ಬಹುದೇವೋಪಾಸನೆಯ ಸನಾತನ ಧರ್ಮ, ತೀರ್ಥಂಕರರ ಜೈನ ಧರ್ಮ ಆಜ್ನೇಯವಾದಿ ಬೌದ್ಧ ಧರ್ಮ ಮತ್ತು ಆದಿವಾಸಿಗಳ ವಿವಿಧ ಸಂಪ್ರದಾಯಗಳು ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ವಿವಿಧ ಜೀವನವಿಧಾನ ಗಳಿಂದ ಕೂಡಿದ ಸಮಾಜಗಳನ್ನು ಸೃಷ್ಟಿಸಿದ್ದರೂ ಏಕದೇವೋಪಾಸನೆಯ ಧರ್ಮದ ಸ್ಥಾಪನೆಯಾಗಿರಲಿಲ್ಲ.
ಶರಣಸಂಕುಲದಲ್ಲಿ ಯಾರು ಆರ್ಥಿಕ ಸಮಸ್ಯೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಬಸವಣ್ಣನವರು ಶಿವನಿಧಿಯನ್ನು ಸ್ಥಾಪಿಸಿದರು.ದೇವರ ಪ್ರತೀಕವಾದ ಸಕಲಜೀವಾತ್ಮರ ಸೇವೆಗೆ ದಾಸೋಹ ಎಂದು ಕರೆದರು. ಯೋಗ್ಯಉತ್ಪಾದನೆ,ಯೋಗ್ಯಬಳಕೆ, ಯೋಗ್ಯ ಸಾಮಾಜಿಕ ವಿತರಣಾ ವ್ಯವಸ್ಥೆ ಇರುವ ದೇಶದಲ್ಲಿ ಹಿಂಸೆ ತಾಂಡವ ಮಾಡುವುದಿಲ್ಲ ಎಂಬ ನಂಬಿಕೆ ಅವರದಾಗಿತ್ತು
ಜಗತ್ತಿನಲ್ಲಿ ಕಾಯಕಜೀವಿಗಳ ಸಂಘಟನೆ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು. ಅಲ್ಲಿಯವರೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕಾಯಕಜೀವಿಗಳ ಸಂಘಟನೆ ಯಾಗಿರಲಿಲ್ಲ. ಭಾರತದ ಸಮಾಜೋಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಕಾಯಕಜೀವಿಗಳಿಗೆ ಅಲ್ಲಿಯತನಕ ಯಾವುದೇ ಸ್ಥಾನವಿರಲಿಲ್ಲ.
ಭಾರತದ ಇತಿಹಾಸದಲ್ಲಿ ಶೂದ್ರರ ಮತ್ತು ಅತಿ ಶೂದ್ರರಾದ ಪಂಚಮರ ಅನುಭವಕ್ಕೆ ಯಾವುದೇ ಬೆಲೆ ಇರಲಿಲ್ಲ. ಶ್ರಮಜೀವಿಗಳ ಅನುಭವದಿಂದ ಸೃಷ್ಟಿಯಾದ ಅನುಭವವೇ ಬಸವಾದ್ವೈತ ಎಂಬ ಸಿದ್ಧಾಂತ. ಈ ಅನುಭಾವವೇ ಶರಣರ ಆಧ್ಯಾತ್ಮ , ತತ್ವಜ್ಞಾನ ಮತ್ತು ದರ್ಶನ.
ಬಸವಣ್ಣನವರು ಸಂಸತ್ತಿನ ಪರಿಕಲ್ಪನೆಯನ್ನು ಮೂಡಿಸಿದ ಮಹಾಜ್ಞಾನಿ. ಮಹಿಳೆಯರೂ ಸೇರಿದಂತೆ ದಲಿತ ಮೊದಲಾದ ವಿವಿಧ ಸಮಾಜಗಳ ಹಿನ್ನೆಲೆಯಿಂದ ಬಂದ ನಾಯಕರಾದ 770 ಅಮರಗಣಂಗಳ ಮೂಲಕ ಅನುಭವ ಮಂಟಪ ಎಂಬ ಸಮಾಜೋಧಾರ್ಮಿಕ ಸಂಸತ್ತಿನ ಮೂಲಕ ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವ ಕಲ್ಪನೆ ಮೂಡಿಸಿದರು.
