Madhumehadinda Mukthi Kannada Book PDF |
Liberation From Diabetes Book PDF |
Madhumehadinda Mukthi Kannada Book PDF |
Liberation From Diabetes Book PDF |
ನಮ್ಮ ಊರಾಗ ಒಬ್ಬ ಮುದುಕಿ ಇದ್ದಳು. ಎಲ್ಲ ಊರಾಗು ಇಂಥಾ ಒಬ್ಬ ಮುದುಕಿ ಇದ್ದೇ ಇರತಾಳ. ಅದರಾಗ ಏನು ವಿಶೇಷ ಇಲ್ಲ.
ಆದರ ಅಕಿ ಭಾರಿ ಭಾರಿ ಕತಿ ಹೇಳತಿದ್ದಳು. ಅದು ಸ್ವಲ್ಪ ವಿಶೇಷ. ಛಂದ ಕತಿ ಹೇಳತಿದ್ದಳು. ಆ ಕತಿಗಳು ಎಷ್ಟೋ ದಿವಸ ನೆನಪು ಉಳಿತಿದ್ದವು. ಜೀವನಕ್ಕ ಪಾಠ ಅನ್ನೋ ಹಂಗ ಆಗತಿದ್ದವು. ಎಲ್ಲರೂ ಸಣ್ಣವರು ಇದ್ದಾಗ ಕೇಳಿದ್ದ ಕಥೀ ವಿಷಯ ದೊಡ್ಡವರು ಆದ ಮ್ಯಾಲೆ ತಿಳೀತಿದ್ದವು. ಅದು ಎಲ್ಲಕ್ಕಿಂತ ವಿಶೇಷ.
ಅಂತಾದ್ದರಾಗ ಒಂದು ಕತಿ ಇಲ್ಲೆ ಐತಿ.
ಒಬ್ಬವ ಸಣ್ಣ ಹುಡುಗ ಇದ್ದಾಗ ತನ್ನೂರು ಬಿಟ್ಟು ಹೋದ. ಅನೇಕ ವರ್ಷ ಪಟ್ಟಣದೊಳಗ ಇದ್ದು, ನೌಕರಿ ಮಾಡಿ, ಅವರ ಅಜ್ಜಿ ಸತ್ತುಹೋದ ಸುದ್ದಿ ತಿಳದು ತನ್ನ ಹಳ್ಳಿಗೆ ಹೊರಟ. ನಡುವ ರಾತ್ರಿ ಆತು ಬ್ಯಾರೆ ಒಂದು ಊರಾಗ ಉಳಕೊಂಡು ಮರುದಿವಸ ಹೋಗಬೇಕು ಅಂತ ಅಂದುಕೊಂಡ. ಆ ರಾತ್ರಿ, ಅಡವಿಯ ಒಳಗ ದಾರಿ ತಪ್ಪಿ ಹೋಯಿತು. ಆ ಅಡವಿಯೊಳಗ ದೆವ್ವ-ಭೂತ ಅದಾವು ಅಂತ ಹೇಳಿದ್ದು ಇವ ಕೇಳಿದ್ದ.
