Saturday, 9 December 2017

ಸುನೀಲ ನಭದಲ್ಲಿ ಸೂರ್ಯ ಗ್ರಹಣ


C:ಟಿ. ಗುರುರಾಜ್
ಈ ಮನುಷ್ಯನನ್ನು ಸಾರಾಸಗಟು ಒಪ್ಪಿಕೊಳ್ಳಲಿಕ್ಕೂ ಆಗದ , ಧಿಕ್ಕರಿಸಲಿಕ್ಕೂ ಆಗದ ಲಕ್ಷೋಪಲಕ್ಷ ಮಂದಿಯಲ್ಲಿ ನಾನೂ ಒಬ್ಬ.
ನಿರಂತರವಾದ ಓದು, ಹುಚ್ಚೆಬ್ಬಿಸಬಲ್ಲ ಬರೆವಣಿಗೆ , ತನ್ನದೇ ಆದ ತಿಕ್ಕಲುತನ ಮತ್ತು ವಿಕ್ಷಿಪ್ತತೆಗಳಿಂದಾಗಿಯೇ ಆತ್ಮೀಯನಾಗುವ ಮನುಷ್ಯ ಮತ್ತು ಆಪ್ತವೆನ್ನಿಸುವ ವ್ಯಕ್ತಿತ್ವ.
ಈ ನೆಲದ ಹೊಸ ತಲೆಮಾರಿನ ಅಸಂಖ್ಯ ಹುಡುಗ - ಹುಡುಗಿಯರಿಗೆ ಓದಿನ ಕಿಚ್ಚು ಹಚ್ಚಿಸಿದ ಈ ಅಲೆಮಾರಿ ಮನಸ್ಸಿನ ಗುರು, ತನ್ನ ಪರಮಾಪ್ತ ಶಿಷ್ಯನನ್ನೇ ಕೊಲ್ಲಿಸಲು ಸುಪಾರಿ ಕೊಟ್ಟರೆಂಬ ಕಾರಣದ ಅಡಿಯಲ್ಲಿ ಬಂಧಿತರಾಗಿದ್ದಾರೆ.
ಅರೋಗ್ಯ ಸರಿಯಿಲ್ಲದೆ ರೆಸ್ಟ್ ಮಾಡುತ್ತಿದ್ದ  ರವಿ ಬೆಳಗೆರೆ ಅರೆಸ್ಟ್ ಆಗಿದ್ದಾರೆ.
‘ ಹಾಯ್ ಬೆಂಗಳೂರ್ ‘ ಎಂಬ ಕಪ್ಪು ಬಿಳುಪಿನ ಟ್ಯಾಬ್ಲಾಯ್ಡ್ ಸುಂದರಿಯನ್ನು ಮುಂದಿಟ್ಟುಕೊಂಡೇ ಕೋಟಿಗಟ್ಟಲೆ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಬೆಳಗೆರೆ, ತನ್ನದೇ ಆದ ಲೆಕ್ಕವಿರದಷ್ಟು ತಪ್ಪುಗಳಿಂದಾಗಿ ಶತ್ರು ಪಡೆಯನ್ನೂ ಕಟ್ಟಿಕೊಂಡಿದ್ದಾರೆ.
ಪರಮಗುರು ಬೆಳಗೆರೆ ಹಾಗೂ ಪರಮಾಪ್ತ  ಶಿಷ್ಯನಾಗಿದ್ದ
ಸುನಿಲ್ ಹೆಗ್ಗರವಳ್ಳಿ ನಡುವಿನ ಕೆಲವೊಂದು                ‘ ಸಂಬಂಧ’ ಗಳು ಹದಗೆಟ್ಟ ಫಲಶ್ರುತಿ ಈಗ ಅತಿರೇಖ ತಲುಪಿದೆ.
ಕಾಸು ಪಡೆದುಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡ ಸುಪಾರಿ ಹಂತಕನೊಬ್ಬ ನೀಡಿದ ಹೇಳಿಕೆಯನ್ನೇ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ  ಪೊಲೀಸರು, ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ.
ಇದೇ ಹಂತಕ ಅಥವಾ ಇವನಂತಹ ಮತ್ಯಾರೋ ವೃತ್ತಿನಿರತ ಕೊಲೆಗಡುಕನೊಬ್ಬ ರಾಜ್ಯದ  ಯಾರೋ ಶಾಸಕ - ಮಂತ್ರಿಯ ವಿರುದ್ಧ ‘ ಅವರು ಇವರನ್ನು ಕೊಲ್ಲಲು ನನಗೆ ಸುಪಾರಿ ನೀಡಿದ್ದರು ‘ ಎಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ಪೊಲೀಸರು ಆ ಪ್ರಭಾವೀ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾ..?
