Friday, 29 June 2018

ಕಾಲ-ಚಕ್ರ


            'ಚೋಳ ರಾಜರ ಇತಿಹಾಸ ವನ್ನು ಓದುವಾಗ, ಅವರ ವಾಸ್ತುಶಿಲ್ಪ, ದೇವಾಲಯದ ಶೈಲಿ ಎಲ್ಲವೂ ನನಗೆ ಮಂತ್ರ-ಮುಗ್ಧಗೊಳಿಸಿತ್ತು. ಚೋಳರ ಮಹಾದೇವಾಲಯದಲ್ಲಿ(Greatest living Cholas temple) ಉಳಿದೆಲ್ಲದಕ್ಕಿಂತಲೂ ನನ್ನನ್ನೂ ಸಾಕಷ್ಟು ಆಕರ್ಷಿಸಿದ್ದು ದಾರಾಸುರಂನ ಐರಾವತೇಶ್ವರ ದೇವಾಲಯ. ತಂಜಾವೂರಿನ ಬೃಹದೇಶ್ವರ ದೇವಾಲಯ ಮತ್ತು ಗಂಗೈಕೊಂಡ ಚೋಳಪೂರಂನ ಗಂಗೈಕೊಂಡ ಚೋಳ ದೇವಾಲಯಗಿಂತಲೂ ಐರಾವತೇಶ್ವರ ದೇವಾಲಯ ಚಿಕ್ಕದಾಗಿದ್ದರೂ ಅದರ ವಾಸ್ತುಶಿಲ್ಪ, ಶಿಲ್ಪಕಲೆಗಳು ಅಚ್ಚರಿ ಮೂಡಿಸದೆ ಇರಲಾರದು. ಅದು ಚೋಳರ ವೈಭವ! ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ದಾರಾಸುರಂನ ಈ ಐರಾವತೇಶ್ವರ ದೇವಾಲಯ ವಿಶಿಷ್ಟವಾಗಿ ನಿಲ್ಲುತ್ತದೆ. ಅದಕ್ಕಾಗಿಯೇ ಇದನ್ನು UNESCO ವಿಶ್ವಪರಂಪರಿಕ ಪಟ್ಟಿಗೆ ಸೇರಿಸಿದ್ದು. ನಾನು ನಾಳೆ ಈ ದೇವಾಲಯಕ್ಕೆ ಭೇಟಿ ನೀಡಲು ಉತ್ಸುಕಳಾಗಿದ್ದೇನೆ!'
          ಈ ರೀತಿ ಅಂದು ರಾತ್ರಿ ಬೆಂಗಳೂರಿನ ವಿಶ್ವವಿದ್ಯಾಲಯದ ಎಂ.. ಪ್ರಾಚ್ಯ ಶಾಸ್ತ್ರ ಮತ್ತು ಇತಿಹಾಸ ವಿದ್ಯಾರ್ಥಿನಿ ಯಾದ ಸ್ಫೂರ್ತಿ ತನ್ನ ಡೈರಿಯಲ್ಲಿ ಬರೆದು, ತಾನು ಪ್ರಯಾಣಿಸುತ್ತಿದ್ದ ಸ್ಲಿಪರ್ಕ್ಲಾಸ್ನ ಬಸ್ಸಿನ ಕಿಟಕಿಯಿಂದ ಹೊರ ನೋಡುತ್ತ, ಆ ದೇವಾಲಯದ ಬಗ್ಗೆಯೇ ಯೋಚಿಸುತ್ತಾ ಮಲಗುತ್ತಾಳೆ. ಹೊರಗೆ ಒಂದೇ ಸಮ ಜೋರು ಮಳೆ. ತಾನು ನಾಳೆ ತನ್ನ ಗೆಳತಿಯ ಮದುವೆಯ ಸಲುವಾಗಿ ಕುಂಬಕೊಣಂಗೆ ಹೋಗುತ್ತಿದ್ದೇನೆ ಎಂಬುದನ್ನೇ ಮರೆತು ಅದೇ ಐರಾವತೇಶ್ವರ ದೇವಾಲಯವನ್ನು ತನ್ನ ಮನಸ್ಸಿನಲ್ಲಿ ತುಂಬಿಕೊಳ್ಳುತ್ತಾಳೆ.
