16 Aug 2018

ರಾಕ್ಷಸ-ತಂಗಡಿ: ಗಿರೀಶ್ ಕಾರ್ನಾಡ್

ಕರಣಂ ಪ್ರಸಾದ್
ನೆನ್ನೆ ಬಿಡುಗಡೆಯಾದ ಗಿರೀಶ್ ಕಾರ್ನಾಡರ ರಚನೆಯ ಹೊಸ ನಾಟಕ "ರಾಕ್ಷಸ-ತಂಗಡಿ"
---
ಇತಿಹಾಸದ ವಸ್ತುವಿಟ್ಟುಕೊಂಡು ಕೃತಿ ರಚಿಸುವುದೆಂದರೆ ಕಾಲಪ್ರವಾಹದಲ್ಲಿ ಕುರುಡನೊಬ್ಬ ಈಜಿದಂತೆ. ಪ್ರವಾಹದಲ್ಲಿ ಈಜುತ್ತಾ ತಮಗೆ ಹಿತವಾದ ಜೊಂಡು, ಜಾಡು, ಕಲ್ಲು, ಪೊಟರೆ ಹಿಡಿದು... ಅದರ ಸುತ್ತಲನ್ನೇ ತಡಕಿ ಪ್ರವಾಹದ ಲಕ್ಷಣದ ಬಗ್ಗೆ ನಮ್ಮ ನಿರ್ಣಯ ಹೇಳುವ ದಯನೀಯತೆಗೆ ನಾವು ಎದುರಾಗುತ್ತೇವೆ. ಏಕೆಂದರೆ ಅಲ್ಲಿ ದೃಷ್ಟಿಜ್ಞಾನ ವಿವೇಕವಿರುವುದಿಲ್ಲ, ಕೇವಲ ಸ್ಪರ್ಶ ಮತ್ತು ಭಾವವೇ ಪ್ರಧಾನವಾಗುತ್ತದೆ. ಈ ನಾಟಕದಲ್ಲಿ ಕಾರ್ನಾಡರು ಕೂಡ ಹಾಗೇ ಮಾಡಿದ್ದಾರೆ. ಇದು ಖಂಡಿತಾ ದೂಷಣೆಯಲ್ಲ... ಇತಿಹಾಸವನ್ನು ಕೊರೆದ ಪಂಡಿತರಲ್ಲೇ ಈ ಮಿತಿ ಇರುವಾಗ, ಅದನ್ನು ಬಳಸುವ ಸೃಷ್ಟಿಶೀಲನೂ ಆ ಮಿತಿಯಲ್ಲೇ ಇರುತ್ತಾನೆ. ಈ ನಾಟಕವು ರಿಚರ್ಡ್ ಎಂ ಈಟೆನ್ ಅವರ "ಎ ಸೊಷಿಯಲ್ ಹಿಸ್ಟರಿ ಆಫ್ ಡೆಕ್ಕನ್" ಮತ್ತು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಬರೆಹವನ್ನು ಋಣವಾಗಿಟ್ಟುಕೊಂಡಿದೆ. ಈ ನಾಟಕವನ್ನು ರೂಪಕ ಮತ್ತು ಧ್ವನಿ - ವಸ್ತುನಿಷ್ಠತೆ ಮತ್ತು ಇತಿಹಾಸ ಎಂದು ಎರಡು ಭಾಗದಲ್ಲಿ ವಿವೇಚಿಸುವುದು ಒಳಿತು.