ಹಾಗೆ ಬಂಧಿಸಿದಲ್ಲಿ ಅದಕ್ಕೆ ಕಾನೂನಿನ ಮಾನ್ಯತೆ ದೊರಕುತ್ತದಾ.., ಹಣಕ್ಕಾಗಿ ಕೊಲೆಯನ್ನೇ ಮಾಡಲು ಸಿದ್ಧವಿರುವ ಮನುಷ್ಯನೊಬ್ಬ , ಅದೇ ಹಣಕ್ಕಾಗಿ ಈ ಬಗೆಯ ಸುಳ್ಳು ಹೇಳಿಕೆಗಳನ್ನು ಕೊಡಲಿಕ್ಕೂ ಸಾಧ್ಯವಿದೆಯಲ್ಲವೇ..?
ರವಿ ಬೆಳಗೆರೆ ದೋಷಿಯೋ - ನಿರ್ದೋಷಿಯೋ ಎಂಬುದು ಕಾನೂನಿನ ವ್ಯಾಪ್ತಿಗೆ ಒಳಪಟ್ಟ ವಿಚಾರ. ಆ ಬಗ್ಗೆ ಇಲ್ಲಿ ಚರ್ಚೆ ಅನಗತ್ಯ.
ಈ ಪ್ರಕರಣದಲ್ಲಿ ಸುಪಾರಿ ಹಂತಕ ನೀಡಿದ ಹೇಳಿಕೆ ಮಾತ್ರವೇ ದೂರು ಎಂಬುದನ್ನು ನೆನಪಿನಲ್ಲಿಡಬೇಕು. ಸುನಿಲ್ ಹೆಗ್ಗರವಳ್ಳಿ ಪೊಲೀಸರು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ  ದೂರಿಗೆ ಹೇಳಿಕೆ ಕೊಟ್ಟಿದ್ದಾರೆಯೇ ಹೊರತು ದೂರು ದಾಖಲಿಸಿಲ್ಲ ಎಂಬುದು ಗಮನಾರ್ಹ.
ಈ ಬಗೆಯ ಹಂತಕರ ಮಾತುಗಳನ್ನೇ ಆಧರಿಸಿ ಪ್ರಕರಣಗಳನ್ನು ದಾಖಲಿಸಿಕ್ಳುವುದು ಆರೋಗ್ಯಕರ ಸಮಾಜದ ದೃಷ್ಟಿಯಿಂದ ತೀರಾ ಅಪಾಯಕಾರಿ. ಈ ಘಟನೆಯನ್ನು ರಾಜ್ಯ ಸರ್ಕಾರ ಮತ್ತು ನ್ಯಾಯಾಂಗ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ , ಮುಂದಿನ ದಿನಗಳಿಗೆ ಇದೊಂದು pricident ಆಗಿಬಿಡುವ ಸಾಧ್ಯಗಳಿವೆ ಎಂಬುದನ್ನು ಮರೆಯಬಾರದು.
ಬೆಳಗೆರೆ ತಪ್ಪು ಮಾಡಿರುವುದೇ ನಿಜವಾದರೆ ಅವರಿಗೆ ಖಂಡಿತಾ ಶಿಕ್ಷೆಯಾಗಲೇಬೇಕು. ಆದರೆ ಕೇವಲ ಆರೋಪಿಯ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂಬಂತೆ ಬಿಂಬಿಸುವುದು ಸರಿಯಾದ ಕ್ರಮವಲ್ಲ.
ಹಾಗಂಥ ರವಿ ಬೆಳಗೆರೆ ತಪ್ಪುಗಳನ್ನೇ ಮಾಡದ ಒಪ್ಪವಾದ ಮಹಾಪುರುಷ ಎಂದು ಹೇಳುತ್ತಿಲ್ಲ. ಮನುಷ್ಯ ಸಹಜವಾದ ದುರ್ಗುಣಗಳು  - ದೌರ್ಬಲ್ಯಗಳಿಗೆ ಅವರೂ ಹೊರತಲ್ಲ.
ಸುನಿಲ್ ಹೆಗ್ಗರವಳ್ಳಿಯೂ ಸೇರಿದಂತೆ, ಈ ಬಂಧನದ ಹಿಂದಿರುವ ಅಧಿಕಾರಿಗಳು ಮತ್ತು ಇರಲೇಬಹುದಾದ ಕೆಲವೊಂದು ಕಾಣದ ಕೈಗಳು ಒಂದೇ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು.
ಶಿಷ್ಯನನ್ನು ಕೊಲ್ಲಿಸುವ ಪ್ರಯತ್ನ ನಿಜವೇ ಆಗಿದ್ದರೆ ಬೆಳಗೆರೆಗೆ ಗುರು ಎನ್ನಿಸಿಕೊಳ್ಳುವ ಯಾವ ಅರ್ಹತೆಗಳೂ ಇರುವುದಿಲ್ಲ. ಗುರು ಕೊಟ್ಟ ಅವಕಾಶವನ್ನು ಹೆಗ್ಗರವಳ್ಳಿ ತಪ್ಪಾಗಿ ಬಳಸಿಕೊಂಡಿದ್ದರೆ ಆತನೂ ಸಂಭಾವಿತ ಶಿಷ್ಯನಲ್ಲ.