          ಐರಾವತೇಶ್ವರ ದೇವಾಲಯ ಕ್ರೀ.1150 ರಂದು ಚೋಳರ ದೊರೆ, ಇಮ್ಮಡಿ ರಾಜ ರಾಜ ಚೋಳ ತನ್ನ ರಾಜ್ಯದಲ್ಲಿ ನಿರ್ಮಾಣ ಮಾಡುತ್ತಾನೆ. ತನ್ನ ಹೆಸರಲ್ಲೆ ಇದ್ದ ರಾಜರಾಜೇಶ್ವರ ದೇಗುಲ ಕಾಲ ಕಳೆದಂತೆ ಐರಾವತೇಶ್ವರ ದೇವಾಲಯವಾಗಿ ವಿಜೃಂಭೀಸುತ್ತದೆ. ತನ್ನ ತಂದೆ ಕಟ್ಟಿದ ಬೃಹದೇಶ್ವರ ದೇವಾಲಯಗಿಂತಲೂ ಇದರಲ್ಲಿ ಶಿಲ್ಪಕಲೆಗಳು ಹೆಚ್ಚು ಇರಬೇಕು ಎಂದು ಭಾವಿಸಿ. ನಿತ್ಯ-ವಿನೋದ(ETERNAL ENTERTAINMENT) ಕಲ್ಪನೆಯಲ್ಲಿ ಈ ದೇವಾಲಯವನ್ನು ಅಭೂತಪೂರ್ವವಾಗಿ ಸುಮಾರು ಮೂವತ್ತು ವರ್ಷಗಳ ಕಾಲ ನಿರ್ಮಾಣ ಮಾಡುತ್ತಾನೆ ರಾಜ ರಾಜ ಚೋಳ. ದ್ರಾವಿಡ ಶೈಲಿಯ ಈ ದೇವಾಲಯದ ಗರ್ಭಗುಡಿಯು ರಥದ ಮಾದರಿಲ್ಲಿದ್ದು ಇದನ್ನು ಎರಡು ಅಶ್ವಗಳು ಎಳೆಯುತ್ತಿದ್ದಂತೆ ಭಾಸವಾಗುತ್ತದೆ. ಇಲ್ಲಿನ ಮೂಲ ದೇವರು ಶಿವ ಐರಾವತೇಶ್ವರನ ರೂಪದಲ್ಲಿ ಪೂಜಿ ಯನ್ನು ಪಡೆಯುತ್ತ ಶೈವ ತತ್ವವನ್ನು ಪ್ರತಿಬಿಂಬಿಸುತ್ತದೆ. ಇದರ ವಾಸ್ತುಶೈಲಿಯೇ ವಿಶಿಷ್ಟ. ಸಾಕಷ್ಟು ವಿಗ್ರಹಗಳೊಂದಿರುವ ಈ ದೇವಾಲಯ ಗಂಗಾ, ಕಾವೇರಿ, ಯಮುನೆ ಜಲದೇವರುಗಳ ವಿಗ್ರಹಗಳನ್ನು ಕೂಡ ಹೊಂದಿದೆ. ರಾಜ ರಾಜ ಚೋಳನ ಆಸ್ಥಾನದಲ್ಲಿದ್ದ 108 ಒತುವರರ(ಹಾಡುಗಾರರ) ವಿಗ್ರಹಗಳು ಕೂಡ ಒಂದಿದೆ. ಇಲ್ಲಿನ ಬಲಿಪೀಠದ ವಿಶೇಷವೆಂದರೆ ಬಲಿಪೀಠದ ಏಳು ಮೆಟ್ಟಿಲುಗಳನ್ನು ಬಡಿದರೆ ಏಳು ಸ್ವರವನ್ನು ಹೊರಹೊಮ್ಮಿಸುತ್ತದೆ!
          ಅದರೆ ನನಗೆ ಇದಾವುದು ಬೇಡ "ಭಾರತದ ಪ್ರತಿ ಪುರಾತನ ಕೆತ್ತನೆಯಲ್ಲಿ ಒಂದಲ್ಲ ಒಂದು ರೀತಿಯ ನಿಗೂಢರ್ಥವಿರುತ್ತದೆ." ಎಂದು ತನ್ನ ಪ್ರೊಫೆಸರ್‌‌ ರಗತಿಯಲ್ಲಿ ಹೇಳುತ್ತಿದ್ದ ಮಾತು ನೆನಪಾಗಿ ಸ್ಫೂರ್ತಿ, ಆ ದೇವಾಲಯದ ಬಗ್ಗೆ ಮತ್ತಷ್ಟು ತಿಳಿಯಲು ಹೊರಡುತ್ತಾಳೆ. ಪ್ರತಿ ಕೆತ್ತನೆಯನ್ನು, ಶಿಲ್ಪವನ್ನು ಸೂಕ್ಷ್ಮವಾಗಿ ಗಮಿಸುತ್ತಿರುವಾಗ: ಹಿಂಬದಿಯಿಂದ ಯಾರೋ ತನ್ನನ್ನು ಮುಟ್ಟಿದ ಹಾಗೆ ಆಗಿ ಹಿಂದೆ ತಿರುಗಿ ನೋಡಿದಾಗ ಯಾರೋ ತುಂಬಾ ವಯಸ್ಸಾದ ವೈಕ್ತಿ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ಗಮನಿಸುತ್ತಾಳೆ. ಆ ವೈಕ್ತಿಯ ಮುಖದ ಕಾಂತಿಗೊ ಅಥವಾ ಇದ್ದಕಿದ್ದಹಾಗೆ ಯಾರೋ ನನ್ನನ್ನು ಮುಟ್ಟಿದರು ಎಂಬ ಕೋಪಕ್ಕೊ ಆಕೆಯಿಂದ ಮಾತು ಹೊರಬರಲಿಲ್ಲ!
          "ಯಾರಮ್ಮಾ ನೀನು, ತುಂಬಾ ಹೊತ್ತಿನಿಂದ ದೇವಾಲಯವನ್ನು ಇಷ್ಟು ಸುತ್ತಿ ಪರಿಶೀಲಿಸುತ್ತಿದ್ದಿಯಾ?" ಎಂದು ಮೊದಲು ಅ ವ್ಯಕ್ತಿಯೇ ಅವಳನ್ನು ಕೇಳಿದರು.