ಆದರ ಇವನಿಗೆ ನಂಬಿಕೆ ಇರಲಿಲ್ಲ. ದೆವ್ವ-ಭೂತ ಎಲ್ಲಾ ಸುಳ್ಳು ಅಂತ ಹೇಳಿಕೊಂಡು ಇವ ಹಂಗ ನಡಕೋತ ಹೋದ. ಅಲ್ಲೆ ಒಬ್ಬ ದನ ಕಾಯೋ ಮುದುಕ ಸಿಕ್ಕ. ಆ ಮುದುಕ ಇವನಿಗೆ ದಾರಿ ತೋರಿಸಿದ. ಅವನ ಹತ್ತಿರ ಇವ ಮಾತಿಗೆ ಕೂತುಕೊಂಡ
ಅದು, ಇದು ಮಾತು ಆಡಿದ ಮೇಲೆ ಈ ಯುವಕ ಕೇಳಿದ: “ಈ ಅಡವಿಯೊಳಗ ದೆವ್ವ-ಭೂತ ಇದ್ದಾವು ಅಂತ ಹೇಳತಾರಲ್ಲಾ?” ಅಂತ. ಆ ಮುದುಕ ಉತ್ತರ ಕೊಟ್ಟ. “ಅಯ್ಯೋ ಅವೆಲ್ಲಾ ಸುಳ್ಳು. ನಾನೂ ಆ ಮಾತು ಕೇಳತಾನೇ ಇರತೇನಿ, ಆದರ ಅದು ಬರೆ ಗಾಳಿ ಮಾತು. ನಾನು ಇದೇ ಏರಿಯಾದಾಗ ಇದ್ದು 200 ವರ್ಷ ಆತು. ಆದರೆ ಒಂದು ದಿವಸನು ಒಂದು ದೆವ್ವ-ಭೂತ ನಂಗ ಭೇಟಿ ಆಗಿಲ್ಲ’ ಅಂತ!
ಈ ಹುಡುಗ ಕೈಯಾಗಿನ ಚೀಲ-ಬಟ್ಟಿ-ಬರೀ ಎಲ್ಲಾ ಬಿಟ್ಟು ಓಡಿ ಹೋದ.
ಇದು ಸಣ್ಣವರಿದ್ದಾಗಿನ ಕತಿ. ನಾವು ದೊಡ್ಡವರು ಆದ ಮ್ಯಾಲ ಏನು ತಿಳಿತಪಾ ಅಂದ್ರ ಅದು ಸಣ್ಣ ಹುಡುಗರ ಕತಿ ಅಲ್ಲ. ಅದು ದೊಡ್ಡವರು ತಿಳಕೋಬೇಕಾದ ಕತಿ ಅಂತ.
ಅವರು ಏನು ತಿಳಕೋಬೇಕು ಅಂದ್ರ, ಇದು ದೆವ್ವಗಳ ಬಗ್ಗೆ ಕತಿ ಅಲ್ಲ. ಭೂತಗಳ ರೂಪದಲ್ಲಿ ಇರುವ ರಾಜಕೀಯ ವ್ಯಕ್ತಿಗಳ ಬಗ್ಗೆ ಕತಿ ಅಂತ. ಹಿಂದಿನ ಭೂತಗಳು ತೀರಿ ಹೋದರು ಅಂತ ಅನ್ನೋದರಾಗ, ನಾವು ಇನ್ನೂ ಇದ್ದೇವಿ, ಮನುಷ್ಯರ ರೂಪದಾಗ ಇದ್ದೇವಿ, ನಿಮಗ ದಾರಿ ತೋರಿಸೋ ನೆಪದಾಗ ನಾವು ನಿಮ್ಮ ದಾರಿ ತಪ್ಪಿಸಿಬಿಡ್ತೇವಿ ಅಂತ ಅವರು ನೆನಪು ಮಾಡತಾರ.
ಈ ಭೂತಗಳ ಕತಿ ಈಗ ಯಾಕ್ ನೆನಪು ಆಯಿತಪ ಅಂದ್ರ ಈಗ ರೈತರು ಕೇಂದ್ರ ಸರಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಹೋರಾಟ ಮಾಡಲಾಕ ಹತ್ಯಾರ. ಅದು ಕೇವಲ ಬಿಜೆಪಿ ವಿರುದ್ಧದ ಹೋರಾಟ ಅಂತ ಕೆಲವರು ತಿಳಕೊಂಡುಬಿಟ್ಟಾರ. ’ಅದು ಹಂಗಲ್ಲಾ, ಹಿಂದೆ ಭಾರತವನ್ನು ಆಳಿದ ಯಾವ ಪಕ್ಷಗಳೂ ರೈತರ ಪರವಾಗಿ ಇರಲಿಲ್ಲ. ಎಲ್ಲರೂ ಖಾಸಗಿ ಕಂಪನಿಗಳ ಪರವಾಗಿ ಇದ್ದವರೇ’, ಆದರೆ, ಅಂತ ನೆನಪು ಮಾಡಿಕೊಡೋರು ಯಾರು ಇರಲಾರದ ಹಂಗ ಆಗಿಹೊಗೇದ.