---
ರೂಪಕ ಮತ್ತು ಧ್ವನಿ
---
ವಿಜಯನಗರ ಧ್ವಂಸವಾಗಿದೆ, ಜನ ಅಲ್ಲಿಂದ ಓಡಿದ್ದಾರೆ, ಸೈನಿಕರು ಅಟ್ಟಾಡಿಸಿ ಬಂಗಾರ-ಬೊಕ್ಕಸಕ್ಕಾಗಿ ಹುಡುಕುತ್ತಿದ್ದಾರೆ. ಈ ಸನ್ನಿವೇಶದ ಅಡಿಯಲ್ಲಿ ನಾಟಕ ಪ್ರಾರಂಭವಾಗುತ್ತದೆ. ನಾಟಕದ ಬಗ್ಗೆ ಕುತೂಹಲ ಕಾಯ್ದಿಟ್ಟುಕೊಳ್ಳಲು ಇದು ವ್ಯವಸ್ಥಿತವಾದ ಪ್ರಾರಂಭ. ರಚನಕಾರರು ಅಲ್ಲಿ ಯಶಸ್ವಿಯಾಗುತ್ತಾರೆ. ನಂತರದ ದೃಶ್ಯದಲ್ಲೇ ರಾಮರಾಯನ ತಮ್ಮ ತಿರುಮಲ ವಿಜಯನಗರ ಕೇಂದ್ರಕ್ಕೆ ಬಂದು ಎಲ್ಲವೂ ಆಗಿ ಹೋಯಿತು, ಶೀಘ್ರ ಇಲ್ಲಿಂದು ಹೊರಡೋಣ ಎಂದು ಸಿಂಹಾಸನದ ರಾಜ ಸದಾಶಿವರಾಯನನ್ನು ಎಬ್ಬಿಸುವ, ಮಾತೆ-ಅತ್ತಿಗೆ ಎಲ್ಲರಿಗೂ ಆದ ದುರಂತವನ್ನು ವಿವರಿಸುವ ದೃಶ್ಯ. ನಿಜದಲ್ಲಿ ಸದಾಶಿವರಾಯ ವಿಜಯನಗರದ ಅಧಿಪತಿ. ಅವನು ತುಳುವ ವಂಶದವ, ರಾಮರಾಯ; ಕೃಷ್ಣದೇವರಾಯನ ಆಳಿಯ, ನಿಜದಲ್ಲಿ ಸಿಂಹಾಸನಧೀಶ ಅಲ್ಲ! ಆದರೆ ಹಿಡಿತ ಇರುವುದು ಅವನ ಕೈಯಲ್ಲೇ. ಅವನು ಅರವೀಡು ವಂಶಕ್ಕೆ ಸೇರಿದವನು. ಈ ಸೂಕ್ಷ್ಮವು ಬಲವಾಗಿ ಬಿಂಬಿತವಾಗಿದೆ. ಈ ಧರ್ಮ ಸಂಕಟವು ರಾಮರಾಯನ ಕೊನೆಯನ್ನು ನಿರ್ಣಯಿಸಿತು ಎಂಬ ಧ್ವನಿ ನಾಟಕದಲ್ಲಿ ಹೊರಡುತ್ತದೆ. ತಾನೂ ರಾಜವಂಶದವ ಎಂದು ಹೇಳಿಕೊಳ್ಳುವ ಹಂಬಲ ಎದ್ದು ಕಲ್ಯಾಣದ ಚಾಲುಕ್ಯನ ವಂಶಜ ಎಂದು ತನ್ನನ್ನೇ ಸಂತೈಸಿಕೊಂಡು ಆ ಕಲ್ಯಾಣದ ಆಸೆಯಲ್ಲೇ ಅಹಮದ್ ನಗರದ ನಿಝಾಮ್’ಶಹನನ್ನು ಎದುರು ಹಾಕಿಕೊಂಡು ಅದನ್ನು ಬಿಜಾಪುರದ ಸುಲ್ತಾನ ಅಲಿ ಆದಿಲ್ ಶಾನಿಗೆ ಕೊಟ್ಟು, ಕೊನೆಗೆ ರಕ್ಕಸ-ತಂಗಡಿ ಯುದ್ಧದಲ್ಲಿ ನಿಝಾಮಶಹನ ಪಾದದಡಿಯೇ ತಲೆ ಉರುಳಿಸಿಕೊಳ್ಳುವ ರಾಮರಾಯನೇ ಕಥಾ ಎಳೆ. ಇಲ್ಲಿ ಕಾರ್ನಾಡರು ಹೇಳಹೊರಟಿರುವುದು ವಿಜಯನಗರದ ಪತನವನ್ನಲ್ಲ, ರಾಮಾರಾಯನ ಪತನವನ್ನ. ಚಮತ್ಕಾರಿ ವಾಕ್ಯಗಳ ಮೂಲಕ ಪಾತ್ರವನ್ನು ಸಿಂಗರಿಸುವ ಕಾರ್ನಾಡರ ಪದ್ಧತಿ ಇಲ್ಲೂ ಮುಂದುವರಿದಿದೆ. "ಬದುಕಲಿಕ್ಕೊಂದು ಭ್ರಾಂತಿ ಬೇಕಾಗಿರತದೆ, ಸುಲ್ತಾನರಿಗೂ ಇರತದೆ, ಪ್ರಜೆಗಳಿಗೂ ಇರತದೆ" ಎಂಬ ಬೇಗಮ್ ಪಾತ್ರದ ಮಾತು ಅದಕ್ಕೆ ಸಾಕ್ಷಿ. "ಕರಾರುಗಳನ್ನು ಓದಿ ತೋರಿಸು, ಎಲ್ಲರು ಕೇಳಲಿ, ಕೇಳಲಿಕ್ಕಷ್ಟೇ, ಚರ್ಚೆಗಾಗಿ ಅಲ್ಲ" ಎಂಬ ರಾಮರಾಯನ ಮಾತು ಇನ್ನೊಂದು ಉದಾಹರಣೆ. ನಾಟಕದ ನಿಜವಾದ ರಸಸ್ಥಾನ ಇರುವುದು ದೃಶ್ಯ-೬ ರಲ್ಲಿ, ರಾಮರಾಯ ನಿಝಾಮಶಹನನ್ನು ಮಾತಲ್ಲೇ ಮಂಡಿಯೂರಿಸಿ ಕಲ್ಯಾಣದ ಕೋಟೆಯ ಬೀಗವನ್ನು ಬಿಜಾಪುರಕ್ಕೆ ಹಸ್ತಾತಂತರಿಸುವ ಸನ್ನಿವೇಶ. ನಾಟಕಕಾರ ಕಾರ್ನಾಡ್ ಅಲ್ಲಿ ಗೆದ್ದುಬಿಡುತ್ತಾರೆ. ಕಾರ್ನಾಡರಿಗೆ ಸ್ಟೇಜ್ ಸೆನ್ಸ್ ಬಹಳವಾಗಿ ಇದೆ ಎಂಬುದು ಅವರು ದೃಶ್ಯ ಪೋಣಿಸುವುದರಲ್ಲೇ ಗೊತ್ತಾಗುತ್ತದೆ. ಇದೇ ಅವರನ್ನು ಇತರ ನಾಟಕಕಾರನಿಂದ ಭಿನ್ನ ಮಾಡುವುದು. ಈ ದೃಶ್ಯವೇಕೆ ಗಟ್ಟಿಯಾದ ರಸಸ್ಥಾನ ಎಂದರೆ - ಅದೇ ರಾಮರಾಯನ ಅಂತ್ಯಕ್ಕೆ ಮುನ್ನುಡಿ. ನಿಝಾಮಶಹ ಆ ದೃಶ್ಯದಲ್ಲಿ ರಾಮರಾಯ ಕೊಟ್ಟ ತಾಂಬೂಲವನ್ನು ನೆಲಕ್ಕೆ ಉಗಿಯುವುದೇ... ಇವನು ಕೊನೆಯಲ್ಲಿ ಅವನ ತಲೆ ಕತ್ತರಿಸುತ್ತಾನೆ ಎಂದು ತಿಳಿಸಿಬಿಡುತ್ತದೆ. ಇದು ಕಾರ್ನಾಡರ ಪ್ರತಿಭೆ, ಒಬ್ಬ ನಟರೂ ಆಗಿರುವುದರಿಂದ ಇದು ಅವರಿಗೆ ಸಿದ್ಧಿಸಿರಬಹುದು(!) ಶೇಕ್ಸಪಿಯರ್ ಉತ್ತಮ ನಾಟಕಕಾರ ಯಾಕೆ ಆದನೆಂದರೆ ಸ್ವತಃ ಆತನೂ ನಟನಾಗಿದ್ದ. ಭಾರತದ ಪ್ರಪ್ರಥಮ ನಾಟಕಕಾರ ಅಶ್ವಘೋಷನಿಗೆ ನಾಟಕ ರಚನೆಯ ಪ್ರತಿಭೆ ನಟನಾಗಿದ್ದರಿಂದಲೇ ಬಂದಿತೇನೋ. ಅಶ್ವಘೋಷ; ರಾಮಾಯಣ ಮತ್ತು ಮಹಾಭಾರತದ ನಂತರ ಬುದ್ಧಚರಿತದಂತ ಮಹಾಕಾವ್ಯ ರಚಿಸಿದ ಮಹಾಕವಿ (ಕಾಳಿದಾಸನಿಗೂ ಮುನ್ನ) ಎಷ್ಟು ಸಂಸ್ಕೃತಿ ರಕ್ಷಕರಿಗೆ ಕನಿಷ್ಠ ಆತನ ಹೆಸರು ತಿಳಿದಿದೆಯೋ ಗೊತ್ತಿಲ್ಲ. ಇರಲಿ... ರಾಕ್ಷಸ-ತಂಗಡಿಯತ್ತ ನೋಡೋಣ. ತಂಗಡಿ ಎಂಬ ದಖ್ಖನಿ ಭಾಷೆಯ ಪದ ಮತ್ತು ರಾಕ್ಷಸ ಎಂಬ ಸಂಸ್ಕೃತ ಶಬ್ಧದ ಸಮಾಗಮ ಇರುವುದರಿಂದ ನಾಟಕದ ಹೆಸರಾಗಿ ಬಳಸಿದೆ ಎಂದು ಕಾರ್ನಾಡರು ಹೇಳಿದ್ದಾರೆ... ಒಪ್ಪುವಂಥದ್ದೇ. ಒಮ್ಮೆ ಕಲೆ ಕರಗತವಾಗಿಬಿಟ್ಟರೆ, ಕಲಾವಿದನು ಪ್ರತಿಭೆಯ ಗಿಲೀಟಿನ ಕೆಳಗೆ ತನ್ನ ಹಿತೋದ್ದೇಶಗಳನ್ನು ಜೋಪಾನವಾಗಿ ದಾಟಿಸಿಬಿಡುತ್ತಾನೆ. ಕಾರ್ನಾಡರು ಅದನ್ನು ಹೆಮ್ಮೆಯಿಂದ ಮಾಡಿದ್ದಾರೆ! ಅಲಿ ಆದಿಲ್ ಶಹನ ಬಗ್ಗೆ ಬರೆಯುವಾಗ ಮಾತು ಮಾತಿಗೂ ಸೂಫಿ ಸಂತರ ಸಂಗೀತ-ದೈವತ್ವ ಲೀನದ ಮಾತುಗಳನ್ನು ಆಡಿಸಿ... ಅಲ್ಲೊಂದು ಸೌಮ್ಯ ಮುಖ ದಾಟಿಸಲು ಪ್ರಯತ್ನಿಸಿದ್ದಾರೆ. ಇದು ಹಿಟ್ಲರನು ಸಸ್ಯಹಾರಿ-ಪ್ರಾಣಿಪ್ರಿಯ ಎಂದು ತೋರಿಸುವಷ್ಟೇ ಹಾಸ್ಯಾಸ್ಪದ. ಪ್ರತಿ ದೃಶ್ಯದಲ್ಲೂ ಹಿಡಿತ ಬಿಟ್ಟುಕೊಡದೆ ನಿರೂಪಣೆ ಸಾಗಿದೆ, ತುಘಲಕ್ ಮತ್ತು ತಲೆದಂಡ ನಾಟಕದ ಜೊತೆಗೆ ತುಲನೆ ಮಾಡುವಷ್ಟು ನಾಟಕ ಪ್ರಬುದ್ಧವಾಗಿದೆ. ಟೀಪೂ ಸುಲ್ತಾನನ ಕನಸು ನಾಟಕದಲ್ಲಿ ಇದ್ದ "ದರ್ದು" ಇಲ್ಲಿ ಕಾಣುವುದಿಲ್ಲ. ರಾಮರಾಯನ ತಲೆಯನ್ನು ಭರ್ಜಿಗೆ ಸಿಕ್ಕಿಸಿ ವಿಜಯನಗರ ಸಾಮ್ರಾಜ್ಯದ ಪತನವನ್ನು ಸಾಂಕೇತಿಕವಾಗಿ ತೋರುವ ಅಂತ್ಯ ದೃಶ್ಯ ನಾಟಕದ ಹಿಡಿತವನ್ನು ತಪ್ಪಿಸಿದೆ... ಥಟಕ್ಕನೇ ಓದು ನಿಂತಂತೆ ಆಗುತ್ತದೆ. ರಂಗದ ಮೇಲೆ ಇದು ಬೇರೆ ರೀತಿ ಕಾಣಬಹುದೇನೋ, ಆದರೆ ಓದಿನಲ್ಲಿ ಅಂತ್ಯ ಕಥಾರಚನೆಗೆ ಪೂರಕವಾಗಿಲ್ಲ. ಅಡಿಪಾಯದ ದೃಶ್ಯಗಳು ಗಟ್ಟಿಯಾಗಿ ನಿಂತಿರುವುದರಿಂದ ಕಳಶ ಬಿದ್ದರೂ ಗೋಪುರಕ್ಕೆ ತೊಂದರೆ ಇಲ್ಲ ಎಂದು ಹೇಳಬಹುದು.