          "ನಾನು ಪ್ರಾಚ್ಯ ಶಾಸ್ತ್ರ ಮತ್ತು ಇತಿಹಾಸದ ವಿದ್ಯಾರ್ಥಿನಿ, ಚೋಳರ ಈ ಅದ್ಭುತ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯಲು ಪರಿಶೀಲಿಸುತ್ತಿದ್ದೆ" ಎಂದಾಗ ಆ ವ್ಯಕ್ತಿ. "ಅಲ್ಲೇ ಹಾಕಿದಾರಲ್ಲಮ್ಮ ದೇವಾಲಯದ ಮಾಹಿತಿ ಫಲಕದಲ್ಲಿ, ನೀನು ಕೂಡ ಓದಿದೆಯಲ್ಲಾ" ಎಂದು ಹೇಳುತ್ತಾರೆ. ಆಗ ಸ್ಫೂರ್ತಿ "ಇಲ್ಲ ಅದೇಕೊ ನನಗೆ ಅಲ್ಲಿ ಸಂಪೂರ್ಣ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಇಲ್ಲಿನ ಗರ್ಭಗುಡಿಯ ಶೈಲಿ, ಅನೇಕ ವಿಗ್ರಹಗಳು, ಕುದುರೆ, ಐರಾವತ, ರಥ ಏನೋ ನಿಗೂಢ ಅರ್ಥವನ್ನು ಸೂಚಿಸುತ್ತದೆ! ಅದು ನನಗೆ ಬೇಕಾದ ನಿಜವಾದ ಮಾಹಿತಿ" ಎಂದಾಗ ಆಕೆ ಮತ್ತೆ ತನ್ನ ಪ್ರೊಫೆಸರ್ ಅವಳಿಗೆ ಹೇಳಿದ ಮಾತನ್ನು ಆತನಿಗೆ ಹೇಳುತ್ತಾಳೆ. "ಭಾರತದ ಪ್ರತಿ ಪುರಾತನ ಕೆತ್ತನೆಯಲ್ಲಿ ಒಂದಲ್ಲ ಒಂದು ರೀತಿಯ ನಿಗೂಢರ್ಥವಿರುತ್ತದೆ!!"
          ಆಕೆಯ ಮಾತನ್ನು ಕೇಳಿದ ಆ ವ್ಯಕ್ತಿ ಸ್ವಲ್ಪ ಮಟ್ಟಿಗೆ ಸಂತೋಷಗೊಂಡು "ಬಾರಮ್ಮಾ ನಾನು ನಿನಗೆ ಈ ದೇವಾಲಯದ ವಿಶಿಷ್ಟ ವಾಸ್ತುಶಿಲ್ಪದ ಇತಿಹಾಸವನ್ನು ಹೇಳುತ್ತೇನೆ" ಎಂದು ನುಡಿದು ದೇವಾಲಯದ ಮತ್ತೊಂದು ದಿಕ್ಕಿಗೆ ಆತ ಕರೆದುಕೊಂಡು ಹೋಗುತ್ತಾರೆ. ಗೊಂದಲದಿಂದಲೇ ಆಕೆ ಅವರನ್ನು ಹಿಂಬಾಲಿಸುತ್ತಾಳೆ. ಆ ವ್ಯಕ್ತಿ ದೇವಾಲಯದ ಮುಂಭಾಗದ ಸ್ವಲ್ಪ ಬದಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಓಂದು ವಿಗ್ರಹವನ್ನು ತೋರಿಸುತ್ತಾರೆ. ಪುರಾತನ ಶಾಸ್ತ್ರ ದ ವಿದ್ಯಾರ್ಥಿನಿ ಯಾದ ಕಾರಣ ಆಕೆಗೆ ಆ ವಿಗ್ರಹವನ್ನು ನೋಡಿದ ಕೂಡಲೇ ಅದು ಸೂರ್ಯ ದೇವರ ವಿಗ್ರಹವೆಂದು ಆಕೆಗೆ ತಿಳಿಯುತ್ತದೆ.(ಭಾರತದ ಅಷ್ಟು ಸೂರ್ಯನ ಪುರಾತನ ವಿಗ್ರಹದಲ್ಲಿ, ಸೂರ್ಯ ತನ್ನ ಎರಡು ಕೈಗಳಲ್ಲೂ ಕಮಲವನ್ನು ಹಿಡಿದುಕೊಂಡಿರುತ್ತಾನೆ.)
          ಕೂಡಲೇ ಆ ವ್ಯಕ್ತಿ ಅವಳನ್ನು ಪುನಃ ದೇವಾಲಯದ ಮತ್ತೊಂದು ಭಾಗಕ್ಕೆ ಕರೆದುಕೊಂಡು ಹೋಗಿ ಮತ್ತೊಂದು ಕೆತ್ತನೆಯನ್ನು ತೋರಿಸುತ್ತಾರೆ.ಅದು ಕೂಡ ಸೂರ್ಯನ ವಿಗ್ರಹವೇ ಆಗಿರುತ್ತದೆ. ದೇವಾಲಯದ ಎರಡು ಬದಿಯಲ್ಲೂ ಸೂರ್ಯನ ವಿಗ್ರಹವನ್ನು ಕೆತ್ತಿರಬಹುದೆಂದು ಆಕೆ ಭಾವಿಸುತ್ತಾಳೆ!
          ಅ ವಿಗ್ರಹವನ್ನೆ ತೋರಿಸುತ್ತ ಅ ವ್ಯಕ್ತಿ ಅಲ್ಲಿ ನೋಡಿದ ವಿಗ್ರಹಕ್ಕೂ ಮತ್ತು ಇದಕ್ಕೂ ಏನು ವ್ಯತ್ಯಾಸವಿದೆ ಎಂದು ಕೇಳಿದಾಗ ಆಕೆ ಮತ್ತಷ್ಟು ಗೊಂದಲಕ್ಕೆ ಇಡಾಗುತ್ತಾಳೆ. "ಎರಡು ಸೂರ್ಯನ ವಿಗ್ರಹಗಳೇ ಅದರಲ್ಲಿ ವ್ಯತ್ಯಾಸವೆಲ್ಲಿಂದ ಬಂತು" ಎಂದು ಆಕೆ ಹೇಳಿದಾಗ ಆತ ವಿಗ್ರಹವನ್ನು ಸೂಕ್ಷ್ಮವಾಗಿ ತೋರಿಸಿ ಅದರಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತಾರೆ.