ಭಯಂಕರ ಮರೆವಿನ ಶಕ್ತಿ ಇರುವ ಮತದಾರನಿಗೆ, ಈ ದೇಶದಲ್ಲಿ ನೆನಪು ಅನ್ನೋದು ಸ್ವಲ್ಪ ತುಟ್ಟಿ. ಹಿಂಗಾಗಿ ಸ್ವಲ್ಪ ರಿವೈಂಡ್ ಮಾಡೋಣ. ಸುಮಾರು 1990ರ ಅಸುಪಾಸಿಗೆ ಡಾ. ಮನಮೋಹನ್ ಸಿಂಗ್ ಅನ್ನುವ ಗ್ರಾಂಥಿಕ ಅರ್ಥಶಾಸ್ತ್ರಜ್ಞರೊಬ್ಬರು ನಮ್ಮ ದೇಶದ ಹಣಕಾಸು ಸಚಿವರಾಗಿದ್ದರು. ಅವರು ನಮ್ಮ ದೇಶದ ಬಜೆಟ್‌ಅನ್ನು ನಾವೇ ರೂಪಿಸುವ ಕನಿಷ್ಟ ಹಕ್ಕನ್ನು ಕಸಿದುಕೊಂಡು ಅದನ್ನು ವಿಶ್ವ ಬ್ಯಾಂಕು ಹಾಗೂ ಐಎಂಎಫ್ ಅವರ ಹೊಸ್ತಿಲಲ್ಲಿ ಇಟ್ಟು ಬಂದರು. ರಾಜಕೀಯವಾಗಿ ಸ್ವತಂತ್ರವಾದ ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ನಷ್ಟ ಮಾಡಿದರು. ಆಗ ಅವರಿಗೆ ಬೇರೆ ದಾರಿ ಇರಲಿಲ್ಲ ಎಂದು ವಾದಿಸುವವರು ಇದ್ದಾರೆ. ಈ ಮನುಷ್ಯ ಭಾರತದ ಆಡಳಿತದ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರು ಮಾಡಿದರು. ಸಾಹುಕಾರರನ್ನು ಇನ್ನಷ್ಟು ಹೆಚ್ಚು
ಸಾಹುಕಾರರನ್ನಾಗಿ ಮಾಡಿದರೆ, ಆಮೇಲೆ ಆ ಸಾಹುಕಾರರು ಬಡವರ ಕಾಳಜಿ ಮಾಡುತ್ತಾರೆ. ಸರ್ಕಾರದ ಹೆಗಲಿನಿಂದ ಈ ಕೆಳಗಿನವರ ಕಾಳಜಿ ಮಾಡುವ ಜವಾಬ್ದಾರಿ ತಪ್ಪಿಸುತ್ತಾರೆ. ಅವರ ಈ ಉಪಕಾರಕ್ಕೆ ಸರಕಾರ ಹೆಚ್ಚಿನದೇನೂ ಮಾಡುವುದು ಬೇಕಾಗಿಲ್ಲ. ಒಂದು ಸ್ವಲ್ಪ ಕೆಲಸ ಮಾಡಿದರೆ ಸಾಕು. ಅವು ಏನು ಎಂದರೆ-
