18 Aug 2018

ಮಾಧ್ಯಮ ಮತ್ತು ಪಶ್ಚಿಮ ಘಟ್ಟ: ಅವಧಿ ಆರ್ಕೈವ್

ಈ ಪತ್ರಿಕೆಗಳಿಗೆ ತಾವು ‘ಪಶ್ಚಿಮಘಟ್ಟಗಳ ಬಗ್ಗೆ’ ಏನು ಬರೆಯುತ್ತಿದ್ದೇವೆಂಬುದು ಗೊತ್ತಿಲ್ಲ. ಹಾಗಾಗಿ ಅವರನ್ನು ಕ್ಷಮಿಸಿ.


ಸರ್ಕಾರ ಪಶ್ಚಿಮಘಟ್ಟಗಳಲ್ಲಿ “ಸೂಕ್ಷ್ಮ ಪರಿಸರ ಇರುವ ತಾಣ”ಗಳನ್ನು ಗುರುತಿಸಿ ಕರಡು ಅಧಿಸೂಚನೆ ಸಿದ್ಧಪಡಿಸಿದೆ ಎಂಬ ಸುದ್ದಿ ಕರ್ನಾಟಕದ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಶೈಲಿ ನೋಡಿದಾಗ ಒಂದು ವಿಷಯ ಖಚಿತವಾಗಿದೆ. ಅದೇನೆಂದರೆ, ಒಂದೋ ಪತ್ರಿಕೆಗಳ ಸಂಪಾದಕೀಯ ಕೋಣೆಗಳಲ್ಲಿ ತಲೆ ಖಾಲಿ ಮಾಡಿಕೊಂಡವರು ತುಂಬಿದ್ದಾರೆ; ಇಲ್ಲವೇ ಅವರು ಉದ್ದೇಶಪೂರ್ವಕವಾಗಿ ಇನ್ಯಾರದ್ದೋ ಸ್ಟೆನೋಗ್ರಾಫರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ!


ಮಾತೆತ್ತಿದರೆ ಪರಿಸರ ಕಾಳಜಿ ಎನ್ನುವ ಮಾಧ್ಯಮಗಳ ಈ ಆಟ ನೋಡುವುದಕ್ಕೆ ಮಜವಾಗಿದೆಯಾದರೂ, ಇದರ ಅಂತಿಮ ಪರಿಣಾಮಗಳಿಗೆ ನಾನು-ನೀವು ಎಲ್ಲರೂ ಹೊಣೆಗಾರರು ಎಂಬುದನ್ನು ಮರೆಯುವಂತಿಲ್ಲ.


ಆಗಿರುವುದು ಇಷ್ಟು:


ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಹರಡಿರುವ ಪಶ್ಚಿಮಘಟ್ಟಗಳ ಒಟ್ಟು ವಿಸ್ತೀರ್ಣ 1,29,037 ಚದರ ಕಿಲೋಮೀಟರ್ ಗಳು. 1986ರಲ್ಲಿ ರಾಜೀವ್ ಗಾಂಧಿ ಸರ್ಕಾರ ದೇಶದ ಪರಿಸರ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತಂದಿತ್ತಾದರೂ ಅದು ತೀರಾ ಸ್ಥೂಲವಾಗಿದ್ದುದರಿಂದ, ಅದನ್ನು ನಿರ್ದಿಷ್ಟಗೊಳಿಸಲು ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ.


ಆ ಪ್ರಯತ್ನಗಳ ಭಾಗವಾಗಿ, ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲು ಹಲವು ಸಮಿತಿಗಳು ರಚನೆಗೊಂಡವು. ಈ ಪ್ರಕ್ರಿಯೆಯ ಭಾಗವಾಗಿ ಮಾಧವ ಗಾಡ್ಗೀಳ್ ಅವರು 2011ರಲ್ಲಿ ಪರಿಸರದ ಕುರಿತು ತಮಗಿರುವ ಆಸಕ್ತಿಯ ಕಾರಣದಿಂದಾಗಿ ಬಹಳ ಶ್ರಮವಹಿಸಿ ವರದಿಯೊಂದನ್ನು ಸಿದ್ಧಪಡಿಸಿ, ಇಡಿಯ ಪಶ್ಚಿಮ ಘಟ್ಟವನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ, ಯಾವ ಯಾವ ಭಾಗಗಳಲ್ಲಿ ಏನೇನು ಚಟುವಟಿಕೆಗಳನ್ನು ಮಾಡಬಹುದು ಮತ್ತು ಎಲ್ಲಿ ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು.