          'ಒಂದು ಬದಿಯ ಸೂರ್ಯನ ಕೈಯಲ್ಲಿರುವ ಕಮಲಗಳು ಅರಳಿದ್ದರೆ ಮತ್ತೊಂದು ಬದಿಯ ಸೂರ್ಯನ ಕೈಯಲ್ಲಿರುವ ಕಮಲಗಳು ಅರಳಿರುವುದಿಲ್ಲದಂತೆ ಕೆತ್ತನೆ ಮಾಡಲಾಗಿದೆ. ಇದರ ಅರ್ಥ ಒಂದು ವಿಗ್ರಹ ಬೆಳಗಿನ ಸೂರ್ಯನನ್ನು ಸೂಚಿಸಿದರೆ ಮತ್ತೊಂದು ವಿಗ್ರಹ ಸಂಜೆಯ ಸೂರ್ಯನ ವಿಗ್ರಹವನ್ನು ಸಂಕೇತಿಸುತ್ತದೆ. ಅಂದರೆ ಕಮಲದ ಹೂಗಳು ಬೆಳಗ್ಗಿನ ಸೂರ್ಯ ಕಿರಣಗಳಿಗೆ ಅರಳಿದರೆ ಸಂಜೆಯಾಗುತ್ತಿದ್ದಂತೆ ತನ್ನ ದಳಗಳನ್ನೆಲ್ಲ ಮುದುಡಿಕೊಳ್ಳತ್ತದೆ. ಇದಕ್ಕೆ ಮತ್ತಷ್ಟು ಪುರಾವೆಗಳು ಇದೆ ವಿಗ್ರಹಗಳ ಮುಂದೆ ದೊರೆಯುತ್ತದೆ.'
          ರಥದ ಮಾದರಿಯಲ್ಲಿರುವ ಗರ್ಭಗುಡಿಯನ್ನು ಏಳೆಯುತ್ತಿರುವ ಆಶ್ವದ ಬದಿಗೆ ಸಣ್ಣದಾಗಿ ಕೆತ್ತಿರುವ ವ್ಯಕ್ತಿಯೊಬ್ಬನ ವಿಗ್ರಹ. ಬೆಳಗಿನ ಸೂರ್ಯನ ವಿಗ್ರಹದ ಮುಂದೆ ಇರುವ ಆ ವ್ಯಕ್ತಿಯ ಕೆತ್ತನೆಯಲ್ಲಿ: ಅವನ ಮುಖವು ಸಂತೋಷದಿಂದ ಕೂಡಿದ್ದು, ಆತನ ತಲೆಗೂದಲು ಅಚ್ಚುಕಟ್ಟಾಗಿ ಬಾಚಿ ಅಶ್ವ ವನ್ನು ಸವಾರಿಮಾಡಲು ಸಿದ್ದನಾಗಿದ್ದನೆ ಎಂದು ಭಾಸವಾಗುತ್ತದೆ. ಸಂಜೆಯ ಸೂರ್ಯನ ವಿಗ್ರಹದ ಮುಂದೆ ಇರುವ ಅದೇ ವ್ಯಕ್ತಿಯ ಕೆತ್ತನೆಯಲ್ಲಿ: ಅವನ ಮುಖಭಾವ ಆಯಸದಿಂದ ಕೂಡಿರುವುದನ್ನು ಗಮನಿಸಬಹುದು ಅಲ್ಲದೇ, ಆತನ ತಲೆಗೂದಲು ಬೆಳಗಿನ ರೀತಿ ಅಚ್ಚುಕಟ್ಟಾಗಿ ಇರುವುದಿಲ್ಲ ಮತ್ತು ತನ್ನ ಕುದುರೆಗೆ ಇಮ್ಮುಖವಾಗಿ ನಡೆಯಲು ಪ್ರಾರಂಭಿಸಿದ್ದಾನೆ. ಅಂದರೆ ಇದರರ್ಥ ಆತನ ದಿನಚರಿ ಮುಗಿದಿದೆ ಎಂದರ್ಥ' ಎಂದು ವಿವರಿಸುತ್ತಿರುವಾಗ.
          "ಬೆಳಗ್ಗೆ, ಸಂಜೆಯ ಸೂರ್ಯನ ವಿಗ್ರಹಕ್ಕೂ. ಈ ರಥದ ಮಾದರಿಯ ಗರ್ಭಗುಡಿಗೂ, ದೇವಾಲಯಕ್ಕೂ ಏನು ಸಂಬಂಧ? ಇದರ ಅರ್ಥವೇನು?" ಎಂದು ಸ್ಫೂರ್ತಿ ಮತ್ತಷ್ಟು ಕುತೂಹಲದಿಂದ ಮತ್ತು ಗೊಂದಲದಿಂದ ಕೇಳುತ್ತಾಳೆ. "ವಿವರಿಸುತ್ತೇನೆ ಕೇಳಮ್ಮಾ" ಎಂದು ಮುಂದುವರಿಸುತ್ತಾರೆ.