---
ವಸ್ತುನಿಷ್ಠತೆ - ಇತಿಹಾಸ
---
ರಾಮರಾಯ ರಾಜನಾಗಿರಲಿಲ್ಲ, ಯುದ್ಧರಂಗದಲ್ಲಿ ಆತ ಪಲ್ಲಕ್ಕಿಯ ಮೇಲೆ ಕೂತು ಸೈನಿಕರತ್ತ ಉಡುಗೊರೆ ಚೆಲ್ಲುತ್ತಾ "ತದಕಿರಿ, ತುರುಕರಿಗೆ, ತದಕಿರಿ..." ಎನ್ನುತ್ತಾ ತನ್ನ ಭಂಡಧೈರ್ಯದಿಂದ ತಲೆ ಕೊಟ್ಟದ್ದು ಎಲ್ಲವೂ ಇತಿಹಾಸ ಸಮ್ಮತವೇ. ಯುದ್ಧ ನಡೆದದ್ದು ಅಂದಾಜು ೧೫೦ ಕಿ.ಮೀ ದೂರದಲ್ಲಿ, ಹಂಪಿಗೆ ಬರಲು ಸೈನ್ಯಕ್ಕೆ ಮೂರು ದಿನ ಹಿಡಿಯಿತು ಅಷ್ಟರಲ್ಲಿ ತಿರುಮಲಾ, ಸಾವಿರಾರು ಆನೆಯ ಮೇಲೆ ಬೊಕ್ಕಸ ತುಂಬಿಕೊಂಡು ಪೆನಗೊಂಡಕ್ಕೆ ಹೋದ, ಅಲ್ಲಿನ ಸುತ್ತಮುತ್ತಲ ಜನರೇ  ಮೊದಲು ಸಿಕ್ಕ ಸಿಕ್ಕದ್ದು ಲೂಟಿ ಮಾಡಿದರು, ಆಮೇಲೆ ಮಹಮದೀಯ ಸೈನಿಕರು ಹಂಪಿಯ ಮೇಲೆ ದಾಳಿ ಇಟ್ಟದ್ದು ಎಂಬುದೂ ಇತಿಹಾಸಕ್ಕೆ ಬದ್ಧವಾಗಿದೆ. ಆದರೆ ಇವೆಲ್ಲವನ್ನೂ ನಾಟಕ ರಚನೆಯಲ್ಲಿ ತೊಡಗಿಸಿ... ಹಂಪಿಯ ದಾಳಿಯನ್ನು ಮಾತ್ರ ಮರೆಮಾಚಿದ್ದು ಜಾಣತನವೂ ಹೌದು, ಅಕ್ಷಮ್ಯವೂ ಹೌದು. ಯುದ್ಧಕ್ಕೆ ನಾಟಕ ಮುಗಿಯುತ್ತದೆ ಎಂಬ ಸಮಾಧಾನ ಒಪ್ಪಲಾಗದು ಏಕೆಂದರೆ ಮೊದಲ ದೃಶ್ಯದಲ್ಲಿ ಸೂಕ್ಷ್ಮವಾಗಿ ಕಾರ್ನಾಡರು ಗುಹಾವಾಸಿ ಮತ್ತು ಸೈನಿಕರ ನಡುವಿನ ಕಾಳಗವನ್ನು ತೋರಿಸಿದ್ದಾರೆ. ರಿಚರ್ಡ್ ಈಟನ್ ತಮ್ಮ ಪುಸ್ತಕದಲ್ಲಿ ರಾಬರ್ಟ್ ಸೀವೆಲ್ ಅವರನ್ನು ಖಂಡಿಸಿದ್ದಾನೆ ಸರಿ. ತೌಲನಿಕ ಅಭ್ಯಾಸ ಮಾಡುವವರಾದರೆ ರಾಬರ್ಟ್ ಅನ್ನು ಓದಿಕೊಳ್ಳಬೇಕಿತ್ತಲ್ಲವೇ. ಕೇವಲ ರಿಚರ್ಡ್ ಈಟನ್ ಬರೆದದ್ದನ್ನು ಮಾತ್ರ ಕಣ್ಮುಚ್ಚಿ ತೆಗೆದುಕೊಂಡಿರುವುದು ದೊಡ್ಡ ಮಿತಿ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ರಿಚರ್ಡ್ ಈಟನ್ ತನ್ನ ಪುಸ್ತಕದಲ್ಲಿ "Hapless Sadashiva..." (ಎ ಸೊಷಿಯಲ್ ಹಿಸ್ಟರಿ ಆಫ್ ಡೆಕ್ಕನ್ ಪೇಜ್ ನಂ.