1 Jan 2019

which are the other languages that are derived from Kannada | ಕನ್ನಡದಿಂದ ಯಾವುದಾದರೂ ಇತರೆ ಭಾಷೆಗಳು ಟಿಸಿಲೊಡೆದಿವೆಯೇ. ಇದ್ದರೆ ಅವು ಯಾವುವು?

ಕನ್ನಡದಿಂದ ಟಿಸಿಲೊಡೆದ ಭಾಷೆಗಳು | These are the other languages that are derived from Kannada. 

ಕನ್ನಡದಿಂದ ಹಲವು ಭಾಷೆಗಳು ಟಿಸಿಲೊಡೆದಿವೆ. ಭಾಷಾಶಾಸ್ತ್ರಜ್ಞರು ಕೆಲವನ್ನು ಸ್ವತಂತ್ರ ಭಾಷೆ ಎಂದು ಇನ್ನೂ ಕೆಲವನ್ನು ಕನ್ನಡದ ಉಪಭಾಷೆಗಳು ಎಂದು ಪರಿಗಣಿಸುತ್ತಾರೆ. ಹಾಗಾಗಿ ಈ ಎಲ್ಲಾ ಭಾಷೆಗಳು ಮೂಲ ಕನ್ನಡದಿಂದಲೇ ವಿಕಾಸಹೊಂದಿವೆ ಎಂದು ಹೇಳಬಹುದು.

ನಾವು ಈಗ ಬಳಸುವ ಕನ್ನಡವು ಸಹ ಇತರೆ ಕನ್ನಡ ಭಾಷೆಗಳಂತೆಯೇ ಒಂದು ಪ್ರಬೇದವಾಗಿತ್ತು. ಈ ಕನ್ನಡಕ್ಕೆ ರಾಜಾಶ್ರಯ ದೊರೆತು ಮುಂದೆ ಶಾಸನ, ಆಡಳಿತ ಮತ್ತು ಸಾಹಿತ್ಯದ ಭಾಷೆಯಾಗಿ ಬೆಳಯಿತು. ಈ ರಾಜಾಶ್ರಯ ದೊರೆತ ಕನ್ನಡದ ಪ್ರಭೇದವನ್ನು "ತಿರುಳ್ ಕನ್ನಡ" ಎಂದು ಕವಿಗಳಾದ ಪಂಪ, ರನ್ನ, ಶ್ರೀವಿಜಯ, ನೃಪತುಂಗರು ಕರೆದಿದ್ದಾರೆ. ಈ ಭಾಷೆಯನ್ನೇ ಕ್ಲಾಸಿಕಲ್ ಕನ್ನಡ ಎಂದು ಪಾಶ್ಚಾತ್ಯ ವಿದ್ವಾಂಸರು ಕರೆಯುತ್ತಾರೆ. ಇದೇ ತಿರುಳ್ ಕನ್ನಡದ ಪ್ರಭೇದದಿಂದಲೇ ಇಂದಿನ ಕನ್ನಡ ವಿಕಾಸ ಹೊಂದಿದೆ ಕೆಲವು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Glottolog 4.4 - Kannadoid

