15 May 2021

ಕ್ರಾಂತಿಕಾರಿ ಬಸವಣ್ಣ

ಬಸವಣ್ಣನವರ ಬಗ್ಗೆ ನಾವೆಲ್ಲರೂ ಪುಸ್ತಕಗಳನ್ನು, ಅಂಕಣಗಳನ್ನು ಓದಿರುತ್ತೇವೆ. ರಂಜಾನ್ ದರ್ಗಾ ಅವರು ಬರೆದ ಬಸವಣ್ಣ ಮತ್ತು ಅಂಬೇಡ್ಕರ್ ಎಂಬ ಪುಸ್ತಕದಲ್ಲಿ ಬಸವಣ್ಣನವರ ಕೆಲ ವಿಚಾರಗಳನ್ನು, ಕೆಲಸಗಳನ್ನು ಇವತ್ತಿನ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಸಮೀಕರಿಸಿ ಬರೆದ ಒಂದು ಅಧ್ಯಾಯ ಸಿಗುತ್ತದೆ. ಅದರಲ್ಲಿನ ಕೆಲ ಪ್ರಮುಖ ಅಂಶಗಳು ಹೀಗಿವೆ.

Image

"ದೇಶದ ಮೊದಲ ಏಕದೇವೋಪಾಸನಾ ಧರ್ಮ"

ಬಹುದೇವೋಪಾಸನೆಯ ಸನಾತನ ಧರ್ಮ, ತೀರ್ಥಂಕರರ ಜೈನ ಧರ್ಮ ಆಜ್ನೇಯವಾದಿ ಬೌದ್ಧ ಧರ್ಮ ಮತ್ತು ಆದಿವಾಸಿಗಳ ವಿವಿಧ ಸಂಪ್ರದಾಯಗಳು ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ವಿವಿಧ ಜೀವನವಿಧಾನ ಗಳಿಂದ ಕೂಡಿದ ಸಮಾಜಗಳನ್ನು ಸೃಷ್ಟಿಸಿದ್ದರೂ ಏಕದೇವೋಪಾಸನೆಯ ಧರ್ಮದ ಸ್ಥಾಪನೆಯಾಗಿರಲಿಲ್ಲ.
ಭಾರತದ ಮೊದಲ ಏಕದೇವೋಪಾಸನೆಯ ಧರ್ಮವಾದ ಲಿಂಗವಂತ ಧರ್ಮ ಕನ್ನಡ ನಾಡಿನಲ್ಲಿ 12ನೇ ಶತಮಾನದಲ್ಲಿ ಜನ್ಮತಾಳಿತು. ಕನ್ನಡವನ್ನು ಧರ್ಮದ, ದರ್ಶನದ, ಶಾಸ್ತ್ರದ, ಕಾಯಕಜೀವಿಗಳ ಸಾಹಿತ್ಯದ ಮತ್ತು ಚಳವಳಿಯ ಭಾಷೆಯಾಗಿ ರೂಪಿಸಿದ ಕೀರ್ತಿ 12ನೇ ಶತಮಾನದ ಶರಣ ಸಂಕುಲಕ್ಕೆ ಸಲ್ಲುತ್ತದೆ.

"ಶರಣಸಂಕುಲ"

ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದ ಗಳಿಂದ ಕೂಡಿದ ಸಮಾಜದಿಂದ ಜನಸಮುದಾಯವನ್ನು ಎತ್ತಿ ಸರ್ವ ವೇದಗಳನ್ನು ನಿರಾಕರಿಸುವ ಶರಣಸಂಕುಲವೆಂಬ ವಿಶಿಷ್ಟ ಸಮಾಜವನ್ನು ಬಸವಾದಿ ಶರಣರು ರೂಪಿಸಿದರು.
ಸಂಕುಲ ಎಂಬ ಪದದಲ್ಲಿ ಕುಲ ಬೇದ ವಿರುವುದಿಲ್ಲ. ಸರ್ವ ಸಮ್ಮತವೇ ಸಂಕುಲದ ಜೀವಾಳವಾಗಿದೆ. ಶರಣಸಂಕುಲದಲ್ಲಿ ಎರಡು ವಿಶೇಷ ಪದಗಳನ್ನು ಕಾಣಬಹುದು. ಒಕ್ಕ ಮಿಕ್ಕ ಮತ್ತು ಶಿವನ ಸೊಮ್ಮು. ಶರಣ ಸಂಕುಲಕ್ಕೆ ಕೊಟ್ಟು ಉಳಿದದ್ಕಕ್ಕೆ 'ಒಕ್ಕಮಿಕ್ಕ' ಎಂದರೆ, 'ಶಿವನ ಸೊಮ್ಮು' ಎಂದರೆ ಸಾಮಾಜಿಕ ನಿಧಿ ಎಂಬರ್ಥವಿದೆ.