ಚಳುವಳಿಯ ಪ್ರಜ್ಞೆ ಇಲ್ಲದೆ ಶರಣಸಂಕುಲ ವನ್ನಾಗಲಿ ಅನುಭವ ಮಂಟಪ ವನ್ನಾಗಲಿ ಸೃಷ್ಟಿಸುವುದು ಸಾಧ್ಯವಿಲ್ಲ. ಯುದ್ಧಗಳ ಜಗತ್ತಿನಲ್ಲಿ ಶರಣರ ಸಹಾಯದೊಂದಿಗೆ ಚಳುವಳಿಯನ್ನು ಮೊದಲಿಗೆ ರೂಪಿಸಿದವರು ಬಸವಣ್ಣನವರು. ಈ ಚಳವಳಿಯ ಪ್ರಜ್ಞೆ ಯಿಂದಾಗಿಯೆ ಶರಣರು ಹೊಸ ಮಾನವೀಯ ವ್ಯವಸ್ಥೆ ರೂಪಿಸುವಲ್ಲಿ ತಲ್ಲೀನರಾದರು.
ಬಸವಣ್ಣನವರು ವಯಸ್ಕರ,ಮಹಿಳೆಯರ, ದಲಿತರ,ಹಿಂದುಳಿದವರ ಒಟ್ಟಾರೆ ಕಾಯಕಜೀವಿಗಳ ಶಿಕ್ಷಣದ ಹರಿಕಾರರಾಗಿದ್ದಾರೆ. ಕಾಯಕಜೀವಿಗಳ ಶಿಕ್ಷಣ ಸಂಘಟನೆ & ಹೋರಾಟ, ವಚನ ಚಳುವಳಿಯ ಪ್ರಮುಖ ಅಂಶಗಳಾಗಿವೆ.ಬಸವಣ್ಣನವರು ಜನಸಮುದಾಯ ಸಂಘಟಿತರಾಗುವಂತೆ ಶಿಕ್ಷಣ ನೀಡಿದರು ಮತ್ತು ಹೋರಾಟಕ್ಕೆ ಪೂರಕವಾದ ಶರಣಸಂಕುಲದ ಸಂಘಟಿಸಿಸಿದರು.
1948 ಡಿಸೆಂಬರ್ 10ರಂದು ವಿಶ್ವಸಂಸ್ಥೆ ಘೋಷಿಸಿದ ಮಾನವ ಹಕ್ಕುಗಳಲ್ಲಿನ ಎಲ್ಲಾ 30 ಅಂಶಗಳು ಬಸವಣ್ಣನವರ ವಚನಗಳಲ್ಲಿವೆ. ಬಸವಣ್ಣನವರು 12ನೇ ಶತಮಾನದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವುದರ ಮೂಲಕ ಸರ್ವೋದಯದ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ.
ಶರಣರ ಸಂಕುಲ ದೊಳಗೆ ವಿಶ್ವದ ಮೊದಲ ಸಾಮಾಜಿಕ ನಿಧಿಗೆ ಚಾಲನೆ ನೀಡಿದ ಕಲ್ಯಾಣದ ಪ್ರಧಾನಿ ಬಸವಣ್ಣನವರು ಕಲ್ಯಾಣದ ಪ್ರಜೆಗಳ ಸವಾಲುಗಳನ್ನು ಆಲಿಸಲು ಸಾಮಾಜಿಕ ನ್ಯಾಯದ ಪರುಷಕಟ್ಟೆಯನ್ನು ಸ್ಥಾಪಿಸಿದರು. ಅಹವಾಲು ಕೇಳುವುದಕ್ಕಾಗಿ ಕೂಡುವ ಧರ್ಮದರ್ಶನ ಕಟ್ಟೆಗೆ ಪರಶು ಕಟ್ಟೆಯಿಂದ ಕರೆದರು.
