೇನೆ ಓದಿಕೊಳ್ಳಿ.
"The third day saw the beginning of the end. The victorious Mussulmans had halted on the field of battle for rest and refreshment, but now they had reached the capital, and from that time forward for a space of five months Vijayanagar knew no rest. The enemy had come to destroy, and they carried out their object relentlessly. They slaughtered the people without mercy, broke down the temples and palaces; and wreaked such savage vengeance on the abode of the kings, that, with the exception of a few great stone-built temples and walls, nothing now remains but a heap of ruins to mark the spot where once the stately buildings stood. They demolished the statues, and even succeeded in breaking the limbs of the huge Narasimha monolith. Nothing seemed to escape them..."
(A Forgotten Empire: Vijayanagar; A Contribution to the History of India by Robert Sewell)
ಈ ಹಿಂದೆ ಬಹುಮನಿ ಉತ್ಸವ ಎಂಬ ಮಾತನ್ನು ಸರ್ಕಾರ ಹೇಳಿ, ಅದಕ್ಕೆ ಪ್ರತಿಯಾಗಿ ಬಹುಮನಿ ಸುಲ್ತಾನರು ವಿಜಯನಗರ ಸಾಮ್ರಾಜ್ಯ ಪತನ ಮಾಡಿದರು ಎಂಬ ಪ್ರತಿಕ್ರಿಯೆ ಬಂದಿತ್ತು. ಅದು ಶುದ್ಧ ತಪ್ಪು. ಬಹುಮನಿ ಸುಲ್ತಾನರು ನಿರಂತರ ವಿಜಯನಗರದ ಜೊತೆ ಕಾದಾಟದಲ್ಲಿದ್ದರು ಎಂಬುದು ಸರಿ ಆದರೆ ರಕ್ಕಸ-ತಂಗಡಿ ಯುದ್ಧದ ಹೊತ್ತಿಗೆ ಬಹುಮನಿ ಸಾಮ್ರಾಜ್ಯವೇ ಇರಲಿಲ್ಲ. ಯುದ್ಧ ನಡೆದದ್ದು ೧೫೬೫ರಲ್ಲಿ, ಬಹುಮನಿಯ ಕೊನೆಯ ರಾಜ ಕಲಿಮುಲ್ಲಾ ಶಾನ ಆಡಳಿತ ೧೫೨೫ಕ್ಕೆ ಕೊನೆಯಾಗುತ್ತದೆ. ಇಲ್ಲಿ ವಿಜಯನಗರದ ವಿರುದ್ಧ ಒಟ್ಟಾದವರು ಬಿಜಾಪುರದ ಆದಿಲ್ ಶಾ, ಅಹಮದ್ ನಗರ ನಿಝಾಮ್ ಶಾ, ಗೋಲ್ಕಂಡಾದ ಕುತುಬ್ ಶಾ , ಬೀದರಿನ ಬರೀದ್ ಶಹ, ಬೇರಾರಿನ ಸುಲ್ತಾನರು, ಅಷ್ಟರಲ್ಲಿ ಬಹುಮನಿ ಪ್ರದೇಶ ಇವರುಗಳ ನಡುವೆ ಹಂಚಿಗೋಗಿತ್ತು. ಹಲವು ಪುಸ್ತಕದಲ್ಲಿ ಸಹ ಇದ್ದೇ ತಪ್ಪು ಅಚ್ಚಾಗಿದೆ. ಈ ವಿಷಯದಲ್ಲಿ ಕಾರ್ನಾಡರು ಸ್ಪಷ್ಟವಾಗಿದ್ದಾರೆ, ಪ್ರತಿ ಸುಲ್ತಾನನ ಮನೋಮರ್ಮವನ್ನು, ವಿಜಯನಗರ ಸೋಲಿಸುವ ಒಂದೇ ಕಾರಣಕ್ಕೆ ಮನೆಯ ಹೆಣ್ಣನ್ನು, ಇತರ ಸುಲ್ತಾನರಿಗೆ ಮದುವೆ ಮಾಡಿಕೊಡುವ ಸನ್ನಿವೇಶ ರಸಪೂರ್ಣವಾಗಿದೆ. ರಾಮರಾಯ ಭಂಡಧೈರ್ಯ ಮಾಡಿರದಿದ್ದರೆ ವಿಜಯನಗರ ಉಳಿಯುತಿತ್ತು ಎಂಬುದನ್ನೂ ಕಾರ್ನಾಡರು ದಾಟಿಸುತ್ತಾರೆ. ವಿಜಯನಗರ ಸಾಮ್ರಾಜ್ಯ ಪತನ ಕನ್ನಡ ದೇಶದ ಪತನವೂ ಹೌದು ಎಂಬ ಸೂಕ್ಷ್ಮ ದೃಷ್ಟಿಯನ್ನು ಅವರು ಹೊರಡಿಸಿದ್ದು ನಿಜಕ್ಕೂ ಮೆಚ್ಚಬೇಕಾದ್ದೆ! "ಅಮ್ಮಾ, ಮೂರು ಮಂದಿ ಸುಲ್ತಾನರು ಒಂದಾಗಿ ಕರ್ನಾಟಕ ದೇಶದ ಮೇಲೆ ಏರಿ ಬರತಾ ಇದ್ದಾರೆ" ಎಂದು ರಾಮರಾಯನ ಬಾಯಲ್ಲಿ ಆಡಿಸಿದ್ದು ಗಮನೀಯ. ನಿಜವಾಗಿಯೂ ಅವನು ಹಾಗೆ ಹೇಳಿದ್ದನೋ ಇಲ್ಲವೋ ರಚನಕಾರರಿಗೆ ಆ ದೃಷ್ಟಿ ಸಿಕ್ಕಿರುವುದು ಒಳ್ಳೆಯ ವಿಚಾರ. ವಿಜಯನಗರದ ಧೈರ್ಯ ಎಷ್ಟಿತ್ತೆಂದರೆ ಯುದ್ಧದ ಸಮಯದಲ್ಲಿ ಹಂಪಿಗೆ ಕಾವಲೇ ಇರಲಿಲ್ಲ. ಶತಮಾನದಿಂದ ಯಾರೂ ಅದನ್ನು ಮುಟ್ಟುವ ಧೈರ್ಯ ಮಾಡಿರಲಿಲ್ಲ. ಈ ಅತಿಯಾದ ಆತ್ಮ ವಿಶ್ವಾಸವೇ ಪತನಕ್ಕೆ ಕಾರಣ ಎಂಬುದನ್ನೂ ನಾಟಕ ಹೇಳಿದೆ. ಅದು ಇತಿಹಾಸಕ್ಕೆ ಬದ್ಧವಾಗಿಯೇ ಇದೆ. ಯುದ್ಧಕ್ಕೆ ಹೊರಟಾಗ ರಾಮರಾಯನ ವಯಸ್ಸು ಕೆಲವೆಡೆ ೯೨ ಎಂದಿದೆ, ಕೆಲವೆಡೆ ೭೬ ಎಂದಿದೆ, ೮೨ ಎಂಬ ಬಹು ಪಂಡಿತರ ಅಭಿಪ್ರಾಯವನ್ನು ಕಾರ್ನಾಡರು ಬಳಸಿದ್ದಾರೆ.