          'ಈ ವಿಗ್ರಹಗಳೆಲ್ಲ ಕೇವಲ ಸಂಕೇತಿಕಾವಾಗಿ ಕೆತ್ತನೆ ಮಾಡಿದ್ದಲ್ಲ, ಇದನ್ನು ಮಡಿದಕ್ಕೂ ಕೆಲವು ಕಾರಣಗಳಿವೆ ಎಂದು ಆತ ಗರ್ಭಗುಡಿಯಯನ್ನು ಏಳೆಯುತ್ತಿರುವ ರಥದ ಚಕ್ರವನ್ನು ತೋರಿಸುತ್ತಾ ಇದು ಏನೆಂಬುದನ್ನು ಕೇಳುತ್ತಾರೆ?' "ಅದರಲ್ಲೆನಿದೆ, ಅದು ರಥದ ಚಕ್ರವಲ್ಲವೇ?" ಎಂದು ಹೇಳಿದಾಗ ಆತ 'ಇದು ಕೇವಲ ರಥದ ಚಕ್ರವಲ್ಲ. ಇದು ಛಾಯ ಗಡಿಯಾರ ಅಥವಾ ಸೂರ್ಯನ ನೆರಳಿನ ಗಡಿಯಾರ!! ಅಂದರೆ ಸನ್-ಡಯಲ್(SUN-DIAL) (ಯಾಂತ್ರಿಕ ಗಡಿಯಾರದ ಅವಿಷ್ಕಾರಕ್ಕೂ ಮೊದಲು ದಿನದ ಸಮಯವನ್ನು ತಿಳಿಯಲು ಉಪಯೋಗಿಸುತ್ತಿದ್ದ ಸಾಧನ ಸನ್-ಡಯಲ್ ಅಥವಾ ಛಾಯ ಗಡಿಯಾರ)
          ಇದನ್ನು ಕೇಳುತ್ತಲೆ ಅಚ್ಚರಿಗೊಂಡ ಸ್ಫೂರ್ತಿ "ಏನು? ಇದು ಸನ್-ಡಯಲಾ! ಭಾರತದ ಪುರಾತನ ಛಾಯಗಡಿಯಾರವೆಂದರೆ ಅದು ಕೊನರ್ಕ್ನ ಸೂರ್ಯ ದೇವಾಲಯದಲ್ಲಿರುವ ಛಾಯಗಡಿಯಾರವಲ್ಲವೇ? ಅದನ್ನು ನಿರ್ಮಿಸಿದ್ದು ಕ್ರೀ.1250ರಲ್ಲಿ. ಇದು ಛಾಯ ಗಡಿಯಾರವಾದರೆ ಅದಕ್ಕಿಂತಲೂ ಪ್ಚಾಚಿನವಾದದ್ದು ಅಂದರೆ ಇದನ್ನು ನಿರ್ಮಿಸಿದ್ದು ಕ್ರಿ.1150 ರಲ್ಲಿ ಕೊನರ್ಕ್ನ ಸೂರ್ಯ ದೇವಾಲಯದಲ್ಲಿರುವ ಛಾಯಗಡಿಯಾರ ನಿರ್ಮಾಣಕ್ಕೂ ನೂರು ವರ್ಷದ ಮುಂಚೆಯೇ! ಏಕೆ ಇದು ಇತಿಹಾಸಕಾರರ ಗಮನಕ್ಕೆ ಬರಲಿಲ್ಲ! ಇದನ್ನು ಕಟ್ಟಿಸಿದ್ದ ರಾಜರಾಜ ಚೋಳ ಅದೆಷ್ಟು ನೊಂದು ಕೊಂಡಿರುತ್ತಾನೋ?" ಎಂದು ಅಶ್ಚರ್ಯದ ಜೊತೆಗೆ ದುಃಖವನ್ನು ವ್ಯಕ್ತಪಡಿಸುತ್ತಾಳೆ.
          "ಅದಕ್ಕೆನಮ್ಮಾ ನಾನು ನಿನಗೆ ಇತಿಹಾಸ ಕಾಲ ಗರ್ಭದಲ್ಲಿ ಅಡಗಿರುವ ರಹಸ್ಯವನ್ನು ತಿಳಿಸುತ್ತಿರುವುದು. ಹೌದು! ಇದು ಭಾರತದ ಪುರಾತನ ಛಾಯ ಗಡಿಯಾರ. ನೀನು ಕೇಳುತ್ತಿದ್ದೆಯಲ್ಲಾ ಬೆಳಗಿನ ಸೂರ್ಯ ಮತ್ತು ಸಂಜೆಯ ಸೂರ್ಯನ ವಿಗ್ರಹದ ಕೆತ್ತನೆಗೆ ಕಾರಣವೇನು ಎಂದು. ಇದಕ್ಕೆ ಇದೇ ನೋಡಮ್ಮ ಉತ್ತರ! ಬೆಳಗಿನ ಸೂರ್ಯನ ಕೆಳಗೆ ಇರುವ ಈ ರಥ ಚಕ್ರ ಅಂದರೆ ಈ ಛಾಯ ಗಡಿಯಾರ ಬೆಳಗ್ಗಿನ ಸಮಯವನ್ನು ಸೂಚಿಸಿದರೆ ಸಂಜೆ ಸೂರ್ಯನ ವಿಗ್ರಹದ ಕೆಳಗೆ ಇರುವ ಛಾಯ ಗಡಿಯಾರ ಸಂಜೆಯ ಸಮಯವನ್ನು ಸೂಚಿಸುತ್ತದೆ: ಸೂರ್ಯನ ನೆರಳು-ಬೆಳಕಿನ ಆಟದಿಂದ. ಇದು ಒಂದು ವಿಶೇಷ ರೀತಿಯಲ್ಲಿ ಕೆತ್ತನೆಮಾಡಿರುವ ಛಾಯ ಗಡಿಯಾರ- ರಥದ ಚಕ್ರವಾಗಿ ಸೂರ್ಯನ ವಿಗ್ರಹದ ಕೆಳಗೆ ಕೆತ್ತಿರುವ ಛಾಯಗಡಿಯಾರ- ಅಂದರೆ ಕಾಲಚಕ್ರ!"
