ದೇಶದಲ್ಲೇ ಮೊತ್ತ ಮೊದಲ ಸ್ಟಾರ್ ಪತ್ರಕರ್ತನಾಗಿ ಗುರುತಿಸಿಕೊಂಡಿದ್ದ ರವಿ ಬೆಳಗೆರೆ ತನ್ನ ಆತ್ಮಚರಿತ್ರೆ ಬರೆಯುತ್ತಿದ್ದಾರಾ? ಅವರ ಅವಿಷ್ಟೂ ಖಾಸ್ ಬಾತ್ ಒಂದು ನಿಲುಕಿಗೆ ಸಿಗದಂತವು. ನೋವು,ಅವಮಾನ,ಹಿಂಸೆ, ಎಲ್ಲವನ್ನೂ ಮೀರಿ, ಪದೇ ಪದೆ ಬಡಿದ ಬದುಕಿನ ಜೊತೆಗೇ ಬಡಿದಾಡಿ ಸೋಲಿಗೂ ಮಿಗಿಲು ಬೆಳೆದು ’ಹೆಂಗೆ ಬೆಳೆದಾ ನೋಡು ಬೆಳಗೆರೆ’ ಅಂತನ್ನಿಸಿಕೊಂಡು ಬೆಳೆಯುತ್ತಲೇ, ಬದುಕುತ್ತಲೇ ನಡೆದು ಬಂದ ಬೆಳಗೆರೆಯ ಬದುಕೊಂದು ಶುದ್ದ ಯುದ್ದ! ನಡು ನಡುವೆ ವಿರಾಮ ಮತ್ತೆ ಅದೇ ಸಂಗ್ರಾಮ.
ಬೆಳಗೆರೆಯನ್ನ ದೇಶದಲ್ಲೇ ಮೊತ್ತ ಮೊದಲ ಸ್ಟಾರ್ ಪತ್ರಕರ್ತ ಅಂದೆ ಇದು ಅತಿಶಯೋಕ್ತಿ ಅಂತನ್ನಿಸಿತಾ? ನನಗೆ ಉತ್ತರ ಬೇಕಿದೆ. ದೇಶದ ಯಾವ ಪತ್ರಕರ್ತನ ಹಸ್ತಾಕ್ಷರಕ್ಕಾಗಿ ಜನ ಮುಗಿ ಬೀಳುತ್ತಿದ್ದರು? ದೇಶದ ಯಾವ ಪತ್ರಕರ್ತನ ಪುಸ್ತಕ ಬಿಡುಗಡೆಗೆ ಪೊಲೀಸ್ ಬಂದೋ ಬಸ್ತ್ ಹಾಕಬೇಕಿತ್ತು? ದೇಶದ ಯಾವ ಪತ್ರಕರ್ತನ ಸುತ್ತುವರಿಯುವ ಅಭಿಮಾನಿಗಳ ದಂಡನ್ನು ಚದುರಿಸಲು ಜನ ಮಾನವ ಸರಪಣಿ ಮಾಡಬೇಕಿತ್ತು? ಅದೆಲ್ಲವನ್ನೂ ರವಿ ಬೆಳಗೆರೆ ನೋಡಿದ್ದರು! ರವಿ ಬೆಳಗೆರೆ ಇಂದು ಕೋರ್ಟಿಗೆ ಬರುತ್ತಾರೆ ಎಂದರೆ ಕೋರ್ಟಿನ ತುಂಬಾ ಸಾವಿರಾರು ಜನ ಜಾತ್ರೆ ನೆರೆಯುತ್ತಿದ್ದ ಕಾಲವಿತ್ತು! ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ರವಿ ಬೆಳಗೆರೆ ತನ್ನ ಕಾರು ಹತ್ತಲೂ ಅವರ ಆಪ್ತ ಅಭಿಮಾನಿಗಳು ಮಾನವ ಸರಪಣಿಯಾಗಿ ಜನರನ್ನ ಚದುರಿಸಬೇಕಾಗಿ ಬಂತು! ದಟ್ ಇಸ್ ಬೆಳ್ಗೆರೇ!