೧. ಬಡಗ ಭಾಷೆ

ಬಡಗ ಭಾಷೆಯು ಈಗಿನ ತಮಿಳುನಾಡಿನ ನೀಲಗಿರಿ ಮತ್ತು ಕೊಯಮ್ಬತ್ತೂರು ಜಿಲ್ಲೆಗಳಲ್ಲಿ ಮಾತನಾಡುತ್ತಾರೆ. ಈ ಭಾಷೆಯು ಈಗಿನ ಮೈಸೂರು ಮತ್ತು ನಂಜನಗೂಡು ಪ್ರದೇಶದಲ್ಲಿ ಮತನಾಡುವ ಕನ್ನಡಕ್ಕೆ ಬಹಳ ಹತ್ತಿರವಿದೆ. ಬಡಗ ಜನರು ಮೂಲತಃ ವ್ಯವಸಯದ ಕುಟುಂಬದವರು. ಹಾಗಾಗಿ ಬಡಗ ಜನಾಂಗದವರು ನೀಲಗಿರಿಯ ಇತರೆ ಭಾಷಿಕರ ಪೈಕಿ ಬಹುಸಂಖ್ಯಾತರು. ಕೆಲವು ವರದಿಗಳ ಪ್ರಕಾರ ಬಡಗರು ಅಲ್ಲಿ ಇರುವ ತಮಿಳು ಭಾಷಿಕರಿಗಿಂತಲೂ ಅಧಿಕ ಸಂಖ್ಯೆಯಲ್ಲಿರುವುದನ್ನು ಕಾಣಬಹುದು. ಆದರೆ ಆಡಳಿತ ಮತ್ತು ವ್ಯವಹಾರದ ಭಾಷೆಯಾಗಿ ತಮಿಳನ್ನೇ ಬಳಸುತ್ತಾರೆ.

ಇನ್ನು ಭಾಷಾಶಾಸ್ತ್ರದ ವಿಚಾರಕ್ಕೆ ಬಂದರೆ, ಬಡಗವು ಕನ್ನಡದಲ್ಲಿ ಮೂಲ ದ್ರಾವಿಡ ಭಾಷೆಯಿಂದ ಒಳಗಾದ ವ -> ಬ ಮತ್ತು ಪ -> ಹ ಬದಲಾವಣೆಗಳನ್ನು ಕಾಣಬಹುದು. ಬಡಗದಲ್ಲಿ ಸಾಕಷ್ಟು ಹಳೆ ಕನ್ನಡದ noun forms ಹಾಗು ಕ್ರಿಯಾಪದ ಲಕ್ಷಣಗಳು ಕಂಡುಬರುವುದರಿಂದ ಹಾಗು ಕನ್ನಡದಲ್ಲಿ ಬಳಕೆಯಾಗುವ ಪ -> ಹ ಬದಲಾವಣೆಗಳು ಕಂಡುಬರುವುದರಿಂದ ಸುಮಾರು ನಡುಗನ್ನಡದ ಪೂರ್ವಕಾಲಕ್ಕೆ ಅಂದರೆ ೧೨ರಿಂದ ೧೩ನೇ ಶತಮಾನದಲ್ಲಿ ಬೇರೆಯಾಗಿರಬಹುದೆಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನೊಂದು ವಿಶೇಷವೆಂದರೆ ಹೊಸ ಕನ್ನಡದಲ್ಲಿ ಕಾಣದಿರುವ clusitives (inclusive & exclusive) ಲಕ್ಷಣಗಳನ್ನು ( ಎನ್ನ, ಎಂಗ, ಎಮ್ಮ) ಬಡಗ ಭಾಷೆ ಉಳಿಸಿಕೊಂಡು ಬಂದಿದೆ. ಬಡಗದಲ್ಲಿ ಇತರೆ ಭಾಷೆಗಳ ಪ್ರಭಾವವನ್ನು ಕಾಣಬಹುದು. ತಮಿಳು ನೀಲಗಿರಿ ಜಿಲ್ಲೆಯ ಆಡಳಿತ ಭಾಷೆಯಾದ್ದರಿಂದ, ಹಲವು ತಮಿಳು ನಾಮಪದಗಳು ಒಳಗೊಂಡಿದೆ. ಅಲ್ಲದೆ ನೀಲಗಿರಿ ಇತರೆ ಭಾಷೆಗಳಾದ ತೋಡ, ಕೋಟ ಭಾಷೆಗಳಿಂದಲೂ ಕೆಲವು ಪದಗಳು ಸೇರಿಕೊಂಡಿವೆ.

ಕೆಲವರು ಬಡಗವನ್ನು ಕನ್ನಡದ ಉಪಭಾಷೆಗಳು (Dialect) ಎಂದು ಭಾವಿಸಿದರೆ ಕೆಲವರು ಇದನ್ನು ಕನ್ನಡದಿಂದ ಬೇರೆಯಾದ ಸ್ವತಂತ್ರ ಭಾಷೆಯೆಂದು ಪರಿಗಣಿಸುತ್ತಾರೆ. ಆದರೆ ಈಗಿನ ಹೊಸಗನ್ನಡಕ್ಕೆ ಹೋಲಿಸಿದರೆ ಬಡಗದ ವಾಕ್ಯರಚನೆ, ಕ್ರಿಯಾಪದರೂಪವು ಬಿನ್ನವಾಗಿರುವುದರಿಂದ ಕನ್ನಡದ ಉಪಭಾಷೆ ಎಂದು ಪರಿಗಣಿಸದೇ, ಕನ್ನಡದಿಂದ ಟಿಸಿಲೊಡೆದ ಭಾಷೆ ಎಂದು ಭಾಷಾಶಾಸ್ತ್ರಜ್ಞರು ನಿರ್ಧರಿಸಿದ್ದಾರೆ.

೨.ಗೊಲಾರಿ (ಹೊಲಯ) ಭಾಷೆ

ಗೊಲಾರಿ ಅಥವ ಹೊಲಯ ಭಾಷೆಯು ಈಗಿನ ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರದ ಭಾಗಗಳಲ್ಲಿ ಕಾಣಬಹುದು. ಇದು ಈಗ ಕೇವಲ ಆ ಪ್ರದೇಶಗಳಲ್ಲಿ ಕಂಡುಬರುವ ಹೊಲಯ ಜನಾಂಗದವರು ಮಾತ್ರ ಬಳಸುತ್ತಾರೆ. ಹೊಲಯರು ದಖ್ಖಣದಲ್ಲಿ ಕಂಡುಬರುವ ದನಗಾರ ಗುಂಪಿಗೆ ಸೇರಿದ್ದರಿಂದ ಇವರ ಭಾಷೆಯು ಕನ್ನಡಕ್ಕೆ ಬಹಳ ಹತ್ತಿರವಾಗಿದೆ. ಇವರು ಸಾವಿರಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ, ಹಿಂದೆ ಈ ಪ್ರದೇಶಗಳಲ್ಲಿ ಕನ್ನಡ ಬಳಕೆಯಲ್ಲಿತ್ತು ಎಂದು ನಿಸ್ಸಂದೇಹವಾಗಿ ಹೇಳಬಹುದು. ಆದರೆ ಗೋಲಾರಿ ಭಾಷಿಕರ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಈಗ ಕೆಲವು ಸಾವಿರಗಳಲ್ಲಿ ಹೊಲಯಗನ್ನಡ (ಗೊಲಾರಿ) ಭಾಷಿಗರನ್ನು ಮಹಾರಾಷ್ಟ್ರದ ನಾಗಪುರ ಹಾಗು ಮಧ್ಯ ಪ್ರದೇಶದ ಬಾಲಾಘಾಟ್ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಕಾಣಬಹುದು. ಇದು ಈಗಿನ ವಿಜಯಪುರ, ಕಲಬುರ್ಗಿ ಭಾಗದ ಕನ್ನಡ ಶೈಲಿಯಂತೆ ಕಂಡುಬರುತ್ತದೆ. ಗೊಲಾರಿಯಲ್ಲು ಸಹ ಕನ್ನಡದ ವ -> ಬ ಹಾಗು ಪ -> ಹ ಬದಲಾವಣೆಗಳನ್ನು ಕಾಣಬಹುದು. ಇದರ ಮೇಲೆ ಹಿಂದಿ ಭಾಷೆಯ ಪ್ರಭಾವವನ್ನು ಅಗಾಧವಾಗಿ ಕಾಣಬಹುದು. ಗೊಲಾರಿ ಭಾಷೆಯನ್ನು ಸಹ ಕಲವು ವಿದ್ವಾಂಸರು ಕನ್ನಡದ ಉಪಭಾಷೆ ಎಂದು ಪರಿಗಣಿಸುತ್ತಾರೆ. ಇದು ಕನ್ನಡದ ಭೌಗೋಳಿಕ ಭಾಷಾಪ್ರದೇಶದಿಂದ ದೂರವಿದ್ದು ಮತ್ತೆ ಇದರ ಪದಬಳಕೆಗಳು ಈಗಿನ ಹೊಸಕನ್ನಡಕ್ಕೆ ಸ್ವಲ್ಪ ಬಿನ್ನವಾಗಿರುವುದರಿಂದ ಕನ್ನಡದಿಂದ ಟಿಸಿಲೊಡೆದ ಭಾಷೆ ಎಂದು ವಿದ್ವಾಂಸರು ತಿಳಿಸುತ್ತಾರೆ. ಇದು ಬಹಳ ಹಿಂದಿನಿಂದಲೂ ಕಂಡುಬಂದದ್ದರಿಂದ, ಇದನ್ನು ಹಳೆ ಕನ್ನಡದ ಉತ್ತರದ ಪ್ರಭೇದ ಎಂದೇ ಪರಿಗಣಿಸಬಹುದು. ಶತಮಾನಗಳು ಕಳೆಯುತ್ತಾ ದಕ್ಷಿಣದ ಕನ್ನಡ ಜನಗಳ ಸಂಪರ್ಕ ಕಳೆಯುತ್ತಾ ಇತರೆ ಭಾಷೆಗಳ ಪ್ರಭಾವದಿಂದ ಮೂಲ ಭಾಷೆಯ ಪದಗಳು ಬದಲಾಗತೊಡಗಿದವು. ಹಾಗೆ ಗೊಲ್ಹಾರಿಯು ಕನ್ನಡದಿಂದ ಸ್ವಲ್ಪ ಬಿನ್ನವಾಗಿ ಕಾಣಿಸತೊಡಗಿತು.

೩. ಉರಾಳಿ ಭಾಷೆ

ಉರಾಳಿ ಭಾಷೆಯನ್ನು ಈಗಿನ ತಮಿಳು ನಾಡಿನ ಕೊಂಗುನಾಡು ಮತ್ತು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕಾಣಬಹುದು. ಉರಾಳಿ ಭಾಷೆಯನ್ನು ಮಾತನಾಡುವವರು ಪ್ರಮುಖವಾಗಿ ಉರಾಳಿ ಗೌಂಡರ್ಗಳು (ಗೌಡರು). ಉರಾಳಿ ಎಂಬ ಪದವನ್ನು "ಊರು" ಮತ್ತೆ "ಆಳು" (ಮನುಷ್ಯ) ಅಂದರೆ ಊರನ್ನು ಆಳುವವ, ಬಲ್ಲಾಳ ಅಥವ ಊರ ಗೌಡ ಎಂದು ಅರ್ಥೈಸಬಹುದು. ಹಿಂದೆ ಕೊಂಗುನಾಡಿನ ಬಯಲು ಪ್ರದೇಶಗಳಲ್ಲೂ ಉರಾಳಿ ಭಾಷಿಗರಿದ್ದರು, ಆದರೆ ಈಗ ಕೇವಲ ಕೊಂಗುನಾಡಿನ ಗುಡ್ಡಗಾಡು ಪ್ರದೇಶಗಳಾದ ಸತ್ಯಮಂಗಲ, ಬರ್ಗೂರು, ಅಂತಿಯೂರು ಪ್ರದೇಶಗಳಲ್ಲಿ ಮಾತ್ರ ಕಾಣಬಹುದು.

ಈ ಮೂರು ಭಾಷೆಗಳನ್ನು ಹೊರತುಪಡಿಸಿ ಕೈಕಾಡಿ ಭಾಷೆಯನ್ನು ಸೇರಿಸಬಹುದು.