"ಸಾಮಾಜಿಕ ನಿಧಿ"

ಶರಣಸಂಕುಲದಲ್ಲಿ ಯಾರು ಆರ್ಥಿಕ ಸಮಸ್ಯೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಬಸವಣ್ಣನವರು ಶಿವನಿಧಿಯನ್ನು ಸ್ಥಾಪಿಸಿದರು.ದೇವರ ಪ್ರತೀಕವಾದ ಸಕಲಜೀವಾತ್ಮರ ಸೇವೆಗೆ ದಾಸೋಹ ಎಂದು ಕರೆದರು. ಯೋಗ್ಯಉತ್ಪಾದನೆ,ಯೋಗ್ಯಬಳಕೆ, ಯೋಗ್ಯ ಸಾಮಾಜಿಕ ವಿತರಣಾ ವ್ಯವಸ್ಥೆ ಇರುವ ದೇಶದಲ್ಲಿ ಹಿಂಸೆ ತಾಂಡವ ಮಾಡುವುದಿಲ್ಲ ಎಂಬ ನಂಬಿಕೆ ಅವರದಾಗಿತ್ತು
ತನು-ಮನ-ಧನ, ಕಾಯಕ-ಪ್ರಸಾದ-ದಾಸೋಹ, ಉತ್ಪಾದನೆ-ಬಳಕೆ-ವಿತರಣೆ, ಗುರು-ಲಿಂಗ-ಜಂಗಮ, ಅರಿವು-ಸಂಸ್ಕಾರ-ಆಚಾರ ಎಂಬುವು ಆಂತರಿಕ ಸಂಬಂಧವನ್ನು ಹೊಂದಿವೆ. ಉದಾಹರಣೆಗೆ ತನುವಿಗೆ ಕಾಯಕದ ಸಂಬಂಧ ಬಂದಾಗ ಅದರ ಉತ್ಪಾದನೆಯಿಂದ ಬರುವ ಅರಿವು ಗುರುವಾಗುವುದು.

"ಕಾಯಕಜೀವಿಗಳ ಸಂಘಟನೆ"

ಜಗತ್ತಿನಲ್ಲಿ ಕಾಯಕಜೀವಿಗಳ ಸಂಘಟನೆ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು. ಅಲ್ಲಿಯವರೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕಾಯಕಜೀವಿಗಳ ಸಂಘಟನೆ ಯಾಗಿರಲಿಲ್ಲ. ಭಾರತದ ಸಮಾಜೋಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಕಾಯಕಜೀವಿಗಳಿಗೆ ಅಲ್ಲಿಯತನಕ ಯಾವುದೇ ಸ್ಥಾನವಿರಲಿಲ್ಲ.
ನಿರಂತರ ಶೋಷಣೆಯ ವಿರುದ್ಧ ಕಾಯಕಜೀವಿಗಳು ಒಂದಾಗುವುದು ಐತಿಹಾಸಿಕ ಅನಿವಾರ್ಯತೆಯಾಗಿದೆ ಎಂಬುದನ್ನು ಮಹಾನುಭಾವಿ ಬಸವಣ್ಣನವರಿಗೆ ಅರಿವಾಗದೆ ಇರಲಿಲ್ಲ. ಬಸವಣ್ಣನವರು ಈ ಅರಿವನ್ನು ಪಡೆದ ಬಗೆ ಅನುಪಮ ವಾಗಿದೆ.