ಈ ಸಂಗತಿ ಪೊಲೀಸು - ಕೋರ್ಟು , ಕಾನೂನು - ಕಟ್ಟಳೆಗಳಿಗಿಂತ ಹಿರಿದಾದುದು. ಅವರಿಬ್ಬರ ಆತ್ಮ ಸಾಕ್ಷಿಗೆ ಮಾತ್ರವೇ ಗೊತ್ತಿರುವಂಥದು.
ನಮ್ಮ ಮಾಧ್ಯಮಗಳೂ ಸಹ ಇಂಥ ವಿಚಾರಗಳಲ್ಲಿ
ಏಕ ಪಕ್ಷೀಯವೆಂಬಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಮಾಧ್ಯಮಗಳ ಬಗ್ಗೆ ಜನ ಸಾಮಾನ್ಯರಿಗೆ ನಂಬಿಕೆ ಬರುವಂತೆಯೇ ವರ್ತಿಸಬೇಕು.
ಒಂದು ವೇಳೆ ರವಿ ಬೆಳಗೆರೆ ಇಂಥದ್ದೊಂದು ಸುಪಾರಿ ಕೊಟ್ಟಿದ್ದರೆಂಬುದು ನಿಜವೇ ಆದರೆ , ಅದು ಅಸಹ್ಯದ ಪರಮಾವಧಿ.
ಹಲವು ವರ್ಷಗಳ ಹಿಂದೆ ರವಿ ಬೆಳಗೆರೆ ನನಗೆ ಬರೆದಿದ್ದ ಪತ್ರವೊಂದರ ನಾಲ್ಕು ಸಾಲುಗಳನ್ನು ಇಲ್ಲಿ ನೆನೆಯುತ್ತೇನೆ.
- ಗುರು, ನನಗೆ ದ್ವೇಷಗಳನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲ. ಹಾಗೂ ಒಂದು ವೇಕೆ ಯಾರನ್ನಾದರೂ ದ್ವೇಷಿಸಲೇಬೇಕೆನ್ನಿಸಿದರೆ  ಒಂದು ಕಪ್ ಚಾ ಕುಡಿದು ಮರೆತು ಬಿಡುತ್ತೇನೆ. ನೀನು ನನಗಿಂತಲೂ ಚಿಕ್ಕವನು, ನನಗಿಂತಲೂ ಎತ್ತರಕ್ಕೆ ಬೆಳೆಯಬಹುದಾದವನು. ದ್ವೇಷಿಸುವುದನ್ನು ಬಿಟ್ಟುಬಿಡು. ‘
- ಇದು ಬೆಳಗೆರೆ ಬರೆದಿದ್ದ ಪತ್ರದ ತುಣುಕು.
ಬೆಳಗೆರೆ ನಾನು ನಿಮ್ಮ ಮಾತುಗಳನ್ನು ಪಾಲಿಸಿದ್ದೇನೆ. ನೀವು ಮರೆತಿದ್ದರೆ ನೆನಪು ಮಾಡಿಕೊಳ್ಳಿ.
ಕ್ಷಮಿಸುವ ಔದಾರ್ಯಕ್ಕಿಂತ ಘನವಾದುದು ಮತ್ತೊಂದಿಲ್ಲ ಎಂದು ನಾನು ನಿಮಗೆ ಹೇಳಿಕೊಡಬೇಕಾಗಿಲ್ಲ.
ಗೆಳೆಯ ಸುನಿಲ್ ಹೆಗ್ಗರವಳ್ಳಿ, ನಿಮ್ಮಿಂದ ಅಂತಹ ಆಘಾತಕಾರೀ ತಪ್ಪು ನಡೆದಿರುವುದೇ ನಿಜವಾದರೆ ರವಿ ಮುಂದೆ ಕುಂತು, ಖುಲ್ಲಂ - ಖುಲ್ಲಾ ಸಣ್ಣದೊಂದು ಕ್ಷಮೆ ಕೇಳಿ ನಿರುಮ್ಮಳವಾಗಿಬಿಡಿ.
ಬೆಂದ ಮನೆಯಲ್ಲೂ  ಗಳು ಹಿರಿಯುವ ಹುಳುಗಳು ನಾಳೆ ಎಲ್ಲರ ಮನೆಗೂ ಬರಬಲ್ಲವೆಂಬ ಸತ್ಯ ಎಲ್ಲರಿಗೂ ಅರ್ಥವಾಗಿಬಿಟ್ಟರೆ ಸಾಕಷ್ಟು ಪ್ರಶ್ನೆಗಳಿಗೆ ಥಟ್ ಅಂತ ಉತ್ತರ ಸಿಕ್ಕೇ ಬಿಡುತ್ತದೆ.
ನಮಸ್ಕಾರ

No comments:

Post a Comment