ಕೈಕಾಡಿ ಭಾಷೆಯು ಈಗಿನ ಮಹಾರಾಷ್ಟ್ರದ ನಾಗಪುರ, ನಾಂದೇಡ್ ಮತ್ತು ತೆಲಂಗಾಣದ ಅದಿಲಾಬಾದ್ ಪ್ರದೇಶಗಳಲ್ಲಿ ಕಾಣಬಹುದು. ಭಾಷಾಶಾಸ್ತ್ರಜ್ಞರು ಈ ಭಾಷೆಯನ್ನು ತಮಿಳು-ಕನ್ನಡ ವಿಭಾಗಕ್ಕೆ ಸೇರಿಸಿದ್ದಾರೆ, ಆದರೆ ಇದು ಕನ್ನಡದಿಂದ ಬಂದದ್ದೋ ಅಥವಾ ತಮಿಳಿನಿಂದ ಬಂದದ್ದೋ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಕೈಕಾಡಿ ಭಾಷೆಯನ್ನು ತಮಿಳು ಭಾಷಾಗುಂಪಿನಡಿ ಸೇರಿಸಿದ್ದಾರೆ. ಆದರೆ ಕೈಕಾಡಿ ಭಾಷೆಯು ಒಟ್ಟಾರೆ ಕೇಳಲಿಕ್ಕೆ ದಕ್ಷಿಣ ಕರ್ನಾಟಕದ ಮಂಡ್ಯ, ಹಾಸನ ಮತ್ತು ತುಮಕೂರು ಪ್ರದೇಶದ ಕನ್ನಡಕ್ಕೆ ಬಹಳ ಹತ್ತಿರಬಿದ್ದಂತೆ ಕಂಡುಬರುತ್ತದೆ. ಭಾಷೆಯಲ್ಲಿ ಕನ್ನಡದ ವ -> ಬ ಬದಲಾವಣೆಯು ಕಾಣಬಹುದು ಹಾಗೆ ಕೆಲವೊಂದುಕಡೆ ತಮಿಳಿನ ಹಾಗೆ ವ ಕಾರವು ಉಳಿಸಿಕೊಂಡಿದೆ. ಉದಾಹರಣೆಗೆ ಕನ್ನಡದ "ಬಾ" ಪದವು ಕೈಕಾಡಿಯಲ್ಲಿ "ವಾ" ಎಂದಾಗುತ್ತದೆ. ಆದರೆ ವಿಶಿಷ್ಟವಾಗಿ ಕನ್ನಡದಲ್ಲಿ ಮಾತ್ರ ಕಾಣಬಹುದಾದಂತ "ಗೊತ್ತು" ಎಂಬ ಪದ ಕೈಕಾಡಿ ಭಾಷೆಯಲ್ಲಿ ನೋಡಬಹುದು. ಅಷ್ಟೇ ಅಲ್ಲದೆ ವಾಕ್ಯ ರಚನೆ, ಕ್ರಿಯಾಪದರೂಪವು ಮತ್ತು ನಾಮಪದರೂಪಗಳು ಕನ್ನಡ ಭಾಷೆಯಂತೆಯೇ ಇರುವುದು. ಹಾಗಾಗಿ ಕೈಕಾಡಿ ಭಾಷೆಯನ್ನು ಕನ್ನಡದಿಂದ ಬಂದಿರಲೂ ಬಹುದು. ಕೈಕಾಡಿ ಭಾಷೆಯು ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಣುವುದರಿಂದ ತೆಲುಗು ಮತ್ತು ಹಿಂದಿ ಭಾಷೆಯ ಪ್ರಭಾವವನ್ನು ಅಗಾಧವಾಗಿ ಕಾಣಬಹುದು. ಇದರ ಜೊತೆ ಮರಾಠಿಯ ಪ್ರಭಾವವನ್ನು ಕಾಣಬಹುದು.

ಮೇಲಿನ ವಿಡಿಯೋ ಕೈಕಾಡಿ ಭಾಷೆಯ ಒಂದು ತುಣುಕು.

Disclaimer: 

The above article is a reproduced from the Quora. I do not claim the rights or a authenticity of this article. The copyrights belongs to the user who wrote this in Quora. This is just a copy of that Quora answer. Visit this link for the Original Article. Thank you

close