1 Jul 2021

ಕಾವೇರಿ ಹರಿದು ಬಂದ ದಾರಿ | Books on Kaveri river | Kannada ebook free download

 ದಕ್ಷಿಣ ಭಾರತದ ಸಾಂಸ್ಕೃತಿಕ ತೊಟ್ಟಿಲಾಗಿರುವ ಕಾವೇರಿ ತನ್ನ ಪಾತ್ರದುದ್ದಕ್ಕೂ ನೆಲವನ್ನು ಸಸ್ಯಶ್ಯಾಮಲೆಯನ್ನಾಗಿಸಿದೆ. ವಿಶಿಷ್ಟ ಜೀವಸಂಪನ್ಮೂಲವನ್ನು ಪೋಷಿಸಿದೆ, ಸಹಸ್ರಾರು ವರ್ಷಗಳಲ್ಲಿ ಕಾವೇರಿ ತನ್ನ ಬದುಕನ್ನೇ ಬದಲಾಯಿಸಿರುವ ವೈಜ್ಞಾನಿಕ ಸತ್ಯ ಕಲ್ಪನೆಯ ಕಥೆಗಿಂತಲೂ ರೋಮಾಂಚನಕಾರಿ . ಈ ನದಿ ದಡದಲ್ಲಿ ನಮ್ಮೆಲ್ಲ ಧಾರ್ಮಿಕ ನಂಬಿಕೆಗಳು ಗರಿಗಟ್ಟಿವೆ; ಪುರಾಣ ಪುಣ್ಯಕಥೆಗಳು ಅರಳಿವೆ; ಪೈರುಪಚ್ಚೆ ನಳನಳಿಸಿದೆ. ಇದು ಕೇವಲ ನೀರುಣಿಸುವ ಜಲರಾಶಿಯಲ್ಲ; ಜನಜೀವನದ ಉಸಿರು. ಭಾವಾತಿರೇಕದಿಂದ ಕಾವೇರಿಯನ್ನು ನೋಡುವ ಬದಲು ನಿಸರ್ಗದ ಈ ಸುಂದರ ಸೃಷ್ಟಿಯನ್ನು ಯಥಾವತ್ತಾಗಿ ನೋಡಿದರೂ ಮನಸ್ಸು ಅರಳೀತು. ಕಾವೇರಿ ಹರಿದು ಬಂದ ದಾರಿ ಕೃತಿ ಈ ನದಿಯ ಧಾರ್ಮಿಕ, ಸಾಮಾಜಿಕ , ರಾಜಕೀಯ ಹಿನ್ನೆಲೆಯನ್ನಷ್ಟೇ ಓದುಗರಿಗೆ ಒದಗಿಸುತ್ತಿಲ್ಲ; ಇದೊಂದು ವೈಜ್ಞಾನಿಕ ಸತ್ಯವನ್ನು ತೆರೆದಿಡುವ ಪ್ರಯತ್ನ . .