"ದುಡಿಯುವ ಜನರ ಮೊದಲ ಸಿದ್ಧಾಂತ"

ಭಾರತದ ಇತಿಹಾಸದಲ್ಲಿ ಶೂದ್ರರ ಮತ್ತು ಅತಿ ಶೂದ್ರರಾದ ಪಂಚಮರ ಅನುಭವಕ್ಕೆ ಯಾವುದೇ ಬೆಲೆ ಇರಲಿಲ್ಲ. ಶ್ರಮಜೀವಿಗಳ ಅನುಭವದಿಂದ ಸೃಷ್ಟಿಯಾದ ಅನುಭವವೇ ಬಸವಾದ್ವೈತ ಎಂಬ ಸಿದ್ಧಾಂತ. ಈ ಅನುಭಾವವೇ ಶರಣರ ಆಧ್ಯಾತ್ಮ , ತತ್ವಜ್ಞಾನ ಮತ್ತು ದರ್ಶನ.
ವೈದಿಕರ ಅಧ್ಯಾತ್ಮ ಕಾಯಕಜೀವಿಗಳ ಸಿದ್ಧಾಂತದಿಂದ ಬಂದುದಲ್ಲ. ಆದರೆ ಶರಣರ ಅನುಭಾವ ಜನಸಮುದಾಯಗಳ ಕಾಯಕಗಳ ಮೂಲಕ ದಕ್ಕಿದ ಅನುಭವದಿಂದ ರೂಪುಗೊಂಡದ್ದಾಗಿದೆ. ಹೀಗೆ ಬಸವಣ್ಣನವರು ದುಡಿಯುವ ಜನರ ಅನುಭವದ ಆಧಾರದ ಮೇಲೆ ಹೊಸ ಜಗತ್ತಿನ ಸಿದ್ಧಾಂತವನ್ನು ರೂಪಿಸಿದರು.

"ಸಂಸತ್ತಿನ ಮೂಲ ಅನುಭವ ಮಂಟಪ"

ಬಸವಣ್ಣನವರು ಸಂಸತ್ತಿನ ಪರಿಕಲ್ಪನೆಯನ್ನು ಮೂಡಿಸಿದ ಮಹಾಜ್ಞಾನಿ. ಮಹಿಳೆಯರೂ ಸೇರಿದಂತೆ ದಲಿತ ಮೊದಲಾದ ವಿವಿಧ ಸಮಾಜಗಳ ಹಿನ್ನೆಲೆಯಿಂದ ಬಂದ ನಾಯಕರಾದ 770 ಅಮರಗಣಂಗಳ ಮೂಲಕ ಅನುಭವ ಮಂಟಪ ಎಂಬ ಸಮಾಜೋಧಾರ್ಮಿಕ ಸಂಸತ್ತಿನ ಮೂಲಕ ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವ ಕಲ್ಪನೆ ಮೂಡಿಸಿದರು.

"ಸಮೂಹ ನಾಯಕತ್ವ"

ಅಲ್ಲಿಯ ತನಕ ರಾಜರುಗಳು ತುಂಬಿದ ಜಗತ್ತಿನಲ್ಲಿ ಸಮೂಹ ನಾಯಕತ್ವದ ಪ್ರಶ್ನೆಯಿರಲಿಲ್ಲ. ಆದರೆ ಅನುಭವಮಂಟಪದ 770 ಅಮರಗಣಂಗಳೇ ಸಮೂಹ ನಾಯಕರಾದರು. ಇಲ್ಲಿನ ಬಹುಪಾಲು ನಾಯಕರೆಲ್ಲ ವಿವಿಧ ಸಾಮಾಜಿಕ ಸ್ತರಗಳಿಂದ ಬಂದ ಕಾಯಕಜೀವಿಗಳ ಶರಣ ಶರಣೆಯರಾಗಿದ್ದರು. ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು.
ಬದುಕಿನ ಎಲ್ಲಾ ಆಗುಹೋಗುಗಳ ಚರ್ಚೆಯಾಗುತ್ತಿತ್ತು. ಶರಣರ ವಚನಗಳು ಅನುಭವ ಮಂಟಪದ ಮೂಸೆಯಲ್ಲಿ ಹಾಯ್ದು ಹೊರಬರುತ್ತಿದ್ದವು. ಅಂದರೆ 770 ಅಮರಗಣಂಗಳ ಒಪ್ಪಿಗೆ ಪಡೆದು ಮಸೂದೆಗಳು ಕಾಯ್ದೆಗಳಾಗುವ ಹಾಗೆ ವಚನಗಳು ಹೊರಗೆ ಬರುತ್ತಿದ್ದವು. ಈ ಕಾರಣದಿಂದಲೇ ವಚನಗಳು ವಚನ ಸವಿಂದಾನ ಎಂದು ಕರೆಯಿಸಿಕೊಂಡವು.

