ಮಂತ್ರ ಮಾಂಗಲ್ಯ ಎಂಬುದು ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯಾಗಿದೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು. ವರದಕ್ಷಿಣೆ, ಗೊಡ್ಡು ಸಂಪ್ರದಾಯಗಳು, ಅರ್ಥವಿಲ್ಲದ ಆಚರಣೆಗಳು, ಮತ್ತು ಆಡಂಬರವನ್ನು ಒಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಕುವೆಂಪುರವರು 1960ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಮದುವೆ.
Download Mantra Mangalya Book here
ಮಂತ್ರ ಮಾಂಗಲ್ಯ - ಡೌನ್ಲೋಡ್ ಮಾಡಿ.
ನಿಮ್ಮಿಬ್ಬರ ವಿವಾಹದ ಈ ಸಂದರ್ಭದಲ್ಲಿ ಈ ಕೆಲವು ಮೂಲಭೂತ ಸ್ವಾತಂತ್ರ್ಯದ ಸಂದೇಶಗಳನ್ನು
ತಿಳಿಸಿದ್ದೇವೆ. ದಯವಿಟ್ಟು ನೀವಿಬ್ಬರೂ ಗಮನವಿಟ್ಟು ಕೇಳಿಕೊಳ್ಳಿರಿ.
೧. ಈ ದಿನ ಇಲ್ಲಿ ಈ ರೀತಿ ಮದುವೆಯಾಗುವುದರ ಮೂಲಕ ನೀವು ನಿಮ್ಮ ಎಲ್ಲಾ ಮಾನಸಿಕ ಮತ್ತು
ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ.
೨. ನೀವು ಇನ್ನು ಈ ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ.
೩. ಹಾಗೆಯೇ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
೪. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ
ಮಾಡಿದ್ದೇವೆ.
೫. ನಿಮ್ಮನ್ನು ಇಂದು ಎಲ್ಲಾ ಸಂಕಚಿತ
ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ
೬.
ನಿಮ್ಮನ್ನು ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
೭. ನಿಮ್ಮನ್ನು ಎಲ್ಲಾ ಅಸತ್ಯ ಮತ್ತು ಮೂಢನಂಬಿಕೆಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
೮. ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಇದರೊಳಗೆ ನೀನು ಬೇರೆ ಸುಮುಹೂರ್ತಗಳನ್ನೂ,
ರಾಹುಕಾಲ, ಗುಳಿಕಕಾಲಗಳನ್ನೂ ನೋಡುವ ಅಗತ್ಯವಿಲ್ಲ. ಕಾಲವು ನಿರ್ಗುಣ.
೯. ಎಂದೂ ಸಂಪಾದಿಸಲು, ಸೃಷ್ಟಿಸಲು, ಕೂಡಿಡಲು ಸಾಧ್ಯವೇ ಇಲ್ಲದ, ಮನುಷ್ಯನ ಜೀವಿತಕಾಲದ ಪ್ರತಿ
ಕ್ಷಣವೂ ಅತ್ಯಮೂಲ್ಯ. ಯಾರು ಈ ಸತ್ಯವನ್ನು ಅರಿಯುತ್ತಾರೋ ಅವರು ತಮ್ಮ ಕರ್ತವ್ಯ ಮತ್ತು
ನಡವಳಿಕೆಗಳಿಂದ ಕಾಲವನ್ನು ಒಳ್ಳೆಯ ಅಥವಾ ಕೆಟ್ಟ ಕಾಲವನ್ನಾಗಿ ಪರಿವರ್ತಿಸಬಲ್ಲರು.
೧೦. ನೀವು ಯಾವುದೇ ಮನೆದೇವರು ಅಥವಾ ಕುಲದೇವರುಗಳ ಅಡಿಯಾಳಾಗಿ ಬದುಕಬೇಕಾಗಿಲ್ಲ. ಮನುಷ್ಯ
ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು.
೧೧. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಗಿಂತ ಮೇಲು ಎಂದು ಹೇಳುವ ಎಲ್ಲ ಧರ್ಮಗಳನ್ನೂ,
ಎಲ್ಲ ಸಂಪ್ರದಾಯಗಳನ್ನೂ ನೀವು ಇಂದು ತಿರಸ್ಕರಿಸಿದ್ದೀರಿ.
೧೨. ಹೆಂಡತಿಯಾಗಲೀ, ಗಂಡನಾಗಲೀ ಪರಸ್ಪರ ಅಧೀನರೂ ಅಲ್ಲ, ಆಜ್ಞಾನುವರ್ತಿಯೂ ಅಲ್ಲ. ಹೆಂಡತಿಯೂ
ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ.
೧೩. ಗಂಡ – ಹೆಂಡಿರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿಯೊಂದೇ.
ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ
ವ್ಯರ್ಥ, ಯಾವ ಯಾವ ಶಾಸ್ತ್ರಾಚಾರದ ಪ್ರಕಾರ ಮದುವೆಯಾದರೂ ವ್ಯರ್ಥ.