---


ಉಪಸಂಹಾರ
---
ಇದೇ ವಸ್ತುವನ್ನು ಕಾರ್ನಾಡರ ಮನೋಧರ್ಮಕ್ಕೆ ವಿರುದ್ಧವಾದ ಧೋರಣೆ ಇರುವವರು ಬರೆದಿದ್ದರೆ ಪಾತ್ರಗಳಿಂದ ಬರುವ ಮಾತು ವ್ಯತ್ಯಾಸವಾಗುತ್ತಿತ್ತು. ಆದರೆ ವಿಜಯನಗರ ಪತನವಾಗಿದ್ದನ್ನು- ಸುಲ್ತಾನರು ಒಟ್ಟಾಗಿ ಎರಗಿದ್ದನು ಯಾವುದೇ ಪಂಥದವರು ಅಲ್ಲಗೆಳೆಯಲು ಸಾಧ್ಯವಿಲ್ಲ ಅಲ್ಲವೇ!? ಒಂದು ರೂಪಕವಾಗಿ ನಾಟಕ ದಷ್ಟಪುಷ್ಟವಾಗಿದೆ, ಅಲ್ಲೊಂದು ರಸಸಂಚಾರವಿದೆ. ತನಗೇ ಬೇಕಾದ್ದು ಮಾತ್ರ ಆಯ್ದ ವಸ್ತುನಿಷ್ಠತೆ ಇಲ್ಲದ ಜಾಣತನವೂ ಇಲ್ಲಿದೆ. ಈ ಮಾತನ್ನು ಹೇಳುತ್ತೇನೆ ಎಂದು ಕಾರ್ನಾಡರು ಮತ್ತು ಇತರರು ಬೇಸರಿಸಿಕೊಳ್ಳಬಾರದು... ಕಾರ್ನಾಡರ ಕನ್ನಡ ಸುಧಾರಿಸಬೇಕು. ಮರಾಠಿ, ಕೊಂಕಣಿ, ಇಂಗ್ಲೀಷು, ಹಿಂದಿ ಆಗಾಗ ಸಂಸ್ಕೃತದ ಜಾಗ್ರತೆ ಎಲ್ಲವನ್ನೂ ವೈಯಕ್ತಿಕವಾಗಿ ಮೈಮೇಲಿ ಹೇರಿಕೊಂಡ ಪರಿಣಾಮವಾಗಿ ಅವರ ಕನ್ನಡ; ಸಾಹಿತ್ಯ ರಚನೆಯಲ್ಲಿ ಹೇಗೇಗೋ ವರ್ತಿಸುತ್ತದೆ. ನಾನು ಒಣ ಮಾತುಗಾರನಲ್ಲ, ಸೃಷ್ಟಿಶೀಲ ಸಾಹಿತ್ಯ ರಚನೆಯ ಕಸುವು ನನ್ನಲ್ಲಿ ಇನ್ನೂ ಇದೆ ಎಂದು ಈ ನಾಟಕದ ಮೂಲಕ ಎಂಭತ್ತರ ಹರೆಯದ ಕಾರ್ನಾಡರು ಸಾಹಿತ್ಯ ವಲಯದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೆ ಎಲ್ಲಾ ರೀತಿಯ ಪ್ರತಿಕ್ರಿಯೆ ನೀಡುವವರು ಕೂಡ ಗಾಳಿಯಲ್ಲಿ ಎಂಜಲು ಉಗುಳದೆ, ಬೌದ್ಧಿಕವಾಗಿ ಪ್ರತಿಕ್ರಿಯಿಸಲಿ ಖಂಡಿಸಲಿ, ಹೊಗಳಲಿ ಎನ್ನಬೇಕಾಗುತ್ತದೆ. ಇಲ್ಲವಾದರೆ ಪ್ರತಿಕ್ರಿಯೆಯ ಮಾತು ಮತ್ತು ವ್ಯಕ್ತಿ ಎರಡೂ "ಚಿಲ್ಲರೆ"ಯಾಗುತ್ತದೆ. ಈ ಐದು ಜನ ಸುಲ್ತಾನರು ತಮ್ಮ ಭೇದ ಮರೆತು ಒಂದಾಗಿ-ಅತಿಯಾದ ವಿಶ್ವಾಸ ಹೊಂದಿರುವ ಒಬ್ಬ ಸಾಮ್ರಾಜ್ಯಾಧಿಪತಿಯನ್ನು ಹೊಸಕಿ ಹಾಕುವ ನಿರೂಪಣೆ ಸಮಕಾಲೀನ ವಿದ್ಯಮಾನಕ್ಕೆ ಹೊಂದುವಂತೆ ಅವರು ರಚಿಸಿದ್ದಾರೋ ಅಥವಾ ಕಾಕತಾಳೀಯವೋ ಆ ವಿರೂಪಾಕ್ಷನೇ ಬಲ್ಲ.

ವಿಡಿಯೋ ಕೃಪೆ: thestate.news

close