"ಚಳುವಳಿಯ ಜನಕ"

ಚಳುವಳಿಯ ಪ್ರಜ್ಞೆ ಇಲ್ಲದೆ ಶರಣಸಂಕುಲ ವನ್ನಾಗಲಿ ಅನುಭವ ಮಂಟಪ ವನ್ನಾಗಲಿ ಸೃಷ್ಟಿಸುವುದು ಸಾಧ್ಯವಿಲ್ಲ. ಯುದ್ಧಗಳ ಜಗತ್ತಿನಲ್ಲಿ ಶರಣರ ಸಹಾಯದೊಂದಿಗೆ ಚಳುವಳಿಯನ್ನು ಮೊದಲಿಗೆ ರೂಪಿಸಿದವರು ಬಸವಣ್ಣನವರು. ಈ ಚಳವಳಿಯ ಪ್ರಜ್ಞೆ ಯಿಂದಾಗಿಯೆ ಶರಣರು ಹೊಸ ಮಾನವೀಯ ವ್ಯವಸ್ಥೆ ರೂಪಿಸುವಲ್ಲಿ ತಲ್ಲೀನರಾದರು.

"ತುಳಿತಕ್ಕೊಳಗಾದವರಿಗೆ ಶಿಕ್ಷಣ"

ಬಸವಣ್ಣನವರು ವಯಸ್ಕರ,ಮಹಿಳೆಯರ, ದಲಿತರ,ಹಿಂದುಳಿದವರ ಒಟ್ಟಾರೆ ಕಾಯಕಜೀವಿಗಳ ಶಿಕ್ಷಣದ ಹರಿಕಾರರಾಗಿದ್ದಾರೆ. ಕಾಯಕಜೀವಿಗಳ ಶಿಕ್ಷಣ ಸಂಘಟನೆ & ಹೋರಾಟ, ವಚನ ಚಳುವಳಿಯ ಪ್ರಮುಖ ಅಂಶಗಳಾಗಿವೆ.ಬಸವಣ್ಣನವರು ಜನಸಮುದಾಯ ಸಂಘಟಿತರಾಗುವಂತೆ ಶಿಕ್ಷಣ ನೀಡಿದರು ಮತ್ತು ಹೋರಾಟಕ್ಕೆ ಪೂರಕವಾದ ಶರಣಸಂಕುಲದ ಸಂಘಟಿಸಿಸಿದರು.
ವೈಯಕ್ತಿಕ ಕಾಯಕದ ಅನುಭವದ ಮೂಲಕ ಸಾಮೂಹಿಕ ಅನುಭವದ ಎತ್ತರಕ್ಕೆ ಒಯ್ಯುವ ವಿಶಿಷ್ಟವಾದ ವಚನ ಸಾಹಿತ್ಯ ಪ್ರಕಾರವನ್ನು ಬಸವಣ್ಣನವರು ಸಾಮಾಜೀಕರಣಗೊಳಿಸಿದರು. ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಎಲ್ಲಾ ಕಾಯಕಜೀವಿಗಳು ವಿಶ್ವದಲ್ಲಿ ಮೊದಲ ಬಾರಿಗೆ ಒಂದಾಗಿ ಸೃಷ್ಟಿಸಿದ ವಚನ ಸಾಹಿತ್ಯ, ಜಗತ್ತಿನ ದುಡಿಯುವ ವರ್ಗದ ಮೊದಲ ಸಾಹಿತ್ಯವಾಗಿದೆ.