ಬಸವಧರ್ಮವು ಮೂಲತಃ ಮಾನವ ವಿಮೋಚನೆಯ ಚಳುವಳಿಯಾಗಿ ರೂಪುಗೊಂಡು ಲಿಂಗವಂತ ಧರ್ಮವಾಯಿತು. ಬಸವಧರ್ಮದಲ್ಲಿ ಸ್ವರ್ಗ-ನರಕ, ಪುಣ್ಯ ,ಪಾಪ, ಪುನರ್ಜನ್ಮ ಮೋಕ್ಷ ಮತ್ತು ಇವೆಲ್ಲವುಗಳ ತಾಯಿಬೇರಾದ ಕರ್ಮಸಿದ್ಧಾಂತಗಳಿಲ್ಲ.
ಬಸವಣ್ಣನವರು ವೈದಿಕ ವ್ಯವಸ್ಥೆಯ ಎಲ್ಲವನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಹೊಸ ಮಾನವೀಯ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಬಹುದೇವೋಪಾಸನೆ ಪರ್ಯಾಯವಾಗಿ ಏಕದೇವೋಪಾಸನೆ, ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಮಂದಿರಕ್ಕೆ ಪರ್ಯಾಯವಾಗಿ ಅನುಭವ ಮಂಟಪ, ಮಠಕ್ಕೆ ಪರ್ಯಾಯವಾಗಿ ಮಹಾಮನೆ..
ವರ್ಣ,ಜಾತಿ,ಮೇಲು-ಕೀಳು, ಕಷ್ಟ-ಸುಖ,ಹೆಣ್ಣು-ಗಂಡು ಹೀಗೆ ಇವೆಲ್ಲದರ ನಿರ್ಧಾರ ಮಾಡುವುದು ಕರ್ಮಸಿದ್ದಾಂತವೇ ಆಗಿದೆ. ನಮ್ಮ ಬದುಕಿನ ಆಗುಹೋಗುಗಳಿಗೆಲ್ಲಾ ಅದೇ ಕಾರಣವಾಗಿದೆ ಎಂಬ ಭ್ರಮೆ ಇದೆ. ಜನಸಮುದಾಯವನ್ನು ದುರ್ಬಲಗೊಳಿಸುವ ಪಂಚಾಂಗ, ಶನಿಕಾಟ ಮತ್ತು ಮೂಢನಂಬಿಕೆಗಳನ್ನು ಬಸವಾದಿ ಶರಣರು ಪ್ರಬಲವಾಗಿ ವಿರೋಧಿಸಿದ್ದರು.
ಮಾನವರನ್ನು ವಿಚಾರವಾದಕ್ಕೆಳೆದು ಅವರ ವ್ಯಕ್ತಿತ್ವ ವಿಕಸನ ಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು. ವೈದಿಕ ವ್ಯವಸ್ಥೆ ನಿರ್ಮಿಸಿದ ಜಾತಿ, ವರ್ಣಗಳ ಕಟ್ಟಳೆಗಳನ್ನು ತೆಗೆದುಹಾಕಿ, ಕಾಯಕ ಜೀವಿಗಳಿಗೆ ಜಾತಿ ಮತ್ತು ಅಸ್ಪೃಶ್ಯತೆಯ ಮೂಲಕ ಹಾಕಿದ್ದ ನಿಗೂಢ ಆರ್ಥಿಕ ದಿಗ್ಬಂಧನವನ್ನು ಕಿತ್ತೆಸೆಯುವುದೇ ಧ್ಯೇಯವಾಗಿತ್ತು.