೧೯೬) ಎಂದು ಬರೆದಿರುವುದನ್ನು "ಹೇಪಲಾಯಿ ಸದಾಶಿವ" ಎಂದು ತದ್ವತ್ ಸಂಭಾಷಣೆಯಲ್ಲಿ ಬಳಸಿದ್ದಾರೆ. ಆಯಿತು ರಾಬರ್ಟ್ ಸೀವೆಲ್ ರಚನಕಾರರ ಹಿತೋದ್ದೇಶಕ್ಕೆ ವಿರುದ್ಧವಾಗಿದ್ದಾನೆ, ಆತನ ದೃಷ್ಟಿ ಖಂಡನೆ ಮಾಡಬಹುದು. ಆದರೆ ಅವನು ಕೊಟ್ಟಿರುವ ವಿವರಣೆಯನ್ನು ನೋಡಬೇಕಿತ್ತಲ್ಲವೇ... "ಹಂಪಿಯ ದಂಡು ಗೋಲಕೊಂಡಾದಲ್ಲಿ ಹಾಯ್ದು ಹೋಗುವಾಗ ಹಳ್ಳಿಗಳನ್ನು ಸುಟ್ಟಿದೆಯಂತೆ, ಮಸೀದಿಗಳನ್ನು ಉಧ್ವಸ್ತಗೊಳಿಸಿದೆಯಂತೆ" ಎಂದು ಪಾತ್ರದ ಕೈಯಲ್ಲಿ ಹೇಳಿಸುವಾಗ ಇರುವ ಸತ್ಯನಿಷ್ಠತೆ, ಹಂಪಿಯ ಬಗ್ಗೆಯೂ ಇರಬೇಕಿತ್ತಲ್ಲವೇ. ಅದನ್ನೂ ನೀಡುತ್ತೇನೆ ಓದಿಕೊಳ್ಳಿ.
"The third day saw the beginning of the end. The victorious Mussulmans had halted on the field of battle for rest and refreshment, but now they had reached the capital, and from that time forward for a space of five months Vijayanagar knew no rest. The enemy had come to destroy, and they carried out their object relentlessly. They slaughtered the people without mercy, broke down the temples and palaces; and wreaked such savage vengeance on the abode of the kings, that, with the exception of a few great stone-built temples and walls, nothing now remains but a heap of ruins to mark the spot where once the stately buildings stood. They demolished the statues, and even succeeded in breaking the limbs of the huge Narasimha monolith. Nothing seemed to escape them..."
(A Forgotten Empire: Vijayanagar; A Contribution to the History of India by Robert Sewell)