          ಸೂಕ್ಷ್ಮವಾಗಿ ಇದನೆಲ್ಲಾ ಗಮನಿಸಿತ್ತಿದ್ದ ಸ್ಫೂರ್ತಿಗೆ ಒಂದು ರೀತಿಯ ಅಚ್ಚರಿ ಮೂಡಿಸಿತ್ತು. "ನಾನು ನೋಡಿರುವ- ಓದಿರುವ ಛಾಯಗಡಿಯಾರಗಳೆಲ್ಲ ಕೇವಲ ಒಂದೇ ಚಕ್ರದ ರೀತಿಯಲ್ಲಿತ್ತು ಬೌದ್ಧ ಧರ್ಮದ ಕಾಲಚಕ್ರವನ್ನು ಹೊರತುಪಡಿಸಿ. ಇಲ್ಲಿ ಸೂರ್ಯನ ಎರಡು ವಿಗ್ರಹ ಮತ್ತು ಅದರ ಬಳಿ ಇರುವ ಚಕ್ರಗಳು ಕಾಲವನ್ನು ತಿಳಿಸುತ್ತದೆಯಂದಾಯಿತು ಅದರೆ ಏಕೆ ಮತ್ತು ಹೇಗೆ ಎಂಬ ಗೊಂದಲವನ್ನು ಆಕೆ ಆತನ ಬಳಿ ತೋರಿಸಿಕೊಂಡಳು.
          'ಸನ್-ಡಯಲ್ಗಡಿಯಾರದ ನೆರಳಿನ ಚಲನೆ ಹೇಗಿರುತ್ತದೆಂದು ಸೂಕ್ಷ್ಮವಾಗಿ ಗಮನಿಸು ಮಗಳೇ, ಬೆಳಗ್ಗೆ ಸೂರ್ಯ ಪೂರ್ವದಲ್ಲಿದ್ದಾಗ ಕೋಲಿನ ನೆರಳು ಪಶ್ಚಿಮದಲ್ಲಿರುತ್ತದೆ. ಹೊತ್ತು ಏರಿದಂತೆಲ್ಲ, ಅಂದರೆ ಮಧ್ಯಾಹ್ನವಾದಾಗ ಸೂರ್ಯ ನೆತ್ತಿಯ ಮೇಲಿದ್ದಾನೆ ಅಂತನಿಸಿದರೂ ವಾಸ್ತವವಾಗಿ ದಕ್ಷಿಣ ದಿಕ್ಕಿನ ಕಡೆಗಿರುತ್ತಾನೆ. ಹಾಗಾಗಿ ಕೋಲಿನ ನೆರಳು ಕಡಿಮೆ ಉದ್ದದ್ದಾದರೂ ಉತ್ತರ ದಿಕ್ಕಿಗೆ ಚಾಚಿದ್ದಿರುತ್ತದೆ. ಸಂಜೆ ಹೊತ್ತು ಸೂರ್ಯ ಪಶ್ವಿಮ ದಿಕ್ಕಿಗೆ ಬಂದಾಗ ಕೋಲಿನ ನೆರಳು ಪೂರ್ವದ ಕಡೆಗಿರುತ್ತದೆ. ಒಟ್ಟಿನಲ್ಲಿ ಮುಂಜಾನೆಯಿಂದ ಸಂಜೆಯವರೆಗಿನ ನೆರಳಿನ ಚಲನೆ ಪಶ್ಚಿಮದಿಂದ ಆರಂಭಗೊಂಡು ಉತ್ತರರದ ಮೂಲಕ ಪೂರ್ವಕ್ಕೆ ಸಾಗಿರುತ್ತದೆ. ಅಂದರೆ, ಅರ್ಧವೃತ್ತವೇ ಹೌದಾದರೂ ಅದು ಪ್ರದಕ್ಷಿಣೆ ರೀತಿಯದೇ. ಮಧ್ಯಪ್ರಾಚೀನ ಯುಗದಲ್ಲಿ ಕಾಲ ಗಣನೆ ಈ ರೀತಿಯ ಸನ್-ಡಯಲ್ಗಡಿಯಾರಗಳಿಂದಲೇ ನಡೆಯುತ್ತಿತ್ತು. ಆದರೆ ಇಲ್ಲಿನ ಛಾಯ ಗಡಿಯಾರ ಅದರಂತಲ್ಲ ಸೂಕ್ಷ್ಮವಾಗಿ ಗಮನಿಸು ಇಲ್ಲಿ ಆ ಚಕ್ರದಲ್ಲಿ ಸುಮಾರು 32ಗೆರೆಗಳಿವೆ ಅಂದರೆ ಪ್ರತಿ ಗೆರೆಗಳ ಅಂತರವು 45 ನಿಮಿಷವನ್ನು ಸೂಚಕವಾಗಿ ತೋರಿಸುತ್ತದೆ ಅಂದರೆ ಸೂರ್ಯ ತಾನು ಬೆಳಗಿನ ದಿಕ್ಕು ಬದಲಿಸಿ ಆ ಬದಿಯ ಚಕ್ರದಿಂದ ಈ ಬದಿಗೆ ಬರುತ್ತದೆ. ಒಂದು ಚಕ್ರದಲ್ಲಿ ಬೆಳಗಿನ ಸಮಯವನ್ನು ತೋರಿದರೆ ಮತ್ತೊಂದೆಡೆ ಸಂಜೆಯ ಸಮಯವನ್ನು ತಿಳಿಸುತ್ತದೆ. ಅದಕ್ಕಾಗಿ ಇಲ್ಲಿ ಬೆಳಗಿನ ಸೂರ್ಯ ವಿಗ್ರಹವು ಮತ್ತು ಸಂಜೆಯ ಸೂರ್ಯ ವಿಗ್ರಹವನ್ನು ಸೂಚಕವಾಗಿ ಕೆತ್ತಿದ್ದಾರೆ. ಇಷ್ಟೆ ಅಲ್ಲದೆ ನಮಗೆ ಮತ್ತಷ್ಟು ಪುರಾವೆಗಳು ಇಲ್ಲಿ ದೊರೆಯುತ್ತದೆಂದು ಆತ ರಥದ ಎರಡು ಬದಿಯ ಕುದುರೆಯ ಅಡಿಯಲ್ಲಿ ರಥದಲ್ಲಿ ಕೆತ್ತಿರುವ ಮತ್ತೆರಡು ವಿಗ್ರಹವನ್ನು ತೋರಿಸುತ್ತಾರೆ.
