ಮರಾಠಿ ಹುಡ್ಗಿಗೆ
ಪ್ರೀತಿ, ಎಲ್ಲ ಬಾಷೆಗಳನ್ನ ಮೀರಿದ್ದು ಅಂತ ತುಂಬಾನೆ ಓದ್ತಾನೆ ಇರ್ತೀವಿ ಅಲ್ವ ? ನಮ್ಮ ಜೀವನದಲ್ಲೂ ಇದು ನಿಜಾನೆ ಆಗುತ್ತೆ ಅಂತ ಕನಸಲ್ಲಾದ್ರೂ ಕನವರಿಸಿದ್ವಾ? ಇಲ್ಲ ಅಲ್ವ? ಇಬ್ಬರ ಪ್ರೀತಿಯ ಬಳ್ಳಿ ಎತ್ತರೆತ್ತರಕ್ಕೆ ಹಬ್ಬುತ್ತಲೇ ಹೋಯ್ತು, ಆ ದೇವರ ಕೆಟ್ಟ ಕಣ್ಣು ಬೀಳುವವರೆಗು. ನೀನು ನನ್ನ ಜೊತೆ ಮುನಿಸಿಕೊಂಡ ದಿನದಿಂದ, ನಿನ್ನ ಎಲ್ಲ ಮಾತುಗಳೂ ನಿಂತ ನಂತರ, ಅಂತಹ ದೊಡ್ಡ ಅನಾಹುತಗಳೇನು ನಡೆದಿಲ್ಲ. ಕಣ್ಣುಗಳು ಕನಸು ಕಾಣೋದನ್ನ ನಿಲ್ಲಿಸಿವೆ, ನಾನು ಪಡೆದುಕೊಂಡು ಬಂದಿದ್ದಿಷ್ಟೆ ಅಂತ ಈ ಹೃದಯ ತನ್ನನ್ನ ತಾನೆ ಸಂತೈಸಿಕೊಳ್ಳುತ್ತಿದೆ, ಬಣ್ಣ ತುಂಬಿದ್ದ ಬದುಕಿನ ಪುಟಗಳಲ್ಲಿ ಈಗ ನಿನ್ನ ಯಾವ ಸಾಲುಗಳೂ ಉಳಿದಿಲ್ಲ ಅಳಿಸಿಹೋಗಿವೆ, ಮತ್ತೆ ನಿನ್ನ ಕುರಿತು ಒಂದಿಷ್ಟು ಸಾಲುಗಳನ್ನ ಬರೆಯಬೇಕು, ನೆನಪುಗಳನ್ನ ತೆಗೆದುಕೊಂಡು ಹೋಗಿ ಕುಳಿತಿದ್ದೀಯ ಹ್ಯಾಗೆ ಬರಿಯೋದು? ಅದ್ಕೆ ಪೂರ್ತಿ ಮರ್ತುಬಿಟ್ಟಿದ್ದೀನಿ ನಿನ್ನ, ನೀನು ನನಗೆ ಸ್ವಲ್ಪವೂ ನೆನಪಾಗೊಲ್ಲ, ಎಲ್ಲ ನೆನಪುಗಳಿಗೂ ಸಮಾಧಿ ಕಟ್ಟಿಬಿಟ್ಟಿದ್ದೀನಿ,ಯಾವತ್ತೂ ನಿನ್ನ ನೆನಪು ಮಾಡ್ಕೊಳ್ಳೊಲ್ಲ, ನಿನ್ನ ಹೆಸರಿಡಿದು ಒಂದೇ ಒಂದು ಸಲ ಕರಿಯೋಕು ನನಗೆ ಮನಸ್ಸಾಗ್ತಿಲ್ಲ, ಹೋಗ್ಬಿಡು ತುಂಬಾನೆ ದೂರ, ಮತ್ಯಾವತ್ತೂ ನೆನಪಿಗೆ ಬರಲೇಬಾರದು ನೀನು. ತುಂಬಾನೆ ಸುಳ್ಳು ಹೇಳ್ತಿದ್ದೀನಿ ಅಲ್ವಾ? ನೀನು ನನಗೆ ತಿನ್ನಿಸಿದ ಕೈತುತ್ತು, ಮತ್ತು ನೀನು ನನಗೆ ಕೊಟ್ಟ ಅಷ್ಟೂ ಹೂಮುತ್ತುಗಳ ಮೇಲಾಣೆ, ನಿನ್ನ ಮರೆತುಬಿಟ್ಟಿದ್ದೀನಿ ಅಂತ ಸುಳ್ಳು ಹೇಳೋಕ್ ಕೂಡ ತುಂಬ ಕಷ್ಟ ಆಗ್ತಿದೆ ಕಣೆ.