ಈ ಹಿಂದೆ ಬಹುಮನಿ ಉತ್ಸವ ಎಂಬ ಮಾತನ್ನು ಸರ್ಕಾರ ಹೇಳಿ, ಅದಕ್ಕೆ ಪ್ರತಿಯಾಗಿ ಬಹುಮನಿ ಸುಲ್ತಾನರು ವಿಜಯನಗರ ಸಾಮ್ರಾಜ್ಯ ಪತನ ಮಾಡಿದರು ಎಂಬ ಪ್ರತಿಕ್ರಿಯೆ ಬಂದಿತ್ತು. ಅದು ಶುದ್ಧ ತಪ್ಪು. ಬಹುಮನಿ ಸುಲ್ತಾನರು ನಿರಂತರ ವಿಜಯನಗರದ ಜೊತೆ ಕಾದಾಟದಲ್ಲಿದ್ದರು ಎಂಬುದು ಸರಿ ಆದರೆ ರಕ್ಕಸ-ತಂಗಡಿ ಯುದ್ಧದ ಹೊತ್ತಿಗೆ ಬಹುಮನಿ ಸಾಮ್ರಾಜ್ಯವೇ ಇರಲಿಲ್ಲ. ಯುದ್ಧ ನಡೆದದ್ದು ೧೫೬೫ರಲ್ಲಿ, ಬಹುಮನಿಯ ಕೊನೆಯ ರಾಜ ಕಲಿಮುಲ್ಲಾ ಶಾನ ಆಡಳಿತ ೧೫೨೫ಕ್ಕೆ ಕೊನೆಯಾಗುತ್ತದೆ. ಇಲ್ಲಿ ವಿಜಯನಗರದ ವಿರುದ್ಧ ಒಟ್ಟಾದವರು ಬಿಜಾಪುರದ ಆದಿಲ್ ಶಾ, ಅಹಮದ್ ನಗರ ನಿಝಾಮ್ ಶಾ, ಗೋಲ್ಕಂಡಾದ ಕುತುಬ್ ಶಾ , ಬೀದರಿನ ಬರೀದ್ ಶಹ, ಬೇರಾರಿನ ಸುಲ್ತಾನರು, ಅಷ್ಟರಲ್ಲಿ ಬಹುಮನಿ ಪ್ರದೇಶ ಇವರುಗಳ ನಡುವೆ ಹಂಚಿಗೋಗಿತ್ತು. ಹಲವು ಪುಸ್ತಕದಲ್ಲಿ ಸಹ ಇದ್ದೇ ತಪ್ಪು ಅಚ್ಚಾಗಿದೆ. ಈ ವಿಷಯದಲ್ಲಿ ಕಾರ್ನಾಡರು ಸ್ಪಷ್ಟವಾಗಿದ್ದಾರೆ, ಪ್ರತಿ ಸುಲ್ತಾನನ ಮನೋಮರ್ಮವನ್ನು, ವಿಜಯನಗರ ಸೋಲಿಸುವ ಒಂದೇ ಕಾರಣಕ್ಕೆ ಮನೆಯ ಹೆಣ್ಣನ್ನು, ಇತರ ಸುಲ್ತಾನರಿಗೆ ಮದುವೆ ಮಾಡಿಕೊಡುವ ಸನ್ನಿವೇಶ ರಸಪೂರ್ಣವಾಗಿದೆ. ರಾಮರಾಯ ಭಂಡಧೈರ್ಯ ಮಾಡಿರದಿದ್ದರೆ ವಿಜಯನಗರ ಉಳಿಯುತಿತ್ತು ಎಂಬುದನ್ನೂ ಕಾರ್ನಾಡರು ದಾಟಿಸುತ್ತಾರೆ. ವಿಜಯನಗರ ಸಾಮ್ರಾಜ್ಯ ಪತನ ಕನ್ನಡ ದೇಶದ ಪತನವೂ ಹೌದು ಎಂಬ ಸೂಕ್ಷ್ಮ ದೃಷ್ಟಿಯನ್ನು ಅವರು ಹೊರಡಿಸಿದ್ದು ನಿಜಕ್ಕೂ ಮೆಚ್ಚಬೇಕಾದ್ದೆ! "ಅಮ್ಮಾ, ಮೂರು ಮಂದಿ ಸುಲ್ತಾನರು ಒಂದಾಗಿ ಕರ್ನಾಟಕ ದೇಶದ ಮೇಲೆ ಏರಿ ಬರತಾ ಇದ್ದಾರೆ" ಎಂದು ರಾಮರಾಯನ ಬಾಯಲ್ಲಿ ಆಡಿಸಿದ್ದು ಗಮನೀಯ. ನಿಜವಾಗಿಯೂ ಅವನು ಹಾಗೆ ಹೇಳಿದ್ದನೋ ಇಲ್ಲವೋ ರಚನಕಾರರಿಗೆ ಆ ದೃಷ್ಟಿ ಸಿಕ್ಕಿರುವುದು ಒಳ್ಳೆಯ ವಿಚಾರ. ವಿಜಯನಗರದ ಧೈರ್ಯ ಎಷ್ಟಿತ್ತೆಂದರೆ ಯುದ್ಧದ ಸಮಯದಲ್ಲಿ ಹಂಪಿಗೆ ಕಾವಲೇ ಇರಲಿಲ್ಲ. ಶತಮಾನದಿಂದ ಯಾರೂ ಅದನ್ನು ಮುಟ್ಟುವ ಧೈರ್ಯ ಮಾಡಿರಲಿಲ್ಲ. ಈ ಅತಿಯಾದ ಆತ್ಮ ವಿಶ್ವಾಸವೇ ಪತನಕ್ಕೆ ಕಾರಣ ಎಂಬುದನ್ನೂ ನಾಟಕ ಹೇಳಿದೆ. ಅದು ಇತಿಹಾಸಕ್ಕೆ ಬದ್ಧವಾಗಿಯೇ ಇದೆ. ಯುದ್ಧಕ್ಕೆ ಹೊರಟಾಗ ರಾಮರಾಯನ ವಯಸ್ಸು ಕೆಲವೆಡೆ ೯೨ ಎಂದಿದೆ, ಕೆಲವೆಡೆ ೭೬ ಎಂದಿದೆ, ೮೨ ಎಂಬ ಬಹು ಪಂಡಿತರ ಅಭಿಪ್ರಾಯವನ್ನು ಕಾರ್ನಾಡರು ಬಳಸಿದ್ದಾರೆ.