ರವಿ ಬೆಳಗೆರೆಯ ಪಾಪಿಗಳ ಲೋಕದಲ್ಲಿ ಪುಸ್ತಕವೇ ನೂರಾರು ಸಿನೇಮಾಗಳಿಗೆ ಪ್ರೇರಣೆಯಾಯಿತು. ಕನ್ನಡದ ಹಲವು ದಾಖಲೆಯ ಚಿತ್ರ ಓಂ ಬೆಳಗೆರೆಯ ಪಾಪಿಗಳ ಲೋಕ ಪುಸ್ತಕದ ಪ್ರೇರಣೆಯಿಂದ ಹುಟ್ಟಿದ್ದು! ಇವತ್ತಿಗೂ ಓಂ ಚಿತ್ರ ರಿಲೀಸ್ ಆದರೆ ಭರ್ತಿ ಟಾಕೀಸು ವಾರಗಟ್ಟಲೆ ಓಡುತ್ತವೆ. ಬೆಳಗೆರೆ ಬರೆಯುತ್ತಿದ್ದ ಕಥೆಗಳಾದರೂ ಎಂಥವು? ದೇಶದಲ್ಲೇ ಪತ್ರಕರ್ತನೊಬ್ಬನ ಪುಸ್ತಕ ಆ ಪಾಟಿ ಮಾರಾಟವಾಗಿದ್ದೆಂದರೆ ಅನುಮಾನವೇ ಬೇಡ ಅದು ರವಿ ಬೆಳಗೆರೆಯದ್ದು ಮಾತ್ರ! ಒಂದು ಹಿಮಾಲಯನ್ ಬ್ಲಂಡರ್ ಪ್ರಿಂಟಾಗಿ ಮಾರುಕಟ್ಟೆಗೆ ಬಿದ್ದ ತಿಂಗಳೊಪ್ಪತ್ತಿನಲ್ಲೇ ಖಲಾಸ್! ಪ್ರತಿಗಳೇ ಮುಗಿದು ಹೋಗುತ್ತಿದ್ದವು..
ರವಿ ಬೆಳಗೆರೆಯವರನ್ನ ಠೀಕಿಸಲು ಹಲವು ಕಾರಣ ಸಿಗಬಹುದು. ಹಾಗೆ ಧಿಕ್ಕರಿಸುವವರೂ ಕಿಕ್ಕಿರಿದಿರಬಹುದು ಆದರೆ ಬೆಳಗೆರೆಯ ಬರಹದ ಆಕರ್ಷಣೆಯನ್ನ, ರಾಕ್ಷಸ ಪ್ರತಿಭೆಯನ್ನ ಯಾರಿಂದಲೂ ಅಲ್ಲಗಳೆಯುವುದು ಸಾಧ್ಯವಿಲ್ಲ!. ಇವತ್ತಿನ ವಿರೋಧಗಳು ನಾಳೆಗೂ ಉಳಿದಿರುವುದಿಲ್ಲ. ಇಂದಿನ ವಿವಾಧಗಳು ನಾಳೆಗೆಲ್ಲೋ ಸಾಯುತ್ತವೆ. ಇವತ್ತಿನ ಶತ್ರು ನಾಡಿದ್ದಿಗೆ ಬಂದು ಕೈ ಚಾಚುತ್ತಾನೆ ಆದರೆ ಬೆಳೆಗೆರೆಯ ಕಾಲದಾಚೆಗೂ ಆ ಪುಸ್ತಕಗಳು ಉಳಿದಿರುತ್ತವೆ. ಬಂಗಾರದಂತಹ ಆಕರ್ಷಕ ಶೈಲಿಯನ್ನ ಯಾರಿಂದಲೂ ಅಳಿಸೋದು ಸಾಧ್ಯವಿಲ್ಲ! ಮೂರು ದಶಕದಲ್ಲಿ ಕೋಟ್ಯಾಂತರ ಜನರನ್ನ ಪ್ರಭಾವಿಸಿ ಲಕ್ಷಾಂತರ ಜನರನ್ನ ಅಕ್ಷರಲೋಕದತ್ತ ಸೆಳೆದು ಸದಾ ಪ್ರೇರಣೆಯಾಗಿ ನಡೆದು ಬಂದ ಬೆಳಗೆರೆಯರಿಗೆ ಇದು ಆತ್ಮಚರಿತ್ರೆ ಬರೆಯುವ ಸಮಯವಾ?
