8 Apr 2019

ಬಿಜೆಪಿಯ ಪ್ರಣಾಳಿಕೆ ಎಂಬ ಬೂಟಾಟಿಕೆ : ಮತ್ತದೇ ಕೊಳಕು ಕೇಸರಿ ಮಾಲಿಕೆ!

C: ನಾನುಗೌರಿ

ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಸಾಕಷ್ಟು ಹಿಂದೇಟು ಹಾಕಿದ ಪಾರ್ಟಿಯೀಗ ಅದನ್ನು ಇವತ್ತು ಬಿಡುಗಡೆ ಮಾಡಿದೆ. ಅದರ ಮುಖಪುಟವೇ ಅದೆಷ್ಟು ಜನದ್ರೋಹಿ ಎಂದು ಸಾರುವಂತಿದೆ! ಕೇವಲ ಮೋದಿಯ ದೊಡ್ಡ ಭಾವಚಿತ್ರ ಹಾಕಿ ಈಗಾಗಲೇ ಜೋರಾಗಿರುವ ವ್ಯಕ್ತಿ ಪೂಜೆಗೆ ಮತ್ತಷ್ಟು ಪುಷ್ಠಿ ನೀಡಲು ಮುಂದಾಗಿದೆ.


ಇದನ್ನು ಬರೀ ಬೂಟಾಟಿಕೆ ಎಂದು ಕೈ ಬಿಡುವಂತಿಲ್ಲ. 2014ರಲ್ಲಿ ಕೊಟ್ಟ ಭರವಸೆ ಏನಾದವು ಎಂದು ಈ ಕೂಡಲೇ ಧ್ವನಿ ಎತ್ತುವ ಅಗತ್ಯವಿದೆ. ಎಲ್ಲ ಪ್ರಣಾಳಿಕೆಗಳು ಎಲ್ಲ ವರ್ಗ ಕವರ್ ಮಾಡುವಂತೆ ಇದರಲ್ಲೂ ಇದೆ. ಆದರೆ ಇದು ದೊಡ್ಡ ಬೂಟಾಟಿಕೆ ಎಂಬುದಕ್ಕೆ ಸಾಕ್ಷಿಯಾಗಿ ಬಿಜೆಪಿ 1991ರಿಂದ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡುತ್ತಲೇ ಇರುವ ಅಸಾಧ್ಯ ಸಂಗತಿಗಳು ಮತ್ತೆ ಇಲ್ಲಿ ರಿಪೀಟ್ ಆಗಿವೆ..


ಭಾರತ ಸುರಕ್ಷಿತವಾಗಿದೆ ಎನ್ನುತ್ತಲೇ ಬೊಂಬಡಾ ಹೊಡೆಯುವ ಇವರೆಲ್ಲ, ಪ್ರಣಾಳಿಕೆಯಲ್ಲಿ ಆದ್ಯತೆ ಕೊಟ್ಟಿರುವುದು ಸೈನ್ಯವನ್ನು ಗಟ್ಟಿಗೊಳಿಸಲು ವಿದೇಶದಿಂದ ಜಾಸ್ತಿ ಸೈನಿಕ ಸಲಕರಣೆಗಳನ್ನು ಖರೀದಿಸಲು!
ಈಗ ಮತ್ತೆ ಕಾಶ್ಮೀರದ ವಿಷಯವನ್ನು 111ನೇ ಬಾರಿಗೆ ಪ್ರಸ್ತಾಪಿಸಿದ್ದಾರೆ. 370 ಕಲಂ ತೆಗೆಯಲು ರೆಡಿಯಂತೆ! ಇಷ್ಟು ದಿನ ಅಂದರೆ 5 ವರ್ಷ ಕಾಲ ಮುಚ್ಚಿಕೊಂಡು ಕೂತದ್ದೇಕೆ?