---


ಉಪಸಂಹಾರ
---
ಇದೇ ವಸ್ತುವನ್ನು ಕಾರ್ನಾಡರ ಮನೋಧರ್ಮಕ್ಕೆ ವಿರುದ್ಧವಾದ ಧೋರಣೆ ಇರುವವರು ಬರೆದಿದ್ದರೆ ಪಾತ್ರಗಳಿಂದ ಬರುವ ಮಾತು ವ್ಯತ್ಯಾಸವಾಗುತ್ತಿತ್ತು. ಆದರೆ ವಿಜಯನಗರ ಪತನವಾಗಿದ್ದನ್ನು- ಸುಲ್ತಾನರು ಒಟ್ಟಾಗಿ ಎರಗಿದ್ದನು ಯಾವುದೇ ಪಂಥದವರು ಅಲ್ಲಗೆಳೆಯಲು ಸಾಧ್ಯವಿಲ್ಲ ಅಲ್ಲವೇ!? ಒಂದು ರೂಪಕವಾಗಿ ನಾಟಕ ದಷ್ಟಪುಷ್ಟವಾಗಿದೆ, ಅಲ್ಲೊಂದು ರಸಸಂಚಾರವಿದೆ. ತನಗೇ ಬೇಕಾದ್ದು ಮಾತ್ರ ಆಯ್ದ ವಸ್ತುನಿಷ್ಠತೆ ಇಲ್ಲದ ಜಾಣತನವೂ ಇಲ್ಲಿದೆ. ಈ ಮಾತನ್ನು ಹೇಳುತ್ತೇನೆ ಎಂದು ಕಾರ್ನಾಡರು ಮತ್ತು ಇತರರು ಬೇಸರಿಸಿಕೊಳ್ಳಬಾರದು... ಕಾರ್ನಾಡರ ಕನ್ನಡ ಸುಧಾರಿಸಬೇಕು. ಮರಾಠಿ, ಕೊಂಕಣಿ, ಇಂಗ್ಲೀಷು, ಹಿಂದಿ ಆಗಾಗ ಸಂಸ್ಕೃತದ ಜಾಗ್ರತೆ ಎಲ್ಲವನ್ನೂ ವೈಯಕ್ತಿಕವಾಗಿ ಮೈಮೇಲಿ ಹೇರಿಕೊಂಡ ಪರಿಣಾಮವಾಗಿ ಅವರ ಕನ್ನಡ; ಸಾಹಿತ್ಯ ರಚನೆಯಲ್ಲಿ ಹೇಗೇಗೋ ವರ್ತಿಸುತ್ತದೆ. ನಾನು ಒಣ ಮಾತುಗಾರನಲ್ಲ, ಸೃಷ್ಟಿಶೀಲ ಸಾಹಿತ್ಯ ರಚನೆಯ ಕಸುವು ನನ್ನಲ್ಲಿ ಇನ್ನೂ ಇದೆ ಎಂದು ಈ ನಾಟಕದ ಮೂಲಕ ಎಂಭತ್ತರ ಹರೆಯದ ಕಾರ್ನಾಡರು ಸಾಹಿತ್ಯ ವಲಯದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೆ ಎಲ್ಲಾ ರೀತಿಯ ಪ್ರತಿಕ್ರಿಯೆ ನೀಡುವವರು ಕೂಡ ಗಾಳಿಯಲ್ಲಿ ಎಂಜಲು ಉಗುಳದೆ, ಬೌದ್ಧಿಕವಾಗಿ ಪ್ರತಿಕ್ರಿಯಿಸಲಿ ಖಂಡಿಸಲಿ, ಹೊಗಳಲಿ ಎನ್ನಬೇಕಾಗುತ್ತದೆ. ಇಲ್ಲವಾದರೆ ಪ್ರತಿಕ್ರಿಯೆಯ ಮಾತು ಮತ್ತು ವ್ಯಕ್ತಿ ಎರಡೂ "ಚಿಲ್ಲರೆ"ಯಾಗುತ್ತದೆ. ಈ ಐದು ಜನ ಸುಲ್ತಾನರು ತಮ್ಮ ಭೇದ ಮರೆತು ಒಂದಾಗಿ-ಅತಿಯಾದ ವಿಶ್ವಾಸ ಹೊಂದಿರುವ ಒಬ್ಬ ಸಾಮ್ರಾಜ್ಯಾಧಿಪತಿಯನ್ನು ಹೊಸಕಿ ಹಾಕುವ ನಿರೂಪಣೆ ಸಮಕಾಲೀನ ವಿದ್ಯಮಾನಕ್ಕೆ ಹೊಂದುವಂತೆ ಅವರು ರಚಿಸಿದ್ದಾರೋ ಅಥವಾ ಕಾಕತಾಳೀಯವೋ ಆ ವಿರೂಪಾಕ್ಷನೇ ಬಲ್ಲ.

ವಿಡಿಯೋ ಕೃಪೆ: thestate.news

close