          ಮೊದಲ ವಿಗ್ರಹವನ್ನು ನೋಡಿದ ಸ್ಫೂರ್ತಿಗೆ ಆ ವಿಗ್ರಹ ಯಾವುದೆಂದು ತಿಳಿಯುತ್ತದೆ. ಅದು ಶಿವನ ಉಗ್ರ ರೂಪವಾದ ಕಾಲಭೈರವ!
          ಅದು ಕಾಲಭೈರವನ ವಿಗ್ರಹ. ಕಾಲಭೈರವನೆಂದರೆ ಸಾರ್ವಕಾಲಿಕ, ತ್ರಿಕಾಲಭಾಧಿತ ಕಾಲ ಸೂಚಕ. ಭೂತ, ಭವಿಷ್ಯ ಮತ್ತ ವರ್ತಮಾನದ ಸೂಚಕವಾಗಿ ಆ ವಿಗ್ರಹವನ್ನು ಒಂದು ಚಕ್ರದ ಬಳಿ ಕೆತ್ತಿದ್ದರೆ ಮತ್ತೊಂದು ಚಕ್ರದ ಬಳಿ ಕೆತ್ತಿದ ವಿಗ್ರಹವನ್ನು ನೋಡಿ ಸ್ಫೂರ್ತಿಗೆ ದಂಗುಬಡಿದಂತಾಯ್ತು!
          ಅದು ಜ್ಞಾನಮುದ್ರೆಯಲ್ಲಿ ಕೂತು, ಆಚಲವಾಗಿ, ಶಾಂತವಾಗಿ ಧ್ಯನಿಸುತ್ತಿದ್ದ ಬುದ್ದನ ವಿಗ್ರಹ! ಶೈವ ದೇಗುಲದಲ್ಲಿ ಬುದ್ದನ ವಿಗ್ರಹ!
          ಕೂತುಹಲ ಮತ್ತು ಗೊಂದಲಗಳನ್ನು ತಡೆಯದೇ ಆಕೆ "ಇಲ್ಲಿ ಬುದ್ದನ ವಿಗ್ರಹವಿರುವುದಕ್ಕೆ ಕಾರಣವೇನು? ದೇಗುಲದ ಯಾವುದೇ ಭಾಗದಲ್ಲೂ ಭೌದ್ಧಧರ್ಮದ ಕೂರಹುಗಳಿಲ್ಲದಿದ್ದರೂ ಇಲ್ಲಿ ಬುಧ್ಧನ ವಿಗ್ರಹ ಏಕೆ ಕೆತ್ತೆದ್ದಾರೆ?" ಎಂದು ಆತನಿಗೆ ಕೇಳುತ್ತಾಳೆ. 'ಬುದ್ದನ ವಿಗ್ರಹ ಕೆತ್ತಿರುವುದಕ್ಕೂ ಇಲ್ಲಿ ಕಾರಣವಿದೆ! ಬೌದ್ದಧರ್ಮದಲ್ಲಿ ಕಾಲಚಕ್ರದ ಬಳಕೆ ಮಹತ್ವದಾಗಿದ್ದೆ ನಮಗೆ ಅದಕ್ಕೆ ಬಹಳಷ್ಟು ಉದಾಹರಣೆಗಳೂ ಕೂಡ ದೊರೆಯುತ್ತದೆ. ಬೌದ್ದಧರ್ಮದ ಪುರಾತನ ಗ್ರಂಥಗಳಲ್ಲಿ ಹೇಳಿರುವಂತೆ ಹಿಂದೆ ಬೌದ್ದರು ಸಮಯವನ್ನು ನೋಡಲು ಇದೆ ಮಾದರಿಯ ಸನ್ಡಯಲ್ ಅಂದರೆ ಎರಡು ಚಕ್ರದ ಕಾಲಚಕ್ರವನ್ನು ಉಪಯೋಗಿಸುತ್ತಿದ್ದರು." ಇದಕ್ಕೆ ಸ್ಫೂರ್ತಿ, ಇಲ್ಲಿರುವ ಛಾಯ ಗಡಿಯಾರವೂ ಬೌದ್ಧದರ್ಮದ ಕಾಲಚಕ್ರದಂತೆ ಕೆತ್ತಲ್ಪಟ್ಟಿದೆಯೇ??" ಎಂದು ಕೇಳುತ್ತಾಳೆ. ಅಷ್ಟರಲ್ಲಿ ಒಂದೇ ಸಮನೆ ಜೋರು ಮಳೆ ಗುಡುಗಿನ ಸಮೇತ ಬಂದ ಕಾರಣ ಅವಳೆ ಅಲ್ಲೆ ಹತ್ತಿರದಲ್ಲಿದ್ದ ಮಂಟಪದಲ್ಲಿ ಆಶ್ರಯ ಪಡೆಯಲು ಓಡುತ್ತಾಳೆ. ಆತ ಬಾರದೇ ಇದ್ದದ್ದನ್ನೂ ನೋಡಿ ' ಸರ್, ನಿಮ್ಮ ಹೆಸರು ಹೇಳಿ, ನಾಳೆ ಭೇಟಿಯಾಗಿ ಮತ್ತಷ್ಟು ಮಾಹಿತಿ ಪಡೆಯುತ್ತೇನೆ ಎಂದಾಗ' ಆ ವ್ಯಕ್ತಿ ಹಿಂದೆ ತಿರುಗಿ ಆಕೆಯನ್ನೇ ದಿಟ್ಟಿಸಿ ನೋಡುತ್ತ "ರಾಜ ರಾಜ ಚೋಳ" ಅಂದು ಹೇಳಿ ಮಳೆಯಲ್ಲಿ ಮರೆಯಾಗುತ್ತಾನೆ!
          "ದಿಗ್ಭ್ರಮೆಗೊಂಡಳು ಸ್ಫೂರ್ತಿ" ಭೀಕರ ಸಿಡಿಲುಬಡೆದಂತೆ ಭಾಸವಾಯ್ತು! ಸ್ಲಿಪರ್ಕೋಚ್ನಲ್ಲಿ ಮಲಗಿದ್ದ ಸ್ಫೂರ್ತಿ ಸಿಡಿಲಿನ ಸದ್ದಿಗೆ ಎಚ್ಚರಗೊಳ್ಳುತ್ತಾಳೆ! ತಾನು ಇದುವರೆಗೂ ಕಂಡದ್ದೂ ಕನಸಾ!! ಎಂದು ಚಿಂತಿಸುತ್ತಲೆ ಬಸ್ಸು ದಾರಾಸುರಂ ಪಟ್ಟಣವನ್ನು ಬಂದು ಸೇರುತ್ತದೆ. ಕೂಡಲೇ ಐರಾವತೇಶ್ವರ ದೇವಾಲಯಕ್ಕೆ ಬಂದ ಆಕೆಗೆ ತಾನು ಕನಸಿನಲ್ಲಿ ಕಂಡ ಅಷ್ಟು ಕೆತ್ತನೆಗಳು ಅದೇ ರೀತಿಯ ವಿವರಗಳನ್ನೊಲುವ ಚಕ್ರಗಳನ್ನು ನೋಡಿ ಆಶ್ಚರ್ಯಗೊಳ್ಳುತ್ತಾಳೆ!
          ಬೆಂಗಳೂರಿಗೆ ಬಂದು ತಾನು ಕನಸಿನಲ್ಲಿ ಕಂಡ ಎಲ್ಲವನ್ನು ಕತೆಯ ರೂಪದಲ್ಲಿ ಬರೆದು ಪತ್ರಿಕೆಗೆ ಕಳುಹಿಸಿತ್ತಾಳೆ. ಕತೆ ಬರೆದ ಅವಳಿಗೆ ಸಾಕಷ್ಟು ಪ್ರಶಂಸೆ ಕೂಡ ದೊರೆಯುತ್ತದೆ! ಆದರೆ ಕನಸಿನಲ್ಲಿ ಬಂದ ವ್ಯಕ್ತಿ ಯಾರು? ನಿಜಾವಾಗಿಂತಯೇ ನನಗೆ ಕನಸು ಬರಲು ಹೇಗೆ ಸಾಧ್ಯ! ಮತ್ತು ಆ ಬುದ್ದನ ವಿಗ್ರಹ? ಅವಳ ಅಷ್ಟು ಪ್ರಶ್ನೆಗಳು ಪ್ರಶ್ನೆಯಾಗೆ ಉಳಿದುಬಿಡುತ್ತದೆ....
                                                                     -ಮಂಜುನಾಥ್. ಆರ್
AIRAVATESHWARA TEMPLE DARASURAMರಥದ ಮಾದರಿಯಲ್ಲಿರುವ ದೇವಾಲಯದ ಗರ್ಭಗುಡಿ- ರಥದ ಮೇಲೆ ಸೂರ್ಯ ದೇವನ ಕೆತ್ತನೆ ನೋಡಬಹುದು ನಂತರ ಚಕ್ರ.. ಚಕ್ರದ ಪಕ್ಕದಲ್ಲಿ ಪುಟ್ಟದಾಗಿರುವ ಬುದ್ದನ ವಿಗ್ರಹ


ಚಕ್ರ


ಎರಡು ವಿಗ್ರಹದಲ್ಲಿರುವ ವ್ಯತ್ಯಾಸ
No comments:

Post a Comment