ಈ ಎದೆಯಲ್ಲಿ ಪ್ರೀತಿಯ ಬಳ್ಳಿಯನ್ನ ನೆಟ್ಟು ಮತ್ಯಾರದೋ ಹೃದಯ ಸಾಮ್ರಾಜ್ಯದಲ್ಲಿ ಮಹರಾಣಿಯಾಗಿ ಮೆರೆಯೋ ಸಣ್ಣ ಮನಸ್ಸಿನವಳಲ್ಲ ನೀನು ಅನ್ನೋದು ನನಗೆ ಗೊತ್ತಿದೆ ಪುಟ್ಟ. ನಾನು ಕ್ಷಣಕ್ಷಣಕ್ಕೂ ನೆನಪಾಗ್ತಿದ್ದೀನಿ ಅಲ್ವಾ? ನ್ನ ಜೊತೆ ಮತ್ತೆ ಮಾತಾಡೋಕೆ ನಿನಗೆ ಒಂದು ಸಣ್ಣ ಸ್ವಾಭಿಮಾನ ಅಡ್ಡ ಬರ‍್ತಿದೆ ಅಲ್ವೇನೆ? ಬಿಟ್ಟುಬಿಡು ಕಂದ, ನೋಡು ಮಹಾನ್ ಸ್ವಾಭಿಮಾನಿಯಾದ ನಾನು ಎಲ್ಲದಕ್ಕೂ ತಿಲಾಂಜಲಿ ಬಿಟ್ಟು ನಿನ್ನ ಜೊತೆ ಮಾತಿಗಿಳಿದಿದ್ದೀನಿ, ನಿಂಗೆ ಮಾತ್ರ ಯಾಕೆ ಸಾಧ್ಯವಾಗೊಲ್ಲ ಹೇಳು? ಆದ್ರೂ ತುಂಬಾನೆ ದೂರ ಹೋಗ್ಬಿಟ್ಟೆ ಅಲ್ವಾ? ತುಂಬಾನೆ ದೂರ ಮಾಡ್ಬಿಟ್ಟೆ ಅಲ್ವಾ? ನಿಜ್ಜಾ… ನಂಗೆ ತುಂಬಾನೆ ಭಯ ಆಗ್ತಿದೆ, ಆವಾಗ್ಲೆಲ್ಲ ನೀನು ನನ್ನ ನೆತ್ತಿ ಮುಟ್ಟಿ ಮಾಡಿದ ಆಣೆ ಪ್ರಾಮಾಣಗಳೇ, ನನಗೆ ನೀನು ಮತ್ತೆ ಸಿಕ್ತೀಯ, ಮತ್ತೆ ಬೆಂಗಳೂರಿನ ಗಾಂಧಿ ಬಜಾರಿನ ಎಲ್ಲ ಕತ್ತಲೆಯ ಮೂಲೆಗಳು ನಾಚಿಕೊಳ್ಳುವಂತೆ ತಬ್ಬಿಕುಳಿತುಬಿಡ್ತೀಯಾ ಅನ್ನೊ ನಂಬಿಕೆಯನ್ನ ತರಿಸುತ್ತಿವೆ .
ನಿಂಗೆ ಗೊತ್ತಾ? ನೀನು ಮಾತು ನಿಲ್ಲಿಸಿದ ಮೇಲೆ ನನ್ನ ಮೊಬೈಲು ಕೂಡ ನನ್ನ ಜೊತೆ ಮುನಿಸಿಕೊಂಡು ಕುಳಿತಿದೆ. ಎಸ್ಸೆಮ್ಮೆಸ್ಸುಗಳಿಗೆ ಭಯಂಕರ ಜ್ವರ ಕಣೆ. …..೯೩೧೫ ಈ ನಂಬರಿನಿಂದ ಬರುವ ಒಂದು ಕಾಲ್ ಒಂದು ಮೆಸ್ಸೇಜಿಗಾಗಿ ನನ್ನ ಮೊಬೈಲಿನ ಜೊತೆ ನಾನು ಜೀವವನ್ನ ಕೈಯ್ಯಲ್ಲಿಟ್ಟುಕೊಂಡು ಕುಳಿತಿದ್ದೀನಿ, ನೋಡು ಕಂದ, ನಮ್ಮ ಹಳೆಯ ಕೆಲವು ಬಿನ್ನಾಭಿಪ್ರಾಯಗಳಿಗೆ ಒಂದು ಗತಿ ಕಾಣಿಸೋಣ, ನೀನು ಮಾಡಿದ ಪ್ರೀತಿಯ ಎಲ್ಲ ತಪ್ಪು ಒಪ್ಪುಗಳನ್ನ ಪ್ರೀತಿಯಿಂದಾನೆ ಕ್ಷಮಿಸಿಬಿಡ್ತೀನಿ, ಮರೆತುಬಿಡ್ತೀನಿ. ನನ್ನದಲ್ಲದ ತಪ್ಪು ಒಪ್ಪುಗಳಿಗೆ ನಾನಾಗೆ ನಿನ್ನ ಮುಂದೆ ಮಂಡಿಯೂರಿ ತಲೆತಗ್ಗಿಸಿ ಕುಳಿತುಬಿಡ್ತೀನಿ ಕ್ಷಮಿಸ್ತೀಯ ಅನ್ನೋ ಭರವಸೆಯಿಂದ. ನೀನು ಕೆಟ್ಟವಳಲ್ಲ, ಆದ್ರೆ ತುಂಬಾ ಚಿಕ್ಕವಳು. ಜಗತ್ತಿನಲ್ಲಿ ಚಿಕ್ಕವರು ಮಾಡಿದ ತಪ್ಪುಗಳಿಗೆ ಕ್ಷಮೆಗಳು ಇರುತ್ತೆ ಅಲ್ವಾ? ಇನ್ನು ನನ್ನ ಮರಾಠಿ ಪುಟ್ಟಿ ಮಾಡಿದ ತಪ್ಪುಗಳಿಗೆ ಕ್ಷಮೆಯ ಜೊತೆ ನನ್ನ ಪ್ರೀತಿಯೂ ಇರತ್ತೆ. ಮುನಿಸಿಕೊಂಡ ನಿನ್ನ ಮೂತಿಯನ್ನ ನೋಡೋಕೆ ಇಷ್ಟ ಆಗೊಲ್ವೆ. ಎಲ್ಲಿ ಒಂದು ಹತ್ತು ಸಲ ನಗು ನೋಡೋಣ? ಇಪ್ಪತ್ತು ಮೊಳ ಮಲ್ಲಿಗೆ ಹಿಡಿದು ಅದೇ ಗಾಂಧಿ ಬಜಾರಿನ ಕತ್ತೆಲೆಯ ಮೂಲೆಯಲ್ಲಿ ಜೀವನ ಪೂರ್ತಿ ಜೊತೆಗಿರುವ ನಂಬಿಕೆಯೊಂದಿಗೆ ನಿಂತಿರ್ತೀನಿ. ಮತ್ತೊಮ್ಮೆ ಪೂರ್ತಿ ಗಾಂಧಿ ಬಜಾರು ನಾಚಿಕೊಳ್ಳಲಿ ಬಿಡು, ನಗೆ ನೀನು, ನಿನಗೆ ನಾನು, ನಮಗಿಬ್ಬರು.
ಇಂತಿ ನಿನ್ನ ಪ್ರೀತಿಯ
ಕನ್ನಡ ಹುಡ್ಗ !