ಇನ್ನೇನು ಬೆಳಗೆರೆ ಮುಗಿದೇ ಹೋದ ಕಣ್ರೋ ಎಂದು ಗುಹಾಪ್ರಲಾಪದಲ್ಲಿದ್ದವರೆಲ್ಲರನ್ನ ನಿಬ್ಬೆರಗಾಗಿಸಿ ಪುಲ್ವಾಮಕ್ಕೆ, ಬಾಲಾಕೋಟಿಗೆ ಹೋಗಿ ಯುದ್ದ ವಿಮಾನಗಳ ಹಾರಾಟ ನೋಡುತ್ತಾ, ಬಾಂಬುಗಳ ಆಕಳಿಕೆಗೆ ನಡುಗದೇ ನಿಂತು ವರದಿ ಮಾಡಿ ಬರುತ್ತಾರೆ ಬೆಳಗೆರೆ.. ಮಗನಿಗೆ ಅದೊಂದು ಸ್ಕೂಲಿನಲ್ಲಿ ಕೇವಲ ’ರವಿ ಬೆಳಗೆರೆ ಮಗ ಎನ್ನುವ ಕಾರಣಕ್ಕೆ ಸೀಟು ಕೊಡದಿದ್ದಾಗ ಅದೇ ಸೆಡವಿನಲ್ಲಿ ಅದ್ಭುತವಾದೊಂದು ಸ್ಕೂಲನ್ನ ಕಟ್ಟಿ ಅದಕ್ಕೆ ಪ್ರಾರ್ಥನಾ ಎಂದು ಹೆಸರಿಟ್ಟು ಇಂದು ಅನಾಮತ್ತು ಎಂಟು ಸಾವಿರ ವಿಧ್ಯಾರ್ಥಿಗಳು ಅಲ್ಲಿ ಒಂದೇ ಒಂದು ರೂಪಾಯಿ ಡೊನೇಶನ್ ಕೊಡದೆ ಓದುತ್ತಿದ್ದಾರೆ! ಬೆಳಗೆರೆಯ ಬದುಕು ನಿಚ್ಚಳವಾಗಿ ಒಂದು ಪಾಠ! ಅಲ್ಲಿ ತಪ್ಪುಗಳೂ ಇವೆ ಮತ್ತು ಸರಿಯೂ ಇವೆ. ಅಂಥಹದ್ದೂಂದು ತೂಕದ ಕೃತಿ ಕಾಡ ಘಾಡ ಮೌನದಲ್ಲಿ ಟಿಸಿಲೊಡೆಯುತ್ತಿದೆಯಾ ?
ನಿಮಗೆ ತ.ರಾ.ಸು. ಕಾದಂಬರಿಗಳು ಗೊತ್ತು, ಕಾರಂತರ ಕಾದಂಬರಿಗಳೂ ಗೊತ್ತು! ಆದರೆ ಅವರು ಬದುಕಿದ್ದಾಗಿನ ವೈರುಧ್ಯಗಳನ್ನ ಹೇಳಿ ನೋಡೋಣ? ಸಾಧ್ಯವೇ ಇಲ್ಲ.. ಯಾರೋ ಎಲ್ಲೋ ನಿಂತು ಹೇಳಿದ್ದಕ್ಕಿಂತಲೂ, ಹೇಳುವುದಕ್ಕಿಂತಲೂ ಬೆಳಗೆರೆಯೇ ತನ್ನ ಬದುಕಿನ ಬಗ್ಗೆ ಬರೆಯಬೇಕು. ತನ್ನ ಸೋಲು ಮತ್ತು ಸೋಲನ್ನ ಸೋಲಿಸಿ ಗೆದ್ದದ್ದು ಆ ಗೆಲುವಿನ ಗೆಲ್ಲು ತಲುಪಲು ಹೆಣಗಿದ್ದು ಇದೆಲ್ಲವನ್ನೂ ದಾಖಲಿಸಬೇಕು. ಹಾಗಿನದ್ದೊಂದು ರವಿ ಬೆಳಗೆರೆ ಆತ್ಮಚರಿತ್ರೆ ಈ ಮಳೆಗಾಲದಿಂದ ಜೋಯಿಡಾದ ಕಾಡಿನಲ್ಲಿ ಮೊಳಕೆಯಾಗಲಿದೆಯಾ?
ಸ್ವಲ್ಪ ಕಾಯಿರಿ, ಉತ್ತರ ಬೆಳಗೆರೆಯೇ ಕೊಡಲಿದ್ದಾರೆ..