"ಮಾನವ ಹಕ್ಕುಗಳ ಪ್ರತಿಪಾದಕ"

1948 ಡಿಸೆಂಬರ್ 10ರಂದು ವಿಶ್ವಸಂಸ್ಥೆ ಘೋಷಿಸಿದ ಮಾನವ ಹಕ್ಕುಗಳಲ್ಲಿನ ಎಲ್ಲಾ 30 ಅಂಶಗಳು ಬಸವಣ್ಣನವರ ವಚನಗಳಲ್ಲಿವೆ. ಬಸವಣ್ಣನವರು 12ನೇ ಶತಮಾನದಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆ ಮಾಡುವುದರ ಮೂಲಕ ಸರ್ವೋದಯದ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ.
ಬಸವಧರ್ಮದಲ್ಲಿ ಇಷ್ಟಲಿಂಗ ಧರಿಸಿದ ದಾಸೀಪುತ್ರರು, ವೇಶ್ಯಾಪುತ್ರರು ಮತ್ತು ರಾಜಪುತ್ರರು ಉಳಿದವರ ಹಾಗೆ ಸಮಾನ ಸ್ಥಾನಮಾನ ಮತ್ತು ಮರ್ಯಾದೆ ಯೋಗ್ಯರಾಗುತ್ತಾರೆ

"ಸಾಮಾಜಿಕ ನ್ಯಾಯದ ಪರುಷಕಟ್ಟೆ'

ಶರಣರ ಸಂಕುಲ ದೊಳಗೆ ವಿಶ್ವದ ಮೊದಲ ಸಾಮಾಜಿಕ ನಿಧಿಗೆ ಚಾಲನೆ ನೀಡಿದ ಕಲ್ಯಾಣದ ಪ್ರಧಾನಿ ಬಸವಣ್ಣನವರು ಕಲ್ಯಾಣದ ಪ್ರಜೆಗಳ ಸವಾಲುಗಳನ್ನು ಆಲಿಸಲು ಸಾಮಾಜಿಕ ನ್ಯಾಯದ ಪರುಷಕಟ್ಟೆಯನ್ನು ಸ್ಥಾಪಿಸಿದರು. ಅಹವಾಲು ಕೇಳುವುದಕ್ಕಾಗಿ ಕೂಡುವ ಧರ್ಮದರ್ಶನ ಕಟ್ಟೆಗೆ ಪರಶು ಕಟ್ಟೆಯಿಂದ ಕರೆದರು.
"ಸ್ವರ್ಗ-ನರಕ ಗಳಿಲ್ಲದ ಧರ್ಮ"
ಬಸವಧರ್ಮವು ಮೂಲತಃ ಮಾನವ ವಿಮೋಚನೆಯ ಚಳುವಳಿಯಾಗಿ ರೂಪುಗೊಂಡು ಲಿಂಗವಂತ ಧರ್ಮವಾಯಿತು. ಬಸವಧರ್ಮದಲ್ಲಿ ಸ್ವರ್ಗ-ನರಕ, ಪುಣ್ಯ ,ಪಾಪ, ಪುನರ್ಜನ್ಮ ಮೋಕ್ಷ ಮತ್ತು ಇವೆಲ್ಲವುಗಳ ತಾಯಿಬೇರಾದ ಕರ್ಮಸಿದ್ಧಾಂತಗಳಿಲ್ಲ.
ದಯೆಯೇ ಧರ್ಮದ ಮೂಲವಾಗಿದೆ.ಈ ಧರ್ಮದಲ್ಲಿ ದೇವರು ದಯೆಯ ರೂಪದಲ್ಲಿದ್ದಾನೆ. ದಯೆಯ ಮೂರ್ತಿ ಮಾಡಲಿಕ್ಕಾಗದು, ದಯೆಗೆ ಗುಡಿ ಕಟ್ಟಲಾಗದು. ದಯೆ ಎಂಬ ದೇವರಿಗೆ ನಮ್ಮ ದೇಹವೇ ದೇವಾಲಯವಾಗಿದೆ. ಜೀವಕಾರುಣ್ಯದಿಂದ ಕೂಡಿದ ಸಂವೇದನಾಶೀಲ ಮನುಷ್ಯರು ಮಾತ್ರ ತಮ್ಮ ಭಾವದಲ್ಲಿ ದೇವರನ್ನು ಕಾಣಬಲ್ಲರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬಸವಧರ್ಮದಲ್ಲಿ ನಂಬಲಾಗಿದೆ. ಈ ಧರ್ಮದಲ್ಲಿ ಇರುವುದು ಕಾಯಕ ಸಿದ್ಧಾಂತ. ಕರ್ಮಸಿದ್ದಾಂತಕ್ಕೆ ಇಲ್ಲಿ ಯಾವ ಬೆಲೆಯೂ ಇಲ್ಲ. ದೇವರು ದಯಾ ರೂಪದಲ್ಲಿ ನಮ್ಮೊಳಗೆ ಇರುವುದರಿಂದ ಬಸವಧರ್ಮದಲ್ಲಿ ಮಂದಿರ, ಮೂರ್ತಿ ಮತ್ತು ಮೂರ್ತಿಪೂಜೆ ಇಲ್ಲ, ಮಠೀಯ ವ್ಯವಸ್ಥೆ ಇಲ್ಲ. ಸ್ವಾಮಿಗಳಿಲ್ಲ.

