Wednesday, 22 August 2018

ಅನಂತ ಯಾನ

GET U R ANANTHAMURTHY BOOK PDF : HERE

 ನಿಚ್ಚಳವಾದ ದೃಷ್ಟಿಕೋನ, ಸಣ್ಣದೊಂದು ಹಠ, ಅನ್ನಿಸಿದ್ದನ್ನು ಹೇಳಿಯೇ ತೀರುತ್ತೇನೆ ಎಂಬ ಛಲ, ಧ್ಯಾನಿಸದೇ ಏನನ್ನೂ ಬರೆಯಲಾರೆ ಎಂಬ ವ್ರತ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ ಎಂಬ ವಿನಯ, ಹೊಸ ವಿಚಾರಗಳ ಕಡೆಗೆ ತೆರೆದ ಬಾಗಿಲು, ಕೊಳೆನಿಂತ ನೀರು ಕೂಡ ಯಾವುದೋ ಕಾಲದಲ್ಲಿ ಪವಿತ್ರ ಕಲ್ಯಾಣಿ ಆಗಿತ್ತೇನೋ ಎಂಬ ಗುಮಾನಿ, ಸೂರ್ಯನ ಕುದುರೆಯ ತನ್ಮಯತೆಯಲ್ಲಿ ಎಲ್ಲವನ್ನೂ ನೋಡಬಲ್ಲ ಏಕಾಗ್ರತೆ, ವಾದಕ್ಕೆ ನಿಂತರೆ ಮಾತಲ್ಲೇ ಎದುರಿಗಿದ್ದವರನ್ನು ಕಟ್ಟಿಹಾಕುವ ಚಾಣಾಕ್ಷತನ, ಅದರ ಬೆಂಬಲಕ್ಕೆ ನಿಂತ ಅಪಾರ ಓದು, ಎಲ್ಲವನ್ನೂ ಹೊಸದಾಗಿ ನೋಡಬಲ್ಲ ಒಳನೋಟ, ನೋವಲ್ಲೂ ಕ್ರಿಯಾಶೀಲವಾಗಿದ್ದ ಮನಸ್ಸು.


 ಅವರು ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. ಕನ್ನಡ ಸಾಹಿತ್ಯಲೋಕವನ್ನಷ್ಟೇ ಅಲ್ಲ, ಅವರು ಕನ್ನಡದ ಮನಸ್ಸನ್ನು ಮೀಟಿದವರು. ನೋಡುವ ಕ್ರಮವನ್ನು ಬದಲಾಯಿಸಿದವರು. ಕನ್ನಡಕ್ಕೆ ಹೊಸ ಚಿಂತನೆಯನ್ನು ಕೊಟ್ಟವರು. ವಾಗ್ವಾದಗಳಿಗೆ ಮುಖಾಮುಖೀಯಾದವರು. ಎಲ್ಲವನ್ನೂ ಎದುರಿಸಿ ಏಕಾಂಗಿಯಾಗಿ ನಿಂತವರು. ಅವರಷ್ಟು ವಿವಾದಗಳಿಗೆ ತುತ್ತಾದವರು ಮತ್ತೂಬ್ಬರಿಲ್ಲ. ಅವರನ್ನು ಇಬ್ಬಂದಿತನದ ಮೂರ್ತಿ, ದ್ವಂದ್ವಗಳ ಮೊತ್ತ, ಪದೇ ಪದೇ ನಿಲುವುಗಳನ್ನು
ಬದಲಾಯಿಸುವ ಮಾತುಗಾರ, ಪ್ರಚಾರ ಪ್ರಿಯ ಎಂದು ಕರೆದವರಿದ್ದಾರೆ. ಅವರನ್ನು ವಿರೋಧಿಸಿ ಮಾತಾಡಿದವರಿದ್ದಾರೆ. ಅವರ ಮೇಲೆ ದ್ವೇಷ ಕಾರಿದವರಿದ್ದಾರೆ. ಆದರೆ ಅವರೆಲ್ಲರನ್ನೂ ಅನಂತಮೂರ್ತಿ ಪ್ರಭಾವಿಸಿದ್ದರು.