ಸಾಹುಕಾರರು ಹೇಳಿದ ಕಾನೂನು ಪಾಸು ಮಾಡುವುದು, ನೀತಿ-ನಿಯಮ ಅವರಿಗೆ ಅನುಕೂಲವಾಗುವಂತೆ ಜಾರಿ ಮಾಡುವುದು, ಅವರಿಗೆ ಬೇಕಾದಷ್ಟು ಸಾಲ ಸಿಗುವಂತೇ ಮಾಡುವುದು, ಅವರಿಗೆ ಅನಾನುಕೂಲ ಆಗದಷ್ಟೂ ತೆರಿಗೆ ಹಾಕುವುದು ಹಾಗೂ ಅವರ ಐಷಾರಾಮಿ ಖರ್ಚುಗಳೆಲ್ಲ ಮುಗಿದು ಅವರಿಗೆ ತೆರಿಗೆ ಕಟ್ಟಲು ಹಣ ಇಲ್ಲದೆ ಹೋದಾಗ ಅವರ ಮೇಲಿನ ಸಾಲ ಮನ್ನಾ ಮಾಡುವುದು, ತೆರಿಗೆ ರದ್ದು ಮಾಡುವುದು, ಸರ್ಕಾರಿ ಫೀ-ಸುಂಕ, ಶುಲ್ಕ, ಸರ್ಚಾರ್ಜ್, ದಂಡ, ಬಳಕೆದಾರರ ಪಾವತಿ, ಮಣ್ಣು ಮಸಿ ಮಾಫ್ ಮಾಡುವುದು ಇತ್ಯಾದಿ.
ಸರ್ದಾರ್ ಸಿಂಗ್ ಅವರ ಕಣ್ಣಿಗೆ ಪಟ್ಟಿ ಕಟ್ಟಿ, ಕೈಗೆ ಹಗ್ಗ ಕಟ್ಟಿದವರು ಯಾರಪ್ಪಾ ಅಂತ ನೋಡಿದರ ಸಿಗೋ ಹೆಸರು ಆರ್ಥರ್ ಡಂಕಲ್ ಅನ್ನೋ ಪುಣ್ಯಾತ್ಮನದ್ದು. ಸ್ವಿಟ್ಜರ್ಲ್ಯಾಂಡ್‌ನ ರಾಜಕಾರಣಿ ಆಗಿದ್ದ ಇವರು ತಮ್ಮ ದೇಶದೊಳಗ ಜಾರಿ ಮಾಡಲಿಕ್ಕೆ ಆಗದ ಅರ್ಥ ನೀತಿಗಳನ್ನು ಇಡೀ ಜಗತ್ತಿನ ಮ್ಯಾಲೆ ಹೇರಿದರು.
ಅವರು ತಮ್ಮ ದೇಶದಲ್ಲಿ ಮಾತ್ರ ಈ ಕೆಲವು ನೀತಿಗಳನ್ನು ಜಾರಿ ಮಾಡಲು ಆಗಲಿಲ್ಲ ಅನ್ನುವುದಷ್ಟೇ ಅಲ್ಲ, ಯೂರೋಪು-ಅಮೆರಿಕ ಖಂಡದ ಕೆಲವು ದೇಶಗಳಲ್ಲಿಯೂ ಸಹಿತ ಜಾರಿ ಮಾಡಲು ಆಗಲಿಲ್ಲ.