"ಪರ್ಯಾಯ ವ್ಯವಸ್ಥೆ "

ಬಸವಣ್ಣನವರು ವೈದಿಕ ವ್ಯವಸ್ಥೆಯ ಎಲ್ಲವನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಹೊಸ ಮಾನವೀಯ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಬಹುದೇವೋಪಾಸನೆ ಪರ್ಯಾಯವಾಗಿ ಏಕದೇವೋಪಾಸನೆ, ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಮಂದಿರಕ್ಕೆ ಪರ್ಯಾಯವಾಗಿ ಅನುಭವ ಮಂಟಪ, ಮಠಕ್ಕೆ ಪರ್ಯಾಯವಾಗಿ ಮಹಾಮನೆ..
ಸ್ವಾಮಿಗೆ ಪರ್ಯಾಯವಾಗಿ ತತ್ವ ಜಂಗಮ, ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ, ಜಾತಿ ಭೇದ ಸಮಾಜಕ್ಕೆ ಪರ್ಯಾಯವಾಗಿ ಜಾತಿಸಂಕರ ಸಮಾಜ ಮುಂತಾದವು ಬಸವಣ್ಣನವರ ಪರ್ಯಾಯ ವ್ಯವಸ್ಥೆ ಅಂಶಗಳಾಗಿವೆ.

"ಮೂಢನಂಬಿಕೆಗೆ ವಿರೋಧ"

ವರ್ಣ,ಜಾತಿ,ಮೇಲು-ಕೀಳು, ಕಷ್ಟ-ಸುಖ,ಹೆಣ್ಣು-ಗಂಡು ಹೀಗೆ ಇವೆಲ್ಲದರ ನಿರ್ಧಾರ ಮಾಡುವುದು ಕರ್ಮಸಿದ್ದಾಂತವೇ ಆಗಿದೆ. ನಮ್ಮ ಬದುಕಿನ ಆಗುಹೋಗುಗಳಿಗೆಲ್ಲಾ ಅದೇ ಕಾರಣವಾಗಿದೆ ಎಂಬ ಭ್ರಮೆ ಇದೆ. ಜನಸಮುದಾಯವನ್ನು ದುರ್ಬಲಗೊಳಿಸುವ ಪಂಚಾಂಗ, ಶನಿಕಾಟ ಮತ್ತು ಮೂಢನಂಬಿಕೆಗಳನ್ನು ಬಸವಾದಿ ಶರಣರು ಪ್ರಬಲವಾಗಿ ವಿರೋಧಿಸಿದ್ದರು.

"ವ್ಯಕ್ತಿತ್ವ ವಿಕಸನ"

ಮಾನವರನ್ನು ವಿಚಾರವಾದಕ್ಕೆಳೆದು ಅವರ ವ್ಯಕ್ತಿತ್ವ ವಿಕಸನ ಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು. ವೈದಿಕ ವ್ಯವಸ್ಥೆ ನಿರ್ಮಿಸಿದ ಜಾತಿ, ವರ್ಣಗಳ ಕಟ್ಟಳೆಗಳನ್ನು ತೆಗೆದುಹಾಕಿ, ಕಾಯಕ ಜೀವಿಗಳಿಗೆ ಜಾತಿ ಮತ್ತು ಅಸ್ಪೃಶ್ಯತೆಯ ಮೂಲಕ ಹಾಕಿದ್ದ ನಿಗೂಢ ಆರ್ಥಿಕ ದಿಗ್ಬಂಧನವನ್ನು ಕಿತ್ತೆಸೆಯುವುದೇ ಧ್ಯೇಯವಾಗಿತ್ತು.
@kodlady
Get Kannada Audio Books here
close