ಕಾವೇರಿ ಹರಿದು ಬಂದ ದಾರಿ - Download here

ಹರಿಯುವುದೇ ನದಿಯ ಧರ್ಮ , ಅದು ಜೀವಂತವಾಗಿರುವಂತೆ ನೋಡಿಕೊಳ್ಳಬೇಕಾದುದು ನಮ್ಮ ಧರ್ಮ, ಕಾವೇರಿ ನದಿ ಗಂಗಾ ನದಿಯಂತೆ ಮಾಲಿನ್ಯದ ಮಡುವಾಗಲು ಅವಕಾಶ ನೀಡಬಾರದು. ಇಲ್ಲಿ ನಮ್ಮ ಪ್ರಜ್ಞೆ ಎಚ್ಚರಗೊಳ್ಳಬೇಕು. ಈ ನದಿ ಹರಿಯುವ ದಾರಿಯುದ್ದಕ್ಕೂ ಅದು ಸೃಷ್ಟಿಸಿರುವ ಪ್ರೇಕ್ಷಣೀಯ ಸ್ಥಳಗಳ ಯಾದಿ ಮಾಡುತ್ತಾ ಹೋದರೆ ಅದೇ ಒಂದು ಬೃಹತ್ ಕೃತಿಯಾದೀತು. ತಲಕಾಡಿನ ಅದ್ಭುತ ಮರಳರಾಶಿಯ ಬಗ್ಗೆಯಾಗಲಿ, ಮೇಕೆದಾಟಿನ ನಿಸರ್ಗದ ಮನಮೋಹಕ ಶಿಲ್ಪದ ಬಗ್ಗೆಯಾಗಲಿ ನಮ್ಮ ಪ್ರವಾಸೋದ್ಯಮ ದೊಡ್ಡ ಕಾಳಜಿಯನ್ನೇನೂ ತೋರಿಸಿಲ್ಲ. ಅದರಲ್ಲಿನ ಭೂವೈಜ್ಞಾನಿಕ ಸತ್ಯವನ್ನೂ ಪ್ರಚಾರ ಮಾಡಿಲ್ಲ. ಟಿ. ಎಂ . ಸಿ. ಯ ಅಳತೆಗೋಲಿನಿಂದ ಕಾವೇರಿಯನ್ನು ಅಳೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಜೀವನದಿಯಲ್ಲಿ ಮಶೀರ್ ಮೀನುಗಳ ಸಂತತಿ ಕಣ್ಮರೆಯಾಗುತ್ತಿರುವ ಘೋರ ಸತ್ಯವನ್ನೇ ನಾವು ಮನಗಂಡಿಲ್ಲ. ಕಾವೇರಿಯನ್ನು ಭೌಗೋಳಿಕ ಸೀಮಾರೇಖೆಯಿಂದ ಮುಕ್ತಗೊಳಿಸಿ, ಅದು ನಮ್ಮೆಲ್ಲ ಜೀವನಾಡಿ ಎಂದು ಭಾವಿಸಿದರೆ ಮಾತ್ರ ಅಕ್ಕರೆ ಹುಟ್ಟಿತು.

ಈ ಸಂಕಲನದಲ್ಲಿ ಸೇರಿರುವ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಬೆಳಕುಕಂಡಿವೆ. ಮತ್ತೆ ಕೆಲವನ್ನು ಪ್ರಕಟಣೆಗೆಂದೇ ಕೋರಿ ಬರೆಸಲಾಗಿದೆ. ಸುಧಾ,ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳ ಸಂಪಾದಕರು ಆಯಾ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಬಳಸಲು ಅನುಮತಿ ನೀಡಿ ಉಪಕರಿಸಿದ್ದಾರೆ. ಲೇಖಕರು ಕಾಳಜಿವಹಿಸಿ ಬರೆದುಕೊಟ್ಟಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ. 

- ಮೊದಲ ಮುದ್ರಣ ಪ್ರಕಟವಾದ ಹದಿನೈದು ವರ್ಷಗಳ ( 1997) ನಂತರ ಈಗ (2012) ಮರುಮುದ್ರಣವಾಗುತ್ತದೆ. ಈ ಅವಧಿಯಲ್ಲಿ ಕಾವೇರಿ ನದಿಯಲ್ಲಿ ಎಷ್ಟು ಟಿ. ಎಂ . ಸಿ . ನೀರು ಹರಿದಿದೆಯೋ ಲೆಕ್ಕ ಇಟ್ಟವರೇ ಹೇಳಬೇಕು. ಈ ಮರುಮುದ್ರಣದಲ್ಲಿ ಯಾವ ಲೇಖನವನ್ನೂ ಬದಲಾಯಿಸಿಲ್ಲ. ಅದರ ಬದಲು ಅನುಬಂಧದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಇತ್ತೀಚಿಗಿನ ಬೆಳವಣಿಗೆಗಳನ್ನು , ಕೇಂದ್ರ ಸರ್ಕಾರದ ನಿಲುವನ್ನು ಪ್ರಸ್ವವಾಗಿ ದಾಖಲಿಸಿದೆ. ಸಹೃದಯ ಓದುಗರು ಇದನ್ನು ಗಮನಿಸಬೇಕಾಗಿ ಕೋರುವೆ. ಎರಡನೇ ಮುದ್ರಣವನ್ನು ಹೊರತಂದಿರುವ ಕೀರ್ತನ ಪ್ರಕಾಶನದ ಶ್ರೀ ಕುಲಕರ್ಣಿ ಅವರಿಗೆ ಮತ್ತು ಈ ಕೃತಿಯನ್ನು ಮುದ್ರಣಕ್ಕೆ ಸಿದ್ಧಪಡಿಸುವಲ್ಲಿ ನೆರವಾದ ಮಡದಿ ಎ .ಆರ್. ಅನ್ನಪೂರ್ಣಗೆ ನನ್ನ ವಂದನೆಗಳು ಸಲ್ಲುತ್ತವೆ.

- ಟಿ.ಆರ್ ಅನಂತರಾಮು.




close