ಅವು ಯಾವುವು ಎಂದರೆ,
ರೈತರ ಸಬ್ಸಿಡಿ ತೆಗೆದು ಹಾಕುವುದು, ವಿದ್ಯಾರ್ಥಿ ವೇತನ ಕಮ್ಮಿ ಮಾಡುವುದು, ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರಿ ಬಂಡವಾಳ ಇಲ್ಲದ ಹಂಗ ಮಾಡೋದು, ಬೀಜ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಸಹಾಯಧನ ತೆಗೆದು ಹಾಕುವುದು, ಬೆಂಬಲ ಬೆಲೆ ಘೋಷಣೆ ಮಾಡಲಾರದೆ, ಸರ್ಕಾರಿ-ಸಹಕಾರಿ ಸಂಸ್ಥೆಗಳ ಕುತ್ತಿಗೆ ಹಿಚುಕುವುದು, ಬೆಲೆ ಜಾರುತ್ತಿರುವ ವಸ್ತುಗಳ ಬೆಲೆ ಸ್ಥಿರಗೊಳಿಸಲು ಸರಕಾರ ಮಾರುಕಟ್ಟೆ ಪ್ರವೇಶ ಮಾಡಲಾರದೆ ಇರೋದು, ಬ್ಯಾಂಕುಗಳು ರೈತರಿಗೆ ಕಮ್ಮಿ ಬಡ್ಡಿ ದರಕ್ಕೆ ಸಾಲ ಕೊಡುವುದನ್ನು ನಿರ್ಬಂಧಿಸುವುದು, ಆಮದು ರಫ್ತು ನೀತಿಗಳನ್ನು ಅಂತಾರಾಷ್ಟ್ರೀಯ ವ್ಯಾಪಾರಿಗಳಿಗೆ ಅನುಕೂಲ ಆಗುವ ಹಾಗೆ ರೂಪಿಸುವುದು, ಹೀಗೆ ಪಟ್ಟಿ ಮುಂದುವರಿಯುತ್ತದೆ.
ಆಮದು-ರಫ್ತು ವ್ಯಾಪಾರದ ತೇಜಿ ಮಂದಿ ಮಂದಿಗೆ ಎಳ್ಳಷ್ಟೂ ತೊಂದರೆ ಆಗದ ಹಾಗೆ ನೋಡಿಕೊಳ್ಳುವುದು. ಅವರು ತಮ್ಮ ಲಾಭ ನಷ್ಟದ ಲೆಕ್ಕಾಚಾರದ ಕೋಷ್ಟಕ ತೋರಿಸಿ ಕೈ ಸನ್ನೆ ಮಾಡಿದಾಗ ಎಲ್ಲಾ ಹಿರಿಯ ಐಎಎಸ್ ಅಧಿಕಾರಿಗಳನ್ನು ಅರ್ಧ ರಾತ್ರಿ ಅವರ ಕಚೇರಿಗೆ ಓಡಿಸಿ, ಕ್ಲರ್ಕ್‌ಗಳಿಂದ ಗೋಡೌನ್ ಬಾಗಿಲು ತೆಗೆಸುವುದು. ಈ ಲಾಭಕೋರರು ತಮಗೆ ಬೇಕಾದ್ದನ್ನು, ಬೇಕಾದಾಗ, ಬೇಕಾದಷ್ಟು, ರಫ್ತು ಆಮದು ಮಾಡಲು ಅನುಕೂಲ ಮಾಡಿಕೊಡುವುದು.
ಈ ರೀತಿಯ ವಿಚಾರ ಹೊಂದಿದ್ದ ಆರ್ಥರ್ ಡಂಕೆಲ್ ಅನ್ನೋ ಮನುಷ್ಯನ ಮಾತುಗಳನ್ನು ವೇದವಾಕ್ಯ ಅಂತ ನಂಬಿದ ಸರ್ದಾರ್ ತಮ್ಮ ಸರಕಾರದ ಬಜೆಟ್ ಬಾಸ್ಕೆಟ್‌ನಲ್ಲಿ ಅವನ ಚಿಂತನೆಗಳನ್ನು ಒತ್ತಿ ಒತ್ತಿ ತುಂಬಿದರು. ಇಡೀ ದೇಶದ ತುಂಬೆಲ್ಲ ಜನ, ನಾಯಕರು, ತಜ್ಞರು, ವಿಚಾರವಾದಿಗಳು, ಹೋರಾಟಗಾರರು, ಸರ್ಕಾರೇತರ ಸಂಸ್ಥೆಗಳು ಎಲ್ಲರೂ ವಿರೋಧ ಮಾಡಿದರೂ ಕೂಡ, ಕೇಳಲಿಲ್ಲ. ತಮ್ಮದನ್ನೇ ಸಾಧಿಸಿದರು.