ನವ್ಯ ಸಾಹಿತ್ಯ ಉದಯವಾಗುತ್ತಿದ್ದ ಕಾಲದಲ್ಲಿ ಅಡಿಗರ ಜೊತೆಗಾರನಾಗಿ ಸಾಹಿತ್ಯ ಜಗತ್ತಿಗೆ ಕಾಲಿಟ್ಟವರು ಅನಂತಮೂರ್ತಿ. ತಮ್ಮ ಉಜ್ವಲವಾದ ಅಧ್ಯಾಪನ ಪ್ರತಿಭೆಯಿಂದ ವಿದ್ಯಾರ್ಥಿಗಳನ್ನು ಸೆಳೆದ ಅನಂತಮೂರ್ತಿ, ನವ್ಯ ಸಾಹಿತ್ಯದ ಹರಿಕಾರರೂ ಹೌದು. ಬರ್ಮಿಂಗ್‌ಹಮ್‌ನಲ್ಲಿ ಕೂತು ಅವರು ಬರೆದ ಮೊದಲ ಕಾದಂಬರಿ ಸಂಸ್ಕಾರ, ಭಾರತೀಯ ಪರಂಪರೆ, ಗೊಡ್ಡುನಂಬಿಕೆ ಮತ್ತು ಆಚರಣೆಗಳನ್ನು ಪ್ರಶ್ನಿಸುತ್ತಲೇ ಅದಮ್ಯ ಸೃಜನಶೀಲತೆಯ ಸೆಲೆಗಳನ್ನು ಹುಡುಕಾಡಿದ ಕೃತಿ. ಅದು ಚಲನಚಿತ್ರವಾಗಿಯೂ ಹೆಸರು ಮಾಡಿತು. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ್ದು ಕೂಡ ಸಂಸ್ಕಾರವೇ. ತಮ್ಮ ಬರಹದ ಮೂಲಕ ನಮ್ಮ ನಂಬಿಕೆ, ಆಚರಣೆ ಮತ್ತು ವ್ಯವಸ್ಥೆಗಳ ಬೇರುಗಳನ್ನು ಕೆದಕುತ್ತಾ, ಚಿಂತನೆಯ ಹೊಸಗಾಳಿಯನ್ನು ಪಸರಿಸುತ್ತಾ ಬಂದ ಅನಂತಮೂರ್ತಿ, 'ಪ್ರಜ್ಞೆ ಮತ್ತು ಪರಿಸರ'ದಂಥ ಪ್ರಬಂಧಗಳ ಮೂಲಕ ಕನ್ನಡ ಸಾರಸ್ವತ ಲೋಕದ ಅಂತಃಸ್ಸತ್ವವನ್ನು ಬಗೆದಿಟ್ಟರು. ಗೋಪಾಲಕೃಷ್ಣ ಅಡಿಗರ ಶ್ರೀರಾಮನವಮಿಯ ದಿವಸ ಕವಿತೆಗೆ ಅವರು ಬರೆದ ವಿಮರ್ಶೆ, ಅಡಿಗರ ಕಾವ್ಯ ಜಗತ್ತನ್ನು ವಿಸ್ತಾರಗೊಳಿಸಿದ್ದೂ ನಿಜವೇ.


ಕನ್ನಡದ ಹಿತ್ತಿಲು ಮತ್ತು ಜಗಲಿ ಎಂಬ ಪರಿಕಲ್ಪನೆ, ಕನ್ನಡದ ಮೂರು ಹಸಿವುಗ ಳಾದ ಅಕ್ಷರದ ಹಸಿವು, ಆಧ್ಯಾತ್ಮಿಕತೆಯ ಹಸಿವು ಮತ್ತು ಸಮಾನತೆಯ ಹಸಿವಿನ ಬಗ್ಗೆ ಅವರು ಪ್ರಸ್ತಾಪಿಸಿದ್ದು, ತಮ್ಮ ಕತೆಗಳ ಮೂಲಕ ಕನ್ನಡ ಕಥಾ ಜಗತ್ತನ್ನು ಶ್ರೀಮಂತಗೊಳಿಸಿದ್ದು, ಕನ್ನಡ ಸಾಹಿತ್ಯಕ್ಕೆ ಹೊಸ ಚಲನೆ ದೊರಕುವಂತೆ ಮಾಡಿದ್ದು, ರುಜುವಾತು ಪತ್ರಿಕೆಯ ಮೂಲಕ ಕನ್ನಡ ಮನಸ್ಸನ್ನು ಜಾಗೃತಗೊಳಿಸಿದ್ದು- ಹೀಗೆ ಅವರ ಸಾಧನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 
ಸಂಪ್ರದಾಯಬದ್ಧ ಪರಿಸರದಲ್ಲಿ ಹುಟ್ಟಿ ಬೆಳೆದ ಅನಂತಮೂರ್ತಿ ಅವರ ಬಹುತೇಕ ಕತೆ, ಕಾದಂಬರಿಗಳ ಭೂಮಿಕೆ ತೀರ್ಥಹಳ್ಳಿ ಮತ್ತು ಆಸುಪಾಸಿನ ಪರಿಸರ. ಅವರ ಇತ್ತೀಚಿನ ಕತೆ ಪಚ್ಚೆ ರೆಸಾರ್ಟು ಹೊಸಗಾಲದ ಅಭಿವೃದ್ಧಿಯ ಅಣಕವನ್ನು ಎತ್ತಿ ತೋರಿಸಿತ್ತು. ಅನೇಕ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದ ಅನಂತಮೂರ್ತಿ ಅವರು, ಗಣಿಗಾರಿಕೆಯ ವಿರುದ್ಧ ಹೋರಾಡಿದರು, ತುಂಗಾಮೂಲವನ್ನು ರಕ್ಷಿಸುವುದಕ್ಕೆ ಚಳವಳಿ ಮಾಡಿದರು, ಅಭಿವೃದ್ಧಿ ನಮಗೆ ಹೇಗೆ ಮಾರಕ ಮತ್ತು ಸರ್ವೋದಯವೇ ಹೇಗೆ ನಮಗೆ ಪೂರಕ ಅನ್ನುವುದನ್ನು ಮತ್ತೆ ಮತ್ತೆ ಪ್ರತಿಪಾದಿಸಿದರು. ಮಹಾತ್ಮಗಾಂಧೀಜಿಯೇ ನಮಗೆ ಆದರ್ಶ ಎಂದು ವಾದಿಸಿದರು. ಗಾಂಧೀವಾದ ಅವರ ಎಲ್ಲಾ ಬರಹಗಳನ್ನೂ ಆವರಿಸಿದ್ದನ್ನು ಕಾಣಬಹುದು.


ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಅನಂತಮೂರ್ತಿ ಅವರು ಕನ್ನಡದ ಮೊದಲ ರಾಜಕೀಯ ಕಾದಂಬರಿ ಬರೆದವರು. ಗೋಪಾಲಗೌಡರ ಬದುಕನ್ನಿಟ್ಟುಕೊಂಡು ಅವರು ಬರೆದ 'ಅವಸ್ಥೆ' ರಾಜಕಾರಣಿಯೊಬ್ಬನ ತವಕ ತಲ್ಲಣಗಳ ದಾಖಲೆಯಂತಿತ್ತು. ಭಾರತೀಪುರ ಕಾದಂಬರಿಯಲ್ಲಿ ಅವರು ಅಸ್ಪೃಶ್ಯತೆಯ ವಿರುದ್ಧ, ಧರ್ಮದ ಸಂಕೇತಗಳ ವಿರುದ್ಧ ವಿಚಾರವಾದಿಯೊಬ್ಬನ ಹೋರಾಟವನ್ನು ದಾಖಲಿಸಿದರು. ಮೊನ್ನೆ ಮೊನ್ನೆ ಚಿಕ್ಕ ಹುಡುಗನ ಹಾಗೆ ಬ್ರೆಕ್ಟ್ ಕವಿತೆಗಳನ್ನು ಅನುವಾದಿಸುತ್ತಾ ಕೂತಿದ್ದರು.


ಎಲ್ಲಾ ಬರಹಗಳಾಚೆಗೂ ಅನಂತಮೂರ್ತಿ ಅವರೊಳಗೊಬ್ಬ ಮುಗ್ಧನಿದ್ದ. ಯಾವತ್ತೂ ಅವರು ಲೆಕ್ಕಾಚಾರ ಹಾಕಿ ಮಾತಾಡಿದವರಲ್ಲ. ಆ ಕ್ಷಣದ ಸತ್ಯ ಅವರನ್ನು ಮಾತಾಡಿಸುತ್ತಿತ್ತು. ಆಗೊಂದು ಈಗೊಂದು ಮಾತಾಡುತ್ತೀರಿ ಅನ್ನುವವರಿಗೆ ಅನಂತಮೂರ್ತಿ ಹೇಳುತ್ತಿದ್ದದ್ದು ಇಷ್ಟೇ: ನಾನು ಮನುಷ್ಯ. ಬೆಳೆಯುತ್ತಾ ಹೋಗುತ್ತೇನೆ, ಬದಲಾಗುತ್ತಾ ಹೋಗುತ್ತೇನೆ, ತಿಳಿಯುತ್ತಾ ಹೋಗುತ್ತೇನೆ. ನನ್ನ ವಿಚಾರಗಳು ಬದಲಾಗುತ್ತಾ ಹೋಗುತ್ತವೆ. ಆದರೆ ನಾನೆಂದೂ ಜೀವವಿರೋಧಿಯಾಗಿರಲಾರೆ. ಸಣ್ಣತನ ತೋರಲಾರೆ.