೧೪. ದೇವರ ಬಗ್ಗೆ ಎಂದೂ ಸುಳ್ಳು ಹೇಳಕೂಡದು. ನಿಮ್ಮ ಅನುಭವ, ನಿಮಗೆ ದೇವರು ಇಲ್ಲವೆಂದು
ತಿಳಿಸಿದರೆ ದೇವರು ಇಲ್ಲವೆಂದು ಹೇಳಿ.
೧೫. ನಿಮ್ಮ
ಅನುಭವ, ನಿಮಗೆ ದೇವರು ಇದ್ದಾನೆಂದು ತಿಳಿಸಿದರೆ ದೇವರು ಇದ್ದಾನೆಂದು ಹೇಳಿ.
೧೬. ನಿಮ್ಮ ಅನುಭವ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ತಿಳಿಸಿದರೆ, ದೇವರು
ಇದ್ದಾನೆಯೋ ಇಲ್ಲವೋ ತಿಳಿಯದೆಂದು ಹೇಳಿ.
೧೭. ನಮ್ಮ
ಅನುಭವವನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುವುದು, ನಿರ್ಭೀತಿಯಿಂದ ವಾಸ್ತವ ಸ್ಥಿತಿಯನ್ನು
ನೋಡುವುದು ಸತ್ಯಾನ್ವೇಷಣೆಯ ಮೊದಲನೆಯ ಹಂತ. ಜ್ಞಾನ ಯೋಗದ ಮೊದಲ ಪಾಠ.
೧೮. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವನಿಗೆ ತಮಸ್ಸಿನಿಂದಲೂ, ಅಜ್ಞಾನದಿಂದಲೂ
ವಿಮುಕ್ತಿಯೇ ಇಲ್ಲ.
೧೯. ದೇವರ ಹೆಸರಿನಲ್ಲಿ ಸುಳ್ಳು
ಹೇಳುವ ಮಠಾಧಿಪತಿಗಳನ್ನು ಆಚಾರರನ್ನೂ ಜಗದ್ಗುರುಗಳನ್ನೂ ತಿರಸ್ಕರಿಸಿರಿ.
೨೦.ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ತೀರ್ಥಕ್ಷೇತ್ರಗಳನ್ನೂ, ದೇವಸ್ಥಾನಗಳನ್ನೂ
ತಿರಸ್ಕರಿಸಿರಿ, ದೇವರ ಹೆಸರಿನಲ್ಲಿ ದರೋಡೆ ಮಾಡುವ ಯಾತ್ರಾಸ್ಥಳಗಳನ್ನು ತಿರಸ್ಕರಿಸಿರಿ.
ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನೀವು ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ತಂದೆ ತಾಯಿಗಳಿಗೆ ಯಾವ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಳ್ಳುತ್ತಿದ್ದೀರಿ.
ಎಲ್ಲ ಮತಧರ್ಮ, ಕಂದಾಚಾರ, ಅಜ್ಞಾನಗಳಿಂದ ವಿಮುಕ್ತರಾಗಿರುವ ವಧೂವರರೇ, ಮಾನವ ಕೋಟಿಯನ್ನು ನಿಮ್ಮಂತೆಯೇ ವಿಮುಕ್ತರನ್ನಾಗಿ ಮಾಡುವ ಪವಿತ್ರ ಕರ್ತವ್ಯವನ್ನು ನೀವು ಮಾಡಿರಿ. ಇನ್ನು ನೀವು ಯಾವುದೇ ಧರ್ಮಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಮತಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಶಾಸ್ತ್ರಾಚಾರವನ್ನೂ ಅನುಸರಿಸಬೇಕಾದ ಅಗತ್ಯವಿಲ್ಲ. ಮೇಲೆ ಬೋಧಿಸಿರುವ ಪ್ರತಿಜ್ಞಾವಿಧಿಗಳೇ ನಿಮ್ಮ ಜೀವನದ ದಾರಿದೀಪವಾಗಲಿ. ಮೌಢ್ಯ, ಅಜ್ಞಾನ, ಅಂಧಕಾರಗಳ ವಿರುದ್ಧ ಭಾರತೀಯರಾದ ನಾವೆಲ್ಲ ಹೂಡಿರುವ ಈ ಮಹಾ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಾವು ವಿನಂತಿಸಿಕೊಳ್ಳುತ್ತೇವೆ. ನೀವು ಇಲ್ಲಿ ಈ ದಿನದಿಂದ ದಂಪತಿಗಳೆಂದು ನಾವು ಘೋಷಿಸುತ್ತೇವೆ.
ವರನ ಸಹಿ:
ವಧುವಿನ ಸಹಿ:
ಸಾಕ್ಷಿಗಳು:
ವರನ ತಂದೆ – ತಾಯಿ ಸಹಿ:
ವಧುವಿನ ತಂದೆ – ತಾಯಿ ಸಹಿ:
ಬಂಧು, ಬಳಗ,
ಸ್ನೇಹಿತರ ಸಹಿ:
Courtesy: https://nammakuvempu.wordpress.com/2021/05/08/kuvempu-mantra-mangalya-wedding/