ಪಡೆಯಪ್ಪದ ರಜನಿಕಾಂತ್ ರೀತಿ “ನನ್ನ ದಾರಿಯೇ ರಹದಾರಿ ನಿಮ್ಮದೆಲ್ಲ ಟೋಲ್ ಬೂತನ ದಾರಿ” ಅಂತ ಹೇಳಿ ತಮ್ಮ ನೀತಿಗಳನ್ನು ಜಾರಿ ಮಾಡಿದರು. ಸರ್ಕಾರಿ ಬ್ಯಾಂಕುಗಳ ಅನಿಷ್ಟ ಸಾಲಗಳು ಹೆಚ್ಚುವಂತೆ, ಬ್ಯಾಂಕ್ ಬಡ್ಡಿ ಮೇಲೆ ಅವಲಂಬಿತರಾದ ಹಿರಿಯ ನಾಯಕರು ಅವಲತ್ತುಕೊಳ್ಳುವಂತೆ ಬಡ್ಡಿ ದರ ಕಮ್ಮಿ ಮಾಡಿದರು. ಸರ್ಕಾರಿ ನೌಕರರಿಗೆ ಪಿಂಚಣಿ ನಿಂತು ಹೋಗುವಂತೆ ನೋಡಿಕೊಂಡರು, ಸರ್ಕಾರಿ ಸಂಸ್ಥೆಗಳಲ್ಲಿನ ಸರ್ಕಾರಿ ಬಂಡವಾಳ ಹಿಂಪಡೆದರು.
ಈ ವಿಕಾರಗಳಿಗೆಲ್ಲ ‘ಸುಧಾರಣೆ’ ‘ತಿದ್ದುಪಡಿ’, ‘ಮೇಲ್ಮಟ್ಟಕ್ಕೆ ಏರಿಸುವುದು’, ಇತ್ಯಾದಿ ಮಜೆದಾರ ಹೆಸರುಗಳನ್ನು ಇಟ್ಟರು.
ಅವರ ಒಟ್ಟು ಬದಲಾವಣೆ ಗಳಿಗೆ ಎಲ್‌ಪಿಜಿ – ಲಿಬೆರಲಾಯಿಸೆಷನ್, ಪ್ರೈವೇಟ್‌ಆಯಿಸೇಷನ್, ಗ್ಲೋಬಲ್‌ಐಸೇಷನ್ ಅಂತ ಸರಳ ಹೆಸರು ಕೊಟ್ಟು ಜನರ ಮನಸ್ಸಿನಲ್ಲಿ ಇದು ಅವಶ್ಯಕ, ಪ್ರತಿ ದಿನ ಬೇಕಾದ್ದು, ಇದಿಲ್ಲದಿದ್ದರೇ ನಾವು ಇಲ್ಲ ಅನ್ನುವ ಭಾವನೆ ಬರುವಂತೆ ಮಾಡಿದರು.
ಇಷ್ಟೆಲ್ಲಾ ಮಾಡಿದರೂ ಡಾ. ಸಿಂಗ್ ಅವರಿಗೆ ಒಂದು ಕೊರಗು ಉಳಿದು ಹೋಯಿತು. ನನಗೆ ಬೇಕಾದಷ್ಟು ಬದಲಾವಣೆ-ಸುಧಾರಣೆ ಮಾಡಲಿಕ್ಕೆ ಆಗಲಿಲ್ಲ. ನನಗೆ ಫ್ರೀ ಹ್ಯಾಂಡ್ ಸಿಗಲಿಲ್ಲ. ನಮ್ಮ ಪಕ್ಷ ಪೂರ್ತಿ ಬಹುಮತ ಪಡೆಯಲಿಲ್ಲ. ನಾವು ಮೀಟರ್ ಇಲ್ಲದೆ ಮಿತ್ರ ಪಕ್ಷಗಳ ಮರ್ಜಿಗೆ ಬೀಳಬೇಕಾಯಿತು. ನನ್ನ ವಿಚಾರದಂತೆ ನನಗೆ ಅಡಳಿತ ನಡೆಸಲು ಬಿಟ್ಟಿದ್ದರೆ ಆ ಮಾತು ಬೇರೆನ ಇರತಿತ್ತು ಅನ್ನುವ ಕಿರಿಕಿರಿ ಇತ್ತು. ಅದನ್ನು ಜಾಗತಿಕ ಮಾಧ್ಯಮದ ಮುಂದೆ ಅವರು ಹೇಳಿಯೂ ಬಿಟ್ಟಿದ್ದರು.