ರಾಮ ಮಂದಿರ ನಿರ್ಮಿಸಲು ಎಲ್ಲ ಪ್ರಯತ್ನ ಮಾಡುತ್ತಾರಂತೆ! ಬಹುಷ: ಅವರ ಹಿಂದಿನೆಲ್ಲ ಪ್ರಣಾಳಿಕೆ ನೋಡಿದರೆ ಈ ಸಲ ಅವರು 9ನೇ ರಾಮಮಂದಿರ ನಿರ್ಮಿಸಲು ಹೊರಟಿದ್ದಾರೆ! ಇವೆಲ್ಲವನ್ನೂ ಸುಮ್ಮನೇ ನೆಗ್ಲೆಕ್ಟ್ ಮಾಡಲಾಗಲ್ಲ. ಏಕೆಂದರೆ ಇವೆಲ್ಲ ಚುನಾವಣಾ ಅಫೀಮುಗಳೇ ಆಗಿವೆಯಲ್ಲ?
‘ರಾಷ್ಟ್ರೀಯ ನಾಗರಿಕ ನೋಂದಣಿ’ (ಎನ್‍ಆರ್‍ಸಿ)ಯನ್ನು ದೇಶಾದ್ಯಂತ ವಿಸ್ತರಿಸುತ್ತಾರಂತೆ! ಈಗ ಈ ಎನ್‍ಆರಸಿ ಕಾರಣಕ್ಕಾಗಿಯೇ ಈಶಾನ್ಯ ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರು ಜೀವನ್ಮರಣದ ಪ್ರಶ್ನೆ ಎದುರಿಸುತ್ತಿದ್ದಾರೆ. ಇದರ ವಿಸ್ತರಣೆ ಎಂದರೆ, ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನಿಸುವ ಕ್ರೂರ ಆಳ್ವಿಕೆ.. ಅದರ ಪ್ರಯೋಗವನ್ನು ಈಗಾಗಲೇ ಅನಧಿಕೃತವಾಗಿ ಉತ್ತರ ಪ್ರದೇಶದಲ್ಲಿ ಆರಂಭಿಸಲಾಗಿದೆ.


ರೈತರ ಆದಾಯ ದುಪ್ಪಟ್ಟು ಮಾಡುವ ಆಶ್ವಾಸನೆ ಮತ್ತೆ ಪುನರಾವರ್ತನೆಯಾಗಿದೆ. ಕೃಷಿ ರಂಗವನ್ನೇ ಬರ್ಬಾದ್ ಮಾಡಿದ ಮೋದಿ ಸರ್ಕಾರ ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಮಾತಾಡುವುದೇ ಹಾಸ್ಯಾಸ್ಪದ ಅಲ್ಲವೇ?
ಇಡೀ ಪ್ರಣಾಳಿಕೆಯನ್ನು ತಿರುವಿ ಹಾಕಿದರೆ ಅಲ್ಲಿ ಯಾವ ಪ್ರಾಮಾಣಿಕ ಆಶಯವೂ ಕಾಣದು. ಆದರೆ ಮತ್ತೆ ಎಂದಿನಂತೆ ಜನರನ್ನು ಮರಳು ಮಾಡುವ ಮಂದಿರ, ಸೈನ್ಯದ ವಿಚಾರಗಳಿಗೇ ಆದ್ಯತೆ ನೀಡಲಾಗಿದೆ. ಯುವಜನರ ಬಗ್ಗೆ, ಉದ್ಯೋಗ ಸೃಷ್ಟಿಯ ಬಗ್ಗೆ ಮಾತಾಡುವ ಹಕ್ಕನ್ನೇ ಕಳೆದುಕೊಂಡಿರುವ ಮೋದಿ ಟೀಮ್, ಕಪ್ಪು ಹಣದ ಬಗ್ಗೆಯೂ ಮೌನವಾಗಿದೆ!


ಕಪ್ಪುಹಣದಲ್ಲೇ ಮುಳುಗಿ, ತೇಲುತ್ತಿರುವ ಪಾರ್ಟಿ ಕಾಟಾಚಾರಕ್ಕೆ ಒಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎಂದಿನಂತೆ ಅದರಲ್ಲಿ ನಂಜಿನ ವಾಸನೆ ಎದ್ದು ಹೊಡೆಯುವುದರ ಜೊತೆಗೆ, ಬಿಜೆಪಿ ಹಿಪಾಕ್ರಸಿಯೂ ಅಂತರ್ಗತವಾಗಿದೆ.


close