ಬಹಳ ಪ್ರಾಕ್ಟಿಕಲ್ ಆಗಿದ್ದ ಈ ವರದಿ ಬಂದದ್ದೇ ತಡ, ಕಾಡುಕಳ್ಳರು, ನೆಲಬಾಕರುಗಳಿಗೆ ಚಳಿ ಹತ್ತಿಕೊಂಡಿತು. ವಿಶೇಷವಾಗಿ ಪಶ್ಚಿಮ ಘಟ್ಟಗಳ ಒತ್ತಿಗೇ ಜನಜೀವನವೂ ಬೆರೆತಿರುವ ಕೇರಳ – ಕರ್ನಾಟಕ – ಗೋವಾ – ಮಹಾರಾಷ್ಟ್ರಗಳಲ್ಲಿರುವ ಗಣಿ ಉದ್ಯಮ, ಕಾಡು ಕಡಿದು ನಾಡು ಮಾಡುವ ಉದ್ಯಮ, ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಅಂಡಿಗೆ ಬೆಂಕಿ ಹೊತ್ತಿಕೊಂಡಿತು. ಅವರು ಈ ಪ್ರದೇಶಗಳ ಕೃಷಿಕರು, ಪುಟ್ಟ ವ್ಯವಹಾರಸ್ಥರಲ್ಲಿ ನಿಮ್ಮ ಕಥೆ ಮುಗಿಯಿತು ಎಂಬ ಭಯ ಹುಟ್ಟುಹಾಕತೊಡಗಿದರು. ರಾಜಕೀಯ, ಅಧಿಕಾರಶಾಹಿ, ಧರ್ಮ, ಜಾತಿ, ಕಾಸು ಇತ್ಯಾದಿ “ನವರಸಗಳೂ” ಇದರೊಂದಿಗೆ ಬೆರೆತು ಸಿದ್ಧವಾದ ಹೊಸಪಾಕವೇ “ಕಸ್ತೂರಿ ರಂಗನ್ ಸಮಿತಿ!”


ಗಾಡ್ಗೀಳರ ವರದಿ ವೈಜ್ಞಾನಿಕವಾಗಿಲ್ಲ ಎಂದ ಕಸ್ತೂರಿ ರಂಗನ್ ಸಮಿತಿ 2013ರಲ್ಲಿ “ಸ್ಯಾಟಲೈಟ್ ತಂತ್ರಜ್ಞಾನ” ಬಳಸಿ, ಅರ್ಧಕ್ಕರ್ಧ ಪಶ್ಚಿಮಘಟ್ಟಗಳನ್ನು ಹೊರಗಿಟ್ಟು, ಕೇವಲ 60,000 ಚದರ ಕಿಮೀ. ಭಾಗವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಿ ತನ್ನ ವರದಿ ಸಲ್ಲಿಸಿತು.


ಆದರೆ, ಇಷ್ಟರಲ್ಲಾಗಲೇ ಒತ್ತಡಗಳ ರುಚಿ ಸವಿದಿದ್ದ “ನವರಸ”ದ ರೂವಾರಿಗಳು ಕಸ್ತೂರಿ ರಂಗನ್ ವರದಿ ಬಂದಮೇಲಂತೂ ಇನ್ನಷ್ಟು ತೀವ್ರವಾಗಿ ಅದರ ವಿರುದ್ಧ ಸಂಘಟಿತ ದಾಳಿ ಆರಂಭಿಸಿದರು. ಹಾಗಾಗಿ ಈ ತನಕವೂ ಅದರ ಅನುಷ್ಠಾನ ಸಾಧ್ಯ ಆಗಿಲ್ಲ ಮತ್ತು ಕೇಂದ್ರ ಸರ್ಕಾರ ಈಗ ಈ ದಾಳಿಗೆ ಮಣಿದು, ಪಶ್ಚಿಮಘಟ್ಟಗಳ ಗಾತ್ರವನ್ನು 56,825 ಚದರ ಕಿಮೀಗಳಿಗೆ ಇಳಿಸಲು ಸಿದ್ಧವಾಗಿದೆ.


ಈ ಇಡಿಯ ವಿವಾದಕ್ಕೊಂದು ಅಂತಾರಾಷ್ಟ್ರೀಯ ಮಗ್ಗುಲೂ ಇದ್ದು, ಸರ್ಕಾರಕ್ಕೂ ಕೂಡ ತನ್ನ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಸಾಬೀತುಪಡಿಸಲು ಕೆಲವು ಡೆಡ್ ಲೈನುಗಳನ್ನು ಪಾಲಿಸಬೇಕಿದೆ. (ಅದು ಇನ್ನೊಂದೇ ಪುರಾಣ. ಆ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.) ಹಾಗಾಗಿ ಎಲ್ಲರೂ ಗಡಿಬಿಡಿಬಿದ್ದಿದ್ದಾರೆ.


ಮಾಧ್ಯಮಗಳ ಪಾತ್ರ:


ಈ ಇಡಿಯ ಪ್ರಕರಣದಲ್ಲಿ ಮಾಧ್ಯಮಗಳು ವಹಿಸಿರುವ ಪಾತ್ರ – ನಮ್ಮಲ್ಲಿ ಪತ್ರಿಕೋದ್ಯಮ ತಲುಪಿರುವ ದುರ್ಗತಿಗೆ ದ್ಯೋತಕ ಆಗಿಬಿಟ್ಟಿದೆ. “ಪರಿಸರ ಸೂಕ್ಷ್ಮ” ಪ್ರದೇಶಗಳ ಘೋಷಣೆಯಿಂದ ಆ ಪ್ರದೇಶದಲ್ಲಿ “ಅಭಿವೃದ್ಧಿ ಚಟುವಟಿಕೆಗಳು” ಸ್ಥಗಿತಗೊಳ್ಳಲಿವೆ, ಜನರ ಬದುಕು ಕಷ್ಟವಾಗಲಿದೆ ಎಂಬ ವಾದ ಮುಂದಿಟ್ಟುಕೊಂಡು, ಪಶ್ಚಿಮಘಟ್ಟಗಳನ್ನು ಪೂರ್ಣ ನಾಶಪಡಿಸುವ ಹುನ್ನಾರಗಳಿಗೆ ಮಾಧ್ಯಮಗಳು ಪೂರಕತಾಳ ತಟ್ಟಲಾರಂಭಿಸಿವೆ. ಬಹುತೇಕ ಎಲ್ಲ ಪತ್ರಿಕೆಗಳೂ “ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟದ ಜನತೆಗೆ ಮಾರಕವಾಗಲಿದೆ”ಎಂದೇ ವರದಿ ಮಾಡುತ್ತಿವೆ.


ಪತ್ರಿಕೆಗಳ ಮಾಲಕರ ಹೊಟ್ಟೆಪಾಡು, ಹಿತಾಸಕ್ತಿಗಳನ್ನು ಕಾಪಾಡುವ ಭರದಲ್ಲಿ ಗಾಡ್ಗೀಳ್ ವರದಿಯನ್ನಾಗಲೀ, ಕಸ್ತೂರಿ ರಂಗನ್ ವರದಿಯನ್ನಾಗಲೀ ಸಂಪೂರ್ಣ ಓದಲು ಮರೆತಿರುವ ಮಾಧ್ಯಮಗಳು, ವಾಸ್ತವಗಳನ್ನು ಕಣ್ತೆರೆದು ಕಾಣಲು ಸಿದ್ಧರಿಲ್ಲ. ಅವರಿಗೆ ನೆಲದ ವಾಸ್ತವಗಳಿಗಿಂತ ತಮ್ಮ ಕಿಸೆ ತುಂಬಿಸುವವರ, ಜಾಹೀರಾತುದಾರರ “ಹೊಟ್ಟೆಬಾಕತನ”ದ ತೂಕ ಹೆಚ್ಚಾಗಿದೆ. ಒಟ್ಟಿನಲ್ಲಿ “ಯಾವುದು ಸರಿ, ಯಾವುದು ತಪ್ಪು” ಎಂಬ ಮೂಲಭೂತ ನಿರ್ಧಾರಗಳಲ್ಲೇ ಗೊಂದಲ ಹುಟ್ಟುಹಾಕಿ, ಗೊಬೆಲ್ಸ್ ಹೇಳಿಕೊಟ್ಟದ್ದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಈವತ್ತು ರಾಜಕೀಯ ಪಕ್ಷಭೇದಗಳೂ ಇಲ್ಲ; ಧರ್ಮದ ಹಂಗೂ ಇಲ್ಲ. ಎಲ್ಲರೂ ಒಂದೇ.


ಪರಿಸರದ ಕುರಿತಾದ ಈ ರೀತಿಯ ತಪ್ಪು ನಿರ್ಧಾರಗಳ ಫಲವನ್ನೀಗಾಗಲೇ ದೇಶ ಉಣ್ಣಲಾರಂಭಿಸಿದೆ. ಈ ಸ್ಥಿತಿ ವಿಕೋಪಕ್ಕೆ ಹೋಗಿ, ಜನ ಇದಕ್ಕೆ ಕಾರಣರಾದವರು ಯಾರೆಂಬ ಖಾನೇಶುಮಾರಿ ತೆಗೆಯುವ ದಿನ ಬಂದಾಗ ಹೊತ್ತು ಮೀರಿರುತ್ತದೆ.


ಇಂತಹ ಜನಗಳು, ಮಾಧ್ಯಮಗಳು ನಮ್ಮೆದುರು ಬಂದು “ಪರಿಸರ ಸಂರಕ್ಷಣೆ, ಕಳಕಳಿ” ಎಂದು ಕಥೆ ತೆಗೆದರೆ, ಅವರ ‘ಹಗಲುಯಾಸಕ್ಕೆ (ಹಗಲುವೇಷ – ನಾಟಕ)’ ಹೇಗೆ ಪ್ರತಿಕ್ರಿಯಿಸಬೇಕೆಂಬುದಕ್ಕಾದರೂ  ಸಿದ್ಧರಾಗಿರೋಣ. ಈಗ ಮಾಡಬಹುದಾದದ್ದು ಅಷ್ಟೇ.


close