ಅವರ ಕನಸ್ಸನ್ನು ಅವರ ಪಕ್ಷದವರು ಪೂರ್ತಿ ಮಾಡಲಿಲ್ಲ. ಮಾಡಲಿಕ್ಕೆ ಆಗಲಿಲ್ಲ. ಅದನ್ನ ಮಾಡಿದವರು, ಅವರ ವಿರೋಧ ಪಕ್ಷದವರು. ಪಂಥ ಪ್ರಧಾನ ಸೇವಕರ ನೇತೃತ್ವದ ಎನ್‌ಡಿಎ ಸರಕಾರ ತಮ್ಮ ಪಕ್ಷದವರಲ್ಲದ ಡಾ. ಸಿಂಗ್ ಅವರ ಕನಸ್ಸನ್ನು, ಅವರ ವಿಚಾರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿ ಆತು.
“ಈ ಕೃಷಿ ಕಾನೂನುಗಳಿಂದ ಯಾವುದೇ ಹಾನಿ ಇಲ್ಲ. ಸುಮ್ಮನೆ ಇರಿ. ವಿರೋಧ ಮಾಡ್ಬೇಡಿ, ಇದರಿಂದ ನಿಮಗೆ ಒಳ್ಳೇದಾಗುತ್ತದೆ” ಅಂತ ಸರಕಾರ ಹೇಳ್ಲಿಕ್ಕೆ ಹತ್ತೆತಿ. ಇದು “ನೀವು ಸತ್ತ ಮೇಲೆ ಸ್ವರ್ಗ ಸಿಗುತ್ತದೆ, ನಿಮ್ಮ ಮನೆಯವರಿಗೆ ಪಾಲಿಸಿ ಹಣ ಸಿಗುತ್ತದೆ” ಅಂತ ಹೇಳುವ ಎಲ್‌ಐಸಿ ಏಜೆಂಟ್‌ನ ಮಾತಿನಂತೆ ಕೇಳುತ್ತದೆ.
ದೈತ್ಯಾಕಾರದ ನಾಯಿ ಸಾಕಿದ ಮನೆ ಮಾಲೀಕರು “ಇದು ಕಚ್ಚುವುದಿಲ್ಲ. ಆರಾಮ ಆಗಿ ಬನ್ನಿ ಅಂತ. ಕಚ್ಚಿದರೆ ನಮ್ಮ ಅಜ್ಜಿ ಮಂತ್ರ ಹಾಕುತ್ತಾಳೆ,” ಅಂತ ಹೇಳಿದಷ್ಟೇ ಪಾಳು-ಜಾಳು ಆಗಿ ಅದು ನಿಮ್ಮ ಕಿವಿಗಳಲ್ಲಿ ಗುಂಗುಣಿಸುತ್ತದೆ.
ಕಚ್ಚಿಸಿಕೊಂಡ ಮೇಲೆಯೇ ನಾವು ಹೆಚ್ಚಿನ ಪಾಠ ಕಲಿಯುವುದು, ಅಲ್ಲವೇ ಮನೋಲ್ಲಾಸಿನಿ?