ಅವರು ಯಾವತ್ತೂ ತಮ್ಮ ಭಾಷಣವನ್ನು ಬರೆದುಕೊಂಡು ಬಂದವರಲ್ಲ. ವೇದಿಕೆ ಏರಿದಾಗ ಮನಸ್ಸಿಗೆ ಏನು ತೋಚುತ್ತದೋ ಅದನ್ನು ಹೇಳುತ್ತಿದ್ದರು. ಮಾತು ತಾನಾಗಿಯೇ ಬರಬೇಕು, ನೆಲದಿಂದ ನೀರು ಉಕ್ಕಿದಂತೆ ಅನ್ನುವುದು ಅವರ ನಂಬಿಕೆಯಾಗಿತ್ತು. ಎಂದೋ ಅನುಭವಿಸಿದ್ದು, ಎಲ್ಲೋ ನೋಡಿದ್ದು, ಯಾವತ್ತೋ ಆಡಿದ್ದು, ಎಂದೋ ಕೇಳಿದ್ದು ಅವರೊಳಗೆ ಕತೆಯಾಗಿ, ಕವಿತೆಯಾಗಿ ರೂಪುಗೊಳ್ಳುತ್ತಿತ್ತು.


ಒಬ್ಬ ಲೇಖಕನ ಸಾವು ಅವನ ನಿಷ್ಕ್ರಿಯತೆಯಲ್ಲಿದೆ. ನಾನು ಹೊಸದಾಗಿ ಏನನ್ನಾದರೂ ಹೇಳಲಿಕ್ಕೆ ಸಾಧ್ಯವಾಗದೇ ಹೋದರೆ ಅದೇ ನನ್ನ ಸಾವು. ಹೀಗೆ ಡಯಾಲಿಸಿಸ್‌ ಮಾಡಿಸ್ಕೋತಾ ಇದ್ದೀನಿ. ಹೊಸ ರಕ್ತ ನನ್ನೊಳಗೆ ಹರಿಯೋದು ನಂಗೆ ಗೊತ್ತಾಗ್ತಾ ಇದೆ. ಅದಕ್ಕಿಂತ ಮುಖ್ಯವಾಗಿ ಹೊಸ ವಿಚಾರಗಳು ನನ್ನೊಳಗೆ ಹರಿಯೋದು ಗೊತ್ತಾಗ್ತಿದೆ. ನನಗೆ ಹೇಳ್ಳೋದಕ್ಕೆ ಬೇಕಾದಷ್ಟಿದೆ. ನಾನು ಆತ್ಮಚರಿತ್ರೆ ಇನ್ನೂ ಬರೆದು ಮುಗಿಸಿಲ್ಲ. ಹೀಗೇ ಯಾರಾದರೂ ದಿನವೂ ಬಂದು ಮಾತಾಡಿಸುತ್ತಾ ಇದ್ದರೆ ನೆಮ್ಮದಿಯಾಗಿರುತ್ತೇನೆ ಅಂದಿದ್ದರು ಅನಂತಮೂರ್ತಿ.


ನೋವನ್ನು ಮೀರಬಲ್ಲ ಸೃಜನಶೀಲತೆ, ಅಬೋಧ ಮುಗ್ಧತೆಯ ಹಡೆವೆಂಕಟನ ತನ್ಮಯತೆಯನ್ನು ಅರ್ಥಮಾಡಿಕೊಳ್ಳಬಲ್ಲ ಹೃದಯವಂತಿಕೆ, ಸೂರ್ಯನ ಕುದುರೆಯೆಂಬ ರೂಪಕವನ್ನು ಸೃಷ್ಟಿಸಬಲ್ಲ ಪ್ರತಿಭೆ, ಸಮಕಾಲೀನವಾಗಬಲ್ಲ ಉತ್ಸಾಹ, ಎಲ್ಲ ಸಣ್ಣತನಗಳನ್ನೂ ಬದುಕುವುದರ ಮೂಲಕವೇ ಮೀರಬಲ್ಲೆ ಎಂಬ ಛಾತಿ ಇಟ್ಟುಕೊಂಡಿದ್ದ ಅನಂತಮೂರ್ತಿ ಹೊರಟು ಹೋಗುವ ಹೊತ್ತಿಗೆ ಬೆಂಗಳೂರಿನಲ್ಲಿ ಭಯಂಕರ ಮಳೆ. ಅದರ ಜೊತೆಗೇ ಅವರದೇ ಸಾಲುಗಳ ಸ್ಮರಣೆ: ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ. ಸುಖ ದುಃಖ ಬಯಕೆ ಭಯ, ಒಂದೆ ಎರಡೆ?

GET U R ANANTHAMURTHY BOOK PDF : HERE

No comments:

Post a Comment