Sunday, 12 February 2017

ಪ್ರೀತಿಸುವ ಹುಡುಗ ಹುಡುಗಿಯರಿಗೆ...

C:Kumri
ಕೆಲವೇ ದಿನಗಳಲ್ಲಿ ಬರಲಿದೆ ವಾಲೆಂಟೈನ್ ಡೇ. ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನ, ತಮ್ಮ ಮನಸ್ಸಿನ ಆಳದಲ್ಲಿ ಹುಡುಗಿಟ್ಟುಕೊಂಡ ಭಾವನೆಗಳನ್ನ ಹೇಳುವ ಅವಕಾಶ. ಗಿಫ್ಟ್ ಕೊಟ್ಟು ಸಂತೋಷ ಪಡುವ ಸಂದರ್ಭ.

ಆದರೆ ಪ್ರೀತಿ ಎಂದರೇನು ? ಅದೊಂದು ದೈವಿಕವಾದ ಭಾವನೆಯಾ ? ದೈಹಿಕ ಆಕರ್ಷಣೆಯಾ ? ಅದೊಂದು ಮನಸ್ಥಿತಿಯಾ ? ಗಂಡು ಹೆಣ್ಣಿನ ನಡುವಿನ ಸಹಜ ಸಂಬಂಧವಾ ? ಈ ಬಗ್ಗೆ ನಾವು ಬಹುತೇಕ ಸಂದರ್ಭದಲ್ಲಿ ಯೋಚಿಸುವುದಿಲ್ಲ. ಒಂದು ಕ್ಷಣ ಎಲ್ಲವನ್ನು ಬಿಟ್ಟು ಯೋಚಿಸಿ. ಪ್ರೀತಿ ಎಂದರೆ ಹರಿಯುವ ನದಿಯಂತೆ ಎಂದು ಹೇಳಿದವರು ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ. ಪ್ರೀತಿ ಎನ್ನುವುದು ಕೇವಲ ಶಬ್ದವಲ್ಲ, ಅದು ಎಲ್ಲವನ್ನೂ ಮೀರಿದ ಸ್ಥಿತಿ ಎಂದವರು ಓಷೋ. ಹೀಗೆ ಪ್ರೀತಿಯ ಬಗ್ಗೆ ಮಾತನಾಡಿದವರು ನೂರಾರು. ಯಾರನ್ನಾದರೂ ಪ್ರೀತಿಸಬೇಕು ಎಂದು ಹಪಹಪಿಸಿವವರು ಎಲ್ಲರೂ. ಆದರೆ ನಮಗೆ ಪ್ರೀತಿಯ ಬಗ್ಗೆ ಸರಿಯಾಗಿ ತಿಳಿದಿಲ್ಲ. ನಾವು ಪೊಸೇಸೀವ್ ಆಗಿರುವುದೇ ಪ್ರೀತಿ ಎಂದುಕೊಳ್ಳುತ್ತಿರುತ್ತೇವೆ. ನನಗೆ ಅವನೋ ಅವಳೋ ಉತ್ಕಟವಾಗಿ ಬೇಕು ಎಂದುಕೊಂಡ ತಕ್ಷಣ ಅದಕ್ಕೆ ಪ್ರೀತಿ ಎಂದು ಕರೆದು ಬಿಡುತ್ತೇವೆ. ಆದರೆ ಪ್ರೀತಿ ಅದಲ್ಲ. ಪ್ರೀತಿ ಎನ್ನುವುದು ಕೊಡುವುದು, ತೆಗೆದುಕೊಳ್ಳುವುದಲ್ಲ. ಪ್ರೀತಿ ಎಂದರೆ ಶಬ್ದವಲ್ಲ. ಅದನ್ನೂ ಮೀರಿದ್ದು. ಪ್ರೀತಿ ಎಂದರೆ ಮಾತಲ್ಲ, ಅದೊಂದು ಮೌನ. ಪ್ರೀತಿ ಎಂದರೆ ಹೇಳುವುದಲ್ಲ, ಕೇಳಿಸಿಕೊಳ್ಳುವುದು.

ಭಾರತದಲ್ಲಿ ನಾವು ಪ್ರೀತಿಯ ಬಗ್ಗೆ ಮಾತನಾಡುವಾಗ ಹಲವರು ಸಿಗುತ್ತಾರೆ. ಪ್ರೀತಿಗಾಗಿ ಜೀವವನ್ನೇ ಬಲಿ ಕೊಟ್ಟ ಸಲೀಮ್ ಅನಾರ್ಕಲಿಯಂತಹ ಕಥೆಗಳು ನಮಗೆ ಸಿಗುತ್ತವೆ. ಆದರೆ ಇಂದಿಗೂ ಪ್ರೀತಿ ಎಂದ ತಕ್ಷಣ ನಮ್ಮ ಕಣ್ಣು ಮುಂದೆ ಬರುವವನು ಮಹಾಭಾರತದ ಕೃಷ್ಣ. ಆತ ಎಲ್ಲವನ್ನೂ ಕೇಳಿಸಿಕೊಳ್ಳಬಲ್ಲವನಾಗಿದ್ದ. ಎಲ್ಲರನ್ನೂ ಪ್ರೀತಿಸಬಲ್ಲವನಾಗಿದ್ದ. ಯಾವ ಸಂದರ್ಭದಲ್ಲೂ ಆತನಿಗೆ ಸಿಟ್ಟೇ ಬರುತ್ತಿರಲಿಲ್ಲ. ಆತ ರುಕ್ಮಿಣಿಗೆ ಹೆದರುತ್ತಲೇ ಆಕೆಯನ್ನು ಪ್ರೀತಿಸುತ್ತಿದ್ದ. ಸತ್ಯಭಾಮಾಳ ಅಹಂಕಾರಕ್ಕೆ ಪೆಟ್ಟು ನೀಡುತ್ತಲೇ ಅವಳನ್ನು ಒಪ್ಪಿಕೊಳ್ಳಬಲ್ಲವನಾಗಿದ್ದ. ಜಾಂಬವತಿಯ ಆರಾಧನೆಗೆ ತನ್ನು ಒಪ್ಪಿಸಿಕೊಂಡು ಅವಳನ್ನು ಪ್ರೀತಿಸುತ್ತಿದ್ದ. ಹಾಗೆ ಕೃಷ್ಣ ಮತ್ತು ದ್ರೌಪದಿಯ ನಡುವಿನ ಸಂಬಂಧ. ಕೃಷ್ಣನ ಹೃದಯದಲ್ಲಿ ದ್ರೌಪದಿಗೆ ತುಂಬಾ ವಿಶಿಷ್ಟವಾದ ಸ್ಥಾನವಿತ್ತು. ಅತ ಅವಳ ಎದುರು ಮೌನವಾಗಿಬಿಡುತ್ತಿದ್ದ.

ಅವನಿಗೆ ಪ್ರೀತಿ ಎಂದರೆ ಯಮುನೆ. ಯಮುನಾ ನದಿಯ ದಂಡೆಯ ಮೇಲೆ ಆಟವಾಡಿ ಬೆಳೆದ ಆತ ಗೋಪಿಕೆಯರ ಸೀರೆ ಕದ್ದಿದ್ದು ಇದೇ ನದಿಯ ದಂಡೆಯ ಮೇಲೆ. ಹಾಗೆ ತನ್ನ ಮುರಳಿಗಾನಕ್ಕೆ ಆತ ಆಯ್ಕೆ ಮಾಡಿಕೊಂಡಿದ್ದು ಯಮುನಾ ನದಿಯ ದಂಡೆಯನ್ನ. ಆತ ಅಲ್ಲಿಂದ ಧ್ವಾರಕೆಗೆ ಬಂದ ಮೇಲೆ ಮುರಳಿಯನ್ನು ಬಿಟ್ಟ. ಆದರೆ ತನ್ನೊಳಗಿನ ಪ್ರೀತಿ ಆರಿ ಹೋಗದಂತೆ ನೋಡಿಕೊಂಡ. ನನಗೆನ್ನಿಸುವ ಹಾಗೆ ಕೃಷ್ಣನ ಪ್ರೀತಿಗೆ ಹಲವು ಮುಖಗಳಿದ್ದವು. ಬೇರೆ ಬೇರೆ ಆಯಾಮಗಳಿದ್ದವು. ಆತ ಪ್ರೀತಿಯ ಅತಿ ದೊಡ್ಡ ಸಂಕೇತ.

ಭಾರತದಲ್ಲಿ ಪ್ರೀತಿಗೆ ಸಂಬಂಧಿಸಿದ ಮಹಾಕಾವ್ಯಗಳಿವೆ. ಕಾಳಿದಾಸನ ಮೇಘಧೂತ ಇಂತಹ ಕಾವ್ಯಗಳಲ್ಲಿ ಒಂದು. ಉರ್ದು ಶಾಯರಿಗಳು ಘಝಲ್ ಗಳು ಪ್ರೀತಿಯ ಸಮುದ್ರ. ಹಾಗೆ ಕನ್ನಡಕ್ಕೆ ಬಂದರೆ ಇಲ್ಲಿ ಪ್ರೀತಿಯನ್ನು ಆರಾಧಿಸುವ ಕವಿಗಳಿದ್ದಾರೆ. ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ಎಂಬ ಕವಿವಾಣಿ ಪ್ರೀತಿಯನ್ನ ಅತ್ಯದ್ಭುತವಾಗಿ ವಿವರಿಸುತ್ತದೆ. ಬಿ. ಆರ್‍. ಲಕ್ಷಣರಾವ್ ಅವರಂಥಹ ಪ್ರೀತಿಯ ತುಂಟ ಕವಿಗಳಿದ್ದಾರೆ. ದಾಂಪತ್ಯ ಬದುಕಿನ ಪ್ರೀತಿಯನ್ನ ಕಟ್ಟಿಟ್ಟ ಕೆ. ಎಸ್. ನರಸಿಂಹಸ್ವಾಮಿ ಅವರ ಗೀತೆಗಳು ನಮ್ಮ ನಡುವೆ ಇವೆ. ಇಂದು ಪ್ರೀತಿಯ ಬಗ್ಗೆ ಮಾತನಾಡುವ ಹುಡೂಗ ಹುಡುಗಿಯರಿಗೆ ಇದೆಲ್ಲ ಗೊತ್ತಿರಲಿಕ್ಕಿಲ್ಲ. ಇಂದು ನಮ್ಮ ನಡುವೆ ಗಟ್ಟಿಯಾಗಿ ಬೇರೂರಿರುವುದು ಸಿನೆಮಾ ಪ್ರೀತಿ. ಇದು ಶಾರೂಖ್ ಖಾನ್ ನ ಪ್ರೀತಿಯೂ ಆಗಿರಬಹುದು, ಕನ್ನಡದ ಗಣೇಶನ ಪ್ರೀತ್ಇಯೂ ಆಗಿರಬಹುದು. ಆದರೆ ಇದು ನಿಜವಾದ ಪ್ರೀತಿ ಅಲ್ಲ.

ಪ್ರೀತಿ ಎನ್ನುವುದಕ್ಕೆ ನದಿಯ ಹಾಗೆ ಯಾವುದೇ ಕಟ್ಟು ಪಾಡುಗಳಿಲ್ಲ. ಅದಕ್ಕೆ ಯಾವುದೇ ಹಂಗೂ ಇಲ್ಲ. ಪ್ರೀತಿ ನದಿಯಂತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇಹರಿಯುತ್ತಲೇ ಇರುತ್ತದೆ.

ನಿಮಗೆ ಮಹಾಭಾರತದ ಕೃಷ್ಣ ಅರ್ಥವಾಗದಿದ್ದರೆ ನೀವು ಯಾರನ್ನೂ ಪ್ರೀತಿಸಲಾರಿರಿ. ಕಾಳಿದಾಸನ ಮೇಘಧೂತ ತಿಳಿಯದಿದ್ದರೆ, ಪ್ರೀತಿಯ ಉತ್ಕಟತೆಯ ಅನುಭವ ನಿಮಗೆ ಬರಲಾರದು. ಬಿ. ಆರ್. ಲಕ್ಷಣರಾವ್ ಅವರ ಕವನಗಳನ್ನು ಓದದಿದ್ದರೆ, ಪ್ರೀತಿಯ ಜೊತೆಗಿನ ತುಂಟತನ ನಿಮ್ಮನ್ನು ತಟ್ಟುವುದಿಲ್ಲ. ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ಎಂದು ಕೇಳಿದ ಜಿಎಸ್ ಶಿವರುದ್ರಪ್ಪನವನ ಕವನವನ್ನು ಓದದಿದ್ದರೆ ಈ ಬದುಕಿನಲ್ಲಿ ಪ್ರೀತಿಯ ಮಹತ್ವ ಏನು ಎಂಬುದು ನಿಮಗೆ ತಿಳಿಯುವುದಿಲ್ಲ. ಕೆ. ಎಸ್. ನರಸಿಂಹಸ್ವಾಮಿಯವರ ದಾಂಪತ್ಯದ ಪ್ರೀತಿಯನ್ನ ನೀವು ತಿಳಿದರೆ ಪ್ರೀತಿ ಇನ್ನಷ್ಟು ಸಮೃದ್ಧವಾಗುತ್ತದೆ. ಇದೆಲ್ಲವನ್ನೂ ಮಾಡಿದರೆ ನಿಮ್ಮ ಹೃದಯವೇ ಪ್ರೀತಿಯ ನಿಲ್ದಾಣವಾಗುತ್ತದೆ. ಆಗ ನಿಮಗೆ ನಿಮ್ಮ ಪ್ರೀತಿಗಾಗಿ ವಾಲೆಂಟೈನ್ ಡೇ ಬೇಕಾಗುವುದಿಲ್ಲ. ವರ್ಷದಲ್ಲಿ ಒಮ್ಮೆ ಪ್ರೀತಿಸುವುದಕ್ಕಾಗಿ ಕಾಯುವ ಅಗತ್ಯವೂ ಇರುವುದಿಲ್ಲ. ಪ್ರೀತಿ ಸದಾ ನಿಮ್ಮ ಜೊತೆ ಇರುತ್ತದೆ. ನೀವೇ ಪ್ರೀತಿಯಾಗುತ್ತೀರಿ. ನಿಮ್ಮ ಪ್ರೀತಿ ನದಿಯಂತೆ ಹರಿಯುತ್ತಿರುತ್ತದೆ. ನಿಮ್ಮ ಬಳಿ ಸದಾ ಗುಲಾಬಿ ಅರಳುತ್ತದೆ